ಬೆಂಗಳೂರು: ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು , ಪೂಜಾ ಸಾಮಗ್ರಿಗಳ ಮಾರಾಟದ ಭರಾಟೆ ಜೋರಾಗಿದೆ. ಕೆ.ಆರ್ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಮಲ್ಲೇಶ್ವರದ ಮಾರುಕಟ್ಟೆ, ಗಾಂಧಿ ಬಜಾರ್ ಸೇರಿದಂತೆ ಮಾರುಕಟ್ಟೆಗಳಲ್ಲಿ ಗ್ರಾಹಕರು ಹೂವು- ಹಣ್ಣು, ಕುಂಬಳಕಾಯಿ, ಕಡಲೇಪುರಿ, ನಿಂಬೆ ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದರು.
ದಸರಾ ಪ್ರಯುಕ್ತ ನಗರದ ಮಾರುಕಟ್ಟೆಗಳಿಗೆ ಆಂಧ್ರ ಹಾಗೂ ತಮಿಳುನಾಡಿನಿಂದ ಮಲ್ಲಿಗೆ, ಮಾರಿಗೋಲ್ಡ್ ಸೇವಂತಿಗೆ, ಐಸ್‌ಬರ್ನ್ ಸೇವಂತಿಗೆ, ಮಲ್ಲೆ, ಜಾಜಿ ಹೂವುಗಳು ಲೋಡ್‌ಗಟ್ಟಲೆ ಬಂದಿವೆ. ಹೂವುಗಳ ಬೆಲೆಯು ಮಂಗಳವಾರದಿಂದಲೇ ಏರಿಕೆ ಕಂಡುಬಂದಿದೆಯಾದರೂ ಹಣ್ಣಿನ ದರ ಸ್ವಲ್ಪಮಟ್ಟಿಗೆ ಕಡಿಮೆ ಇದೆ.
ಮಂಗಳವಾರ ಕೆ.ಆರ್ ಮಾರುಕಟ್ಟೆಯಲ್ಲಿ ಸೇವಂತಿ ಹೂವು ಕೆ.ಜಿ.ಗೆ 200 ರಿಂದ 350 ರೂ. ಇದೆ. ಚೆಂಡು ಹೂವು ಕೆ.ಜಿ.ಗೆ 60 ರಿಂದ 100 ರೂ. ತಲುಪಿದೆ. ಬಹು ಬೇಡಿಕೆಯ ಸೇವಂತಿ ಹೂವು, ಚೆಂಡು ಹೂವುಗಳ ಬೆಲೆ ಬುಧವಾರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಚಂದ್ರಮ್ಮ.
ಈ ಬಾರಿ ಗುರುವಾರ ಆಯುಧಪೂಜೆ ಇರುವುದರೊಂದಿಗೆ ಮುಂದಿನ ಮೂರ್‍ನಾಲ್ಕು ದಿನಗಳು ಸಾಲು ಸಾಲು ರಜೆಗಳಿವೆ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಬುಧವಾರವೇ ಆಯುಧ ಪೂಜೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಆಯುಧಪೂಜೆ ಹಾಗೂ ವಿಜಯದಶಮಿಗೆ ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿಗೆ ಸಿಹಿ ಜೊತೆಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಕಡ್ಲೆಪುರಿಗೆ ಹೆಚ್ಚು ಬೇಡಿಕೆಯಿದ್ದು, ಒಂದು ಸೇರಿಗೆ 10-20 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಸಿಹಿ ತಿನಿಸುಗಳ ದರವೂ ಗ್ರಾಹಕರ ಕೈ ಸುಡಲಿದೆ. ಲಾಡು 300 ರೂ., ಒಣ ಹಣ್ಣುಗಳು (ಡ್ರೈ ಫ್ರೂಟ್ಸ್)ಲಾಡು 500 ರೂ., ಜಿಲೇಬಿ -ಜಹಾಂಗೀರ್ 400 ರೂ. ಬಾದಮ್ ಬರ್ಫಿ 480 ರೂ. ಆಗಿದೆ.
ದರಪಟ್ಟಿ
ಹೂವುಗಳು ಬೆಲೆ ಒಂದು ಕೆ.ಜಿಗೆ (ರೂ.ಗಳಲ್ಲಿ)
-ಮಲ್ಲಿಗೆ 300-400
-ಕಾಕಡ 350-400
-ಮಲ್ಲೆ 300-350
-ಚೆಂಡು ಹೂವು 60-100
-ಕಣಗಲೆ 200-250
-ಸೇವಂತಿಗೆ 200-350
-ಮಾರಿಗೋಲ್ಡ್ ಸೇವಂತಿಗೆ 200-350
-ಕನಕಾಂಬರ 400
-ಸುಗಂಧರಾಜ 120-150
-ಡೈರೆ ಒಂದಕ್ಕೆ 5 ರೂ.
ಹಣ್ಣಿನ ದರಪಟ್ಟಿ
ಹಣ್ಣುಗಳು ದರಪಟ್ಟಿ (ಒಂದು ಕೆಜಿಗೆ ರೂ.ಗಳಲ್ಲಿ)
ಹಾಪ್ಸ್‌ಕಾಮ್ಸ್ ಕೆ.ಆರ್‌ಮಾರುಕಟ್ಟೆ
-ಏಲಕ್ಕಿ ಬಾಳೆ 68 70
-ಪಚ್ಚಾ ಬಾಳೆ 25 28-30
ದ್ರಾಕ್ಷಿ 63 70-75
-ಸೀಬೆಕಾಯಿ 75 80-100
-ಕಿತ್ತಳೆ 65 65-80
-ಫೈನ್‌ಆ್ಯಪಲ್ 67 ಜೋಡಿ 50-60
-ಸೇಬು 118 120
-ದಾಳಿಂಬೆ 167 150-180
-ಮೂಸಂಬಿ — 50-60
-ಕುಂಬಳಕಾಯಿ 150-250 ರೂ.
-ಬಾಳೆಕಂಬ ಜೋಡಿಗೆ 30 ರೂ.
-ನಿಂಬೆಹಣ್ಣು ಒಂದಕ್ಕೆ 4-5 ರೂ.
-ತೆಂಗಿನಕಾಯಿ ಜೋಡಿ 50 ರೂ.