ದಾವಣಗೆರೆ: ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಾಗ ಮಾತ್ರ ಹಣಕಾಸು ಸಂಸ್ಥೆ, ಉದ್ದಿಮೆದಾರ, ಉದ್ದಿಮೆಗಳು ಬೆಳವಣಿಗೆಯಾಗಲು ಸಾಧ್ಯ ಎಂದು ಜಿಲ್ಲಾ ಜವಳಿ ಪಾರ್ಕ್‌ನ ಅಧ್ಯಕ್ಷ ಪ್ರೊ| ವೈ. ವೃಷಭೇಂದ್ರಪ್ಪ ಅಭಿಪ್ರಾಯಪಟ್ಟರು. ಜಿಎಂಐಟಿ ಸಮೀಪದ ಓಶಿಯನ್ ಪಾರ್ಕ್ ಹೋಟೆಲ್‌ನ ಆನೆಕೊಂಡ ಹನುಮಂತಪ್ಪ ಕನ್ವೆನ್‌ಷನ್ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಶಾಖಾ ಕಚೇರಿಯಿಂದ ಹಮ್ಮಿಕೊಂಡಿದ್ದ ಉದ್ದಿಮೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಹಣಕಾಸು ಸಂಸ್ಥೆಗಳು ಉದ್ದಿಮೆದಾರರಿಗೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿವೆ. ಆದರೆ, ಈ ಯೋಜನೆಗಳನ್ನು ಪಡೆಯಲು ಉದ್ದಿಮೆದಾರರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯೋಜನೆಗಳನ್ನು ಸರಳೀಕರಿಸಬೇಕು. ಉದ್ದಿಮೆಗಳು ಆರೋಗ್ಯಕರವಾಗಿದ್ದಾಗ ಹಣಕಾಸು ಸಂಸ್ಥೆಗಳಿಗೆ ಭದ್ರತೆ ಇರುತ್ತದೆ ಎಂದರು.
ಉದ್ದಿಮೆದಾರರು ಆಗಲು ಬಯಸುವ ವಿದ್ಯಾರ್ಥಿಗಳಿಗೆ ನೀಡುವ ಸಾಲ ಸಬ್ಸಿಡಿಯಲ್ಲೂ ತಾರತಮ್ಯವಾಗುತ್ತಿದೆ. ಮೆರಿಟ್‌ನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಸಬ್ಸಿಡಿಯಲ್ಲಿ ಸಾಲ ನೀಡಲಾಗುತ್ತಿದೆ. ಪೇಮೆಂಟ್‌ನಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಸಬ್ಸಿಡಿ ಸಾಲ ನೀಡುತ್ತಿಲ್ಲ. ಆದ್ದರಿಂದ ಸಾಲ ಕೊಡುವ ನೀತಿ ಬದಲಾವಣೆಯಾಗಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ, ಕ್ಲಸ್ಟರ್ ವ್ಯವಸ್ಥೆ ಮಾಡಿಕೊಂಡ ಉದ್ದಿಮೆದಾರರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗುವುದು. ಉದ್ದಿಮೆದಾರರಿಗೆ ಅನೇಕ ಸವಾಲುಗಳಿವೆ. ಆದರೂ ಕ್ರೀಯಾಶೀಲರಾಗಬೇಕಿದೆ. ಆಗ ಮಾತ್ರ ಪ್ರಸ್ತುತ ಪೈಪೋಟಿ ಯುಗದಲ್ಲಿ ಉದ್ದಿಮೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಸಂಸ್ಥೆಗಳು ಕೇವಲ ಕ್ಯಾಂಪಸ್ ಆಯ್ಕೆ ಮಾಡಿದರೆ ಸಾಲದು. ಬದಲಾಗಿ ವಿದ್ಯಾ ಸಂಸ್ಥೆಗಳು ಉದ್ದಿಮೆದಾರರನ್ನು ಸೃಷ್ಟಿಸಬೇಕಿದೆ. ಹೀಗೆ ಸೃಷ್ಟಿಸಿದ ಉದ್ದಿಮೆದಾರರು ತಮ್ಮ ಉದ್ದಿಮೆಯ ಮೂಲಕ ಹಲವಾರು ಜನರಿಗೆ ಉದ್ಯೋಗ ನೀಡುವಂತಾಗುವರು ಎಂದರು.
ಕೆಎಸ್‌ಎಫ್‌ಸಿ ಅಧಿಕಾರಿಗಳಾದ ಎಚ್. ನಾಗರಾಜ್, ಕೆ.ಬಿ. ಮನ್ಮಥನಾಯಕ್, ಆಶ್ರಫ್ ಅಲಿ, ಬಾಬು ಆರ್, ಹಾಲಾನಾಯ್ಕ, ಜಿಲ್ಲಾ ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್ ಇತರೆ ಉದ್ದಿಮೆದಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೆಎಸ್‌ಎಫ್‌ಸಿ ಉದ್ದಿಮೆದಾರರಿಗೆ ಸಣ್ಣ ಘಟಕಗಳನ್ನು ಸ್ಥಾಪಿಸಲು 60 ವರ್ಷಗಳಿಂದ ಸಾಲ ನೀಡುತ್ತಾ ಬಂದಿದೆ. ರಾಜ್ಯದ 1,72,450 ಘಟಕಗಳಿಗೆ 16,108 ಕೋಟಿ ಸಾಲ ಮಂಜೂರು ಮಾಡಿ 25 ಸಾವಿರ ಕೋಟಿ ನಿವ್ವಳ ಲಾಭ ಗಳಿಸಿದೆ. ಹೆಚ್ಚಿನ ಉದ್ದಿಮೆ ಸ್ಥಾಪಿಸಲು ಯುವಕರು ಮತ್ತು ಮಹಿಳೆಯರು ಮುಂದೆ ಬರಲಿ ಎಂಬ ಉದ್ದೇಶದಿಂದ ಶೇ.75 ರಷ್ಟು ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ.
•ಶಿವಾನಂದ ಎಸ್. ಪಾಟೀಲ್ ಪ್ರಧಾನ ವ್ಯವಸ್ಥಾಪಕರು, ಕೆಎಸ್‌ಎಫ್‌ಸಿ