Advertisement

ವ್ಯಾಪಾರ ಚಟುವಟಿಕೆ ಚೇತರಿಕೆ; ಹಣ್ಣು-ತರಕಾರಿ ಬೆಲೆ ತೀವ್ರ ಏರಿಕೆ ಇಲ್ಲ

09:51 PM Oct 16, 2020 | mahesh |

ಕುಂದಾಪುರ: ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿರುವ ಮಾರುಕಟ್ಟೆ ನವರಾತ್ರಿ ಸಂದರ್ಭ ಇನ್ನಷ್ಟು ಚೇತೋಹಾರಿ ಯಾಗಲಿದೆ ಎಂದು ವ್ಯಾಪಾರಿ ವರ್ಗ ನಂಬಿದೆ. ಈ ಹಿಂದಿನ ವರ್ಷಗಳಲ್ಲಿದ್ದಂತೆ ನವರಾತ್ರಿ ಆರಂಭದ ದಿನಗಳಲ್ಲಿ ಅಂತಹ ದೊಡ್ಡ ಪ್ರಮಾಣದ ಖರೀದಿ
ಪ್ರಕ್ರಿಯೆ ಮಳಿಗೆಗಳಲ್ಲಿ ಕಂಡು ಬಂದಿಲ್ಲ. ಆದರೆ ನವರಾತ್ರಿ ಆರಂಭ ವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಲಿದೆ ಎಂಬ ನಿರೀಕ್ಷೆಯಿದೆ.

Advertisement

ಎಲೆಕ್ಟ್ರಾನಿಕ್ಸ್‌ ಮಳಿಗೆ, ಎಲೆಕ್ಟ್ರಿಕಲ್‌ ಉತ್ಪನ್ನಗಳು, ಪೀಠೊಪಕರಣಗಳ ಖರೀದಿಗೆ ಜನ ಉತ್ಸಾಹ ತೋರಲಿದ್ದಾರೆ ಎಂಬ ಕಾತರ ಇದೆ. ಬಟ್ಟೆ ಮಳಿಗೆಗಳು ಕೂಡ ಹೊಸಬಟ್ಟೆ ಖರೀದಿಗೆ ಗ್ರಾಹಕರ ಆಗಮನವನ್ನು ನಿರೀಕ್ಷಿಸುತ್ತಿವೆ. ಇತ್ತ ತರಕಾರಿ ಅಂಗಡಿಗಳಲ್ಲಿ ತಾಜಾ ತರಕಾರಿಗಳು ಬಂದಿವೆ. ಹಣ್ಣು ಹಂಪಲು ಕೂಡ ಹೆಚ್ಚಾಗಿ ಬರುತ್ತಿವೆ. ವ್ಯಾಪಾರದ ಭರಾಟೆ ತೀರಾ ದೊಡ್ಡ ಪ್ರಮಾಣದಲ್ಲಿ ಇಲ್ಲ. ದರದಲ್ಲೂ ಇಲ್ಲಿ ಅಂತಹ ಏರಿಕೆಯಾಗಿಲ್ಲ. ಸ್ಥಳೀಯ ತರಕಾರಿ ಮಾರುಕಟ್ಟೆಗೆ ಘಟ್ಟದ ತರಕಾರಿ ಕೂಡ ಬರುತ್ತಿರುವ ಕಾರಣ ತರಕಾರಿ ದರ ಏರಿಕೆಯಾಗಿಲ್ಲ.

ಹೂವಿನ ಮಾರುಕಟ್ಟೆಯಲ್ಲಿ ಅಂತಹ
ತೇಜಿ ಕಂಡುಬಂದಿಲ್ಲ. ದೇವಾಲಯ ಗಳಲ್ಲಷ್ಟೇ ಆಚರಣೆ ಮಾಡಿ ಮನೆ ಗಳಲ್ಲಿ ಕಡಿಮೆ ಆಚರಣೆ ಆದರೆ ಹೂವಿನ ಮಾರುಕಟ್ಟೆಯಲ್ಲಿ ಅಂತಹ ಬೇಡಿಕೆ ಬರುವುದಿಲ್ಲ. ಸಾರ್ವಜನಿಕ ಆಚರಣೆಗಳಿದ್ದಷ್ಟೂ ಹೂವಿಗೆ ಬೇಡಿಕೆ ಇರುತ್ತದೆ. ಆದರೆ ನವರಾತ್ರಿಯ ಕೊನೆಯ ದಿನಗಳಲ್ಲಿ ಹೂವಿಗೆ ಬೇಡಿಕೆ ಹೆಚ್ಚಾಗುತ್ತದೆ. ಆಯುಧ ಪೂಜೆ, ಶಾರದಾ ಪೂಜೆ ಎಂದು ಹೂವಿಗೆ ಬೇಡಿಕೆ ಬರಬಹುದು ಎಂಬ ನಂಬಿಕೆಯ ನಿರೀಕ್ಷೆಯಲ್ಲಿ ಹೂವಿನ ವ್ಯಾಪಾರಿಗಳು ಇದ್ದಾರೆ.

ಕಾರ್ಕಳ: ವ್ಯಾಪಾರ ವಹಿವಾಟು ಹೆಚ್ಚಳ ನಿರೀಕ್ಷೆ
ಕಾರ್ಕಳ: ನವರಾತ್ರಿ ಉತ್ಸವ ಈ ಬಾರಿ ಸರಳವಾಗಿ ಆಚರಣೆ ನಡೆಯಲಿ ದ್ದರೂ, ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆಯಿದೆ. ಹಬ್ಬದ ಹಿಂದಿನ ದಿನವಾದ ಶುಕ್ರವಾರ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ತುಸು ಚೇತರಿಕೆ ಕಂಡಿತು. ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು  ತರಕಾರಿ ಬೆಲೆ ತುಸು ಹೆಚ್ಚಳವಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಹಣ್ಣಿನ ದರಗಳು ಕಿಲೋ ಒಂದಕ್ಕೆ ಹೀಗಿತ್ತು.

ಸೇಬು 130 ರೂ., ದ್ರಾಕ್ಷಿ 90 ರೂ., ಕಿತ್ತಳೆ 80 ರೂ., ಚಿಕ್ಕು 60 ರೂ. ಇತ್ತು. ಸೇವಂತಿಗೆ ಸಾಮಾನ್ಯ ದಿನಗಳಲ್ಲಿ ಮೊಳಕ್ಕೆ 30 ರೂ. ಇದ್ದರೆ, ಶುಕ್ರವಾರ 40 ರೂ.ಗೆ ಏರಿಕೆಯಾಗಿದೆ. ಕಾಕಡ 40 ರೂ., ಮಲ್ಲಿಗೆ  ಚೆಂಡಿಗೆ 280 ರೂ. ದರವಿತ್ತು. ತರಕಾರಿಗಳಲ್ಲಿ ಬೀನ್ಸ್‌ ಕೆ.ಜಿ.ಗೆ 100 ರೂ., ಟೊಮೆಟೋ 50 ರೂ., ಸೌತೆ 40 ರೂ. ತೊಂಡೆಕಾಯಿ 100 ರೂ., ಅಲಸಂಡೆ 90 ರೂ., ಬೆಂಡೆಗೆ 80 ರೂ. ದರವಿತ್ತು. ತರಕಾರಿಗೆ
ಬೇಡಿಕೆ ಇರುವುದರಿಂದ ಗ್ರಾಮೀಣ ಭಾಗದಿಂದ ಹೆಚ್ಚು ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

Advertisement

ಲಾಕ್‌ಡೌನ್‌ ವೇಳೆ ತರಕಾರಿ ಬೆಳೆಸಲಾಗಿದ್ದು ಹಬ್ಬದ ದಿನಗಳಲ್ಲಿ ಇವುಗಳಿಗೆ ಬೇಡಿಕೆ ಲಭಿಸುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ. ಪೇಟೆ, ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಫ‌ಲಪುಷ್ಪ, ತರಕಾರಿ ಮಾರಾಟ ಕೌಂಟರ್‌ಗಳು ಹಬ್ಬದ ಪ್ರಯುಕ್ತ ತೆರೆದುಕೊಂಡಿವೆ. ನಗರದಲ್ಲಿ ಜನರ ಓಡಾಟವೂ  ಕೊಂಚ ಹೆಚ್ಚಾಗಿದೆ.

ಹಬ್ಬದ ನಿಮಿತ್ತ ದೇವಸ್ಥಾನ, ಮನೆಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವುದರಿಂದ ವ್ಯಾಪಾರ ಹೆಚ್ಚಳದ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next