Advertisement

ಬಿ.ಸಿ. ರೋಡ್‌ ಹೊಸ ನಿಲ್ದಾಣ

04:16 PM Jan 07, 2018 | Team Udayavani |

ಬಂಟ್ವಾಳ: ಬಿ.ಸಿ. ರೋಡ್‌ನ‌ಲ್ಲಿ ನಿರ್ಮಾಣ ವಾಗಿರುವ ನೂತನ ಸರಕಾರಿ ಬಸ್‌ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌
ಗಳು ಬರುತ್ತವೆ ನಿಜ, ಆದರೆ ಪ್ರಯಾಣಿಕರು ಬರುತ್ತಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ. ಇಲ್ಲಿ ಬಂದು ಬಸ್‌ ಏರಲು ನಿಲ್ದಾಣದಲ್ಲಿ ಸಾಕಷ್ಟು ಸೌಕರ್ಯ ಹಾಗೂ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನಷ್ಟು ಸೌಲಭ್ಯ ಬೇಕೆನ್ನುತ್ತಾರೆ ಸ್ಥಳೀಯರು.

Advertisement

ಬಹುತೇಕರು ಫ್ಲೈಓವರ್‌ ಆರಂಭದ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿಯಲ್ಲೇ ಬಸ್‌ ಏರುತ್ತಾರೆ. ಅಲ್ಲಿಂದ 600 ಮೀ. ದೂರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವಿದೆ. ಜನರು ಅಲ್ಲಿಗೆ ಹೋಗುವ ತೊಂದರೆ ತೆಗೆದುಕೊಳ್ಳದೆ ಹೆದ್ದಾರಿಯಲ್ಲೇ ಬಸ್‌ಗೆ ಕೈ ಅಡ್ಡ ಹಿಡಿಯುತ್ತಾರೆ. ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿ ಬಸ್‌ಗಳು ನಿಲ್ಲುವುದರಿಂದ ಜನರಿಗೂ ಅದೇ ಅನುಕೂಲಕರ ನಿಲ್ದಾಣವಾಗಿದೆ. ಅಲ್ಲದೆ, ಬಸ್‌ ನಿಲ್ದಾಣಕ್ಕೆ ಬರುವ ಬಸ್‌ಗಳೆಲ್ಲ ಅಲ್ಲಲ್ಲಿ ನಿಂತು ಬೇಗನೆ ತಲುಪುವುದಿಲ್ಲ ಎಂಬ ಅಭಿಪ್ರಾಯ ಜನ ಸಾಮಾನ್ಯರಲ್ಲಿ ಇದೆ.

ಇಲ್ಲಿನ ಕೆಎಸ್‌ಆರ್‌ಟಿಸಿ ನಿಲ್ದಾಣ ಹೆದ್ದಾರಿ ಬದಿಯಿಂದ 100 ಮೀ. ಒಳಗಿದೆ. ನಿಲ್ದಾಣಕ್ಕೆ ಬಂದು, ಬಸ್‌ ಗಾಗಿ ಕಾಯುವ ಕಷ್ಟವನ್ನು ಯಾರೂ ಬಯಸುವುದಿಲ್ಲ. ಹೆದ್ದಾರಿ ಪಕ್ಕದಲ್ಲಿ ನಿಂತರೆ ನೇರ ಪ್ರಯಾಣಕ್ಕೆ ಖಾಸಗಿ ಅಥವಾ ಸಾರಿಗೆ ಸಂಸ್ಥೆ ಬಸ್‌ ಸಿಗುತ್ತದೆ ಎಂಬ ಇರಾದೆಯೂ ಜನರಲ್ಲಿದೆ.

ಆಗಬೇಕಾದ ಕೆಲಸ
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಮಂಗಳೂರಿನಿಂದ ಬಸ್‌ಗಳು ಬರುವಂತೆ ನಿಲ್ದಾಣದ ಎದುರಿಗೇ ರಸ್ತೆಯನ್ನು ವಿಭಾಗಿಸಿ ನೀಡುವ ವ್ಯವಸ್ಥೆ ಆಗಬೇಕು. ಅಥವಾ ಬಿ.ಸಿ. ರೋಡ್‌ ಖಾಸಗಿ ಸರ್ವಿಸ್‌ ನಿಲ್ದಾಣಕ್ಕೆ ಬರುವ ಮೊದಲೇ ಸರ್ವಿಸ್‌ ರಸ್ತೆಯಲ್ಲಿ ಹೋಗಿ ಬರುವ ಕ್ರಮ ಆಗಬೇಕು. ನಿಲ್ದಾಣದ ಎದುರಿಗೆ ಬ್ರಹ್ಮಶ್ರೀ ನಾರಾಯಣ ಗುರು
ವೃತ್ತದ ಮಾದರಿಯ ದೀರ್ಘ‌ ವೃತ್ತವನ್ನು ರಚಿಸಿ ವಾಹನ ಸಂಚಾರಕ್ಕೆ ಸರಾಗ ವ್ಯವಸ್ಥೆ ಕಲ್ಪಿಸಬೇಕು. ಸರ್ವಿಸ್‌ ರಸ್ತೆಯಲ್ಲಿ ಜಮೀನು ಪರಿಹಾರ ಪಡೆದರೂ ತೆರವು ಮಾಡದಿರುವ ಕೆಲವು ಕಟ್ಟಡಗಳನ್ನು ತೆಗೆಸುವ ಕ್ರಮ ಅಗತ್ಯ
ವಾಗಿದೆ. ಮುಖ್ಯವಾಗಿ ಬಿ.ಸಿ. ರೋಡ್‌ನ‌ ಸರ್ವೀಸ್‌ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಬಸ್‌, ಕಾರು, ಸರ್ವಿಸ್‌ ವಾಹನಗಳು, ಅಟೋರಿಕ್ಷಾಗಳು ಎಲ್ಲೆಂದರಲ್ಲಿ ಜನರನ್ನು ಹತ್ತಿಸಿ, ಇಳಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಬೇಕು. ಸುದೀರ್ಘ‌ ಅವಧಿಯಿಂದ ಅಟೋರಿಕ್ಷಾ ಸಂಘಟನೆ, ಇತರ ವಾಹನಗಳ ಸಂಘಟನೆಗಳು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಗಾಗಿ ಮನವಿ ಮಾಡುತ್ತಿವೆ.

ಸಮಸ್ಯೆಗಳು
ಬಸ್‌ ನಿಲ್ದಾಣ 2017ರ ಅ. 22ರಂದು ಲೋಕಾರ್ಪಣೆ ಆಗಿದೆ. ಆದರೆ, ನಿಲ್ದಾಣಕ್ಕೆ ಹೋಗುವ ಸಂಪರ್ಕ ರಸ್ತೆಯೇ ಇನ್ನೂ ಪೂರ್ಣವಾಗಿಲ್ಲ. ಮಂಗಳೂರಿಂದ ಬರುವ ಬಸ್‌ಗಳು ನೂತನ ಬಸ್‌ ನಿಲ್ದಾಣಕ್ಕೆ ಬರುವುದಾದರೆ 550 ಮೀ. ಸುತ್ತು ಬಳಸಿ ಕ್ರಮಿಸಬೇಕು. ಟ್ರಾಫಿಕ್‌ ಇರುವುದರಿಂದ ಒಮ್ಮೊಮ್ಮೆ ಅದಕ್ಕಾಗಿಯೇ ಸಾಕಷ್ಟು ವೇಳೆ ಹಿಡಿಯುತ್ತದೆ. ಇಲ್ಲಿನ ಸರ್ವಿಸ್‌ ರಸ್ತೆ ಕಾಂಕ್ರೀಟ್‌ ಹೆಸರಿನಲ್ಲಿ ನಾಲ್ಕು ತಿಂಗಳು ಕಳೆದಿದೆ. ಕಾಮಗಾರಿ ಪೂರ್ಣ ಆಗಲು ಇನ್ನೆಷ್ಟು ಸಮಯ ಬೇಕು ಎಂಬುದು ನಿರ್ದಿಷ್ಟವಾಗಿ ತಿಳಿದಿಲ್ಲ.

Advertisement

ನಿಲ್ದಾಣವು ಉದ್ಘಾಟನೆಯ ಬಳಿಕದ ಮೂರು ತಿಂಗಳಲ್ಲೇ ನೈರ್ಮಲ್ಯದ ಕೊರತೆ ಎದುರಿಸುತ್ತಿದೆ. ಇಲ್ಲಿಗೆ ಯಾವ
ಬಸ್‌ ಬರುತ್ತದೆ ಹೋಗುತ್ತದೆ ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲ. ಕೆಲವು ಬಸ್‌ ಗಳು ಬರುತ್ತವೆ, ಬಹಳಷ್ಟು ಬರುವುದೇ
ಇಲ್ಲ. ಜನರಿಗೆ ಮಾಹಿತಿ ನೀಡುವ ಪಬ್ಲಿಕ್‌ ಅನೌನ್ಸ್‌ಮೆಂಟ್‌ ಸಿಸ್ಟಂ ಅಳವಡಿಸಿಲ್ಲ. ನಿಲ್ದಾಣದಲ್ಲಿ ಪಬ್ಲಿಕ್‌ ಅನೌನ್ಸ್‌ಮೆಂಟ್‌ ವ್ಯವಸ್ಥೆ ಸದ್ಯಕ್ಕೆ ಅಳವಡಿಸಿಲ್ಲ. ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಾಗ ಆ ಸೌಕರ್ಯವನ್ನು ಅಳವಡಿಸುವುದಕ್ಕೆ ಅವಕಾಶವಿದೆ.
ಇಸ್ಮಾಯಿಲ್‌ ಪಿ.,
   ಡಿಪೋ ಮ್ಯಾನೇಜರ್‌, ಬಿ.ಸಿ. ರೋಡ್‌ ಘಟಕ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next