ಉಡುಪಿ: ಜಿಲ್ಲೆಯ ಎಲ್ಲಾ ಕೋವಿಡ್-19 ಸೋಂಕಿತರು ಗುಣಮುಖವಾಗಿದ್ದು, ಕಳೆದ ಹಲವು ವಾರಗಳಿಂದ ಜಿಲ್ಲೆ ಸೋಂಕು ಮುಕ್ತವಾಗಿರುವ ಕಾರಣ ಹಸಿರು ವಲಯದಲ್ಲಿದೆ. ಈ ಕಾರಣದಿಂದ ಬಸ್ ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ನಾಳೆಯಿಂದ ( ಬುಧವಾರ) ಬಸ್ ಸಂಚಾರವನ್ನು ಆರಂಭಿಸಲು ಅವಕಾಶ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಬಸ್ ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು, ಸ್ವಲ್ಪ ಪ್ರಮಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ರಸ್ತೆಗೆ ಇಳಿಯಲಿದೆ ಎಂದಿದ್ದಾರೆ.
ಆದರೆ ಬಸ್ ಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹಾಕುವಂತಿಲ್ಲ. ಹೆಚ್ಚಿನ ಪ್ರಯಾಣಿಕರನ್ನು ತುಂಬಿದರೆ ಕ್ರಮ ಕೈಗೊಳ್ಳುತ್ತೇವೆ. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಖಾಸಗಿ ಬಸ್ ಇಳಿಯಲ್ಲ: ಜಿಲ್ಲಾಧಿಕಾರಿಗಳು ಅವಕಾಶ ನೀಡಿದರೂ ಸದ್ಯ ಖಾಸಗಿ ಬಸ್ ಗಳು ರಸ್ತೆಗಿಳಿಯುವುದು ಕಷ್ಟ. ಯಾಕೆಂದರೆ ಬಸ್ ನಲ್ಲಿ ಅರ್ಧಕ್ಕಿಂತ ಹೆಚ್ಚು ಜನರನ್ನು ಹಾಕುವಂತಿಲ್ಲ. ದರವನ್ನೂ ಏರಿಸುವಂತಿಲ್ಲ. ಇದರಿಂದ ಬಸ್ ಮಾಲೀಕರು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ನಾಳೆಯೇ ಬಸ್ ಓಡಾಟ ಆರಂಭ ಕಷ್ಟ .
ಈ ಬಗ್ಗೆ ಉದಯವಾಣಿ ಜೊತೆಗೆ ಮಾತನಾಡಿದ ಉಡುಪಿ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಸುರೇಶ್ ಕುಯಿಲಾಡಿ ಅವರು, ಅರ್ಧದಷ್ಟು ಪ್ರಮಾಣದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು, ಹಿಂದಿನ ದರದಲ್ಲೆ ಬಸ್ ಸಂಚಾರ ಆರಂಭಿಸುವುದು ಕಷ್ಟ. ಬಸ್ ಮಾಲಕರಿಗೆ ಇದರಿಂದ ನಷ್ಟವಾಗುತ್ತದೆ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮನಕ್ಕೆ ಬರುತ್ತೇವೆ. ಆದರೆ ನಾಳೆ ಸಿಟಿ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎಂದಿದ್ದಾರೆ.