ವಿಜಯಪುರ : ಲಾಕ್ ಡೌನ್ ನಿರ್ಬಂಧದ ಸುದೀರ್ಘ ಎರಡು ತಿಂಗಳ ಬಳಿಕ ನಗರದಲ್ಲಿ ಕೇಂದ್ರ ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಗೊಂಡಿದೆ. ಆದರೆ ಜನರು ಅಷ್ಟೇನು ಉತ್ಸಾಹ ತೋರಿದಂತೆ ಕಂಡುಬರಲಿಲ್ಲ.
ಬೆಳಿಗ್ಗೆ 7-20 ಗೆ ಕೇಂದ್ರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ನಗರಕ್ಕೆ 30 ಪ್ರಯಾಣಿಕರೊಂದಿಗೆ ಕೆಎ 33 ಎಫ್ 0437 ಸಂಖ್ಯೆಯ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿತು.
ಇದರೊಂದಿಗೆ ವಿಜಯಪುರ ಜಿಲ್ಲಾ ಕೇಂದ್ರದಿಂದ ಅಂತರ ಜಿಲ್ಲೆ ಹಾಗೂ ಜಿಲ್ಲೆಯ ಆಂತರಿಕ ಸಾರಿಗೆಗೆ ಚಾಲನೆ ಪಡೆದಿದೆ.
ಬಸ್ ಸಂಚಾರ ಆರಂಭಗೊಂಡರೂ ನಿಲ್ದಾಣದಲ್ಲಿ ಬೆಳಿಗ್ಗೆ ಪ್ರಯಾಣಿಕರ ಸಂದಣಿ ಹೆಚ್ಚಾಗಿ ಕಂಡುಬರಲಿಲ್ಲ.
ಪ್ರಯಾಣಕ್ಕೂ ಮುನ್ನ ಎಲ್ಲಾ ಚಾಲಕರಿಗೆ, ಬಸ್ ನಿರ್ವಾಹಕರಿಗೆ ಥರ್ಮಲ್ ಟೆಸ್ಟ್ ನಡೆಸಲಾಯಿತು. ಬಸ್ ಹತ್ತುವ ಎಲ್ಲಾ ಪ್ರಯಾಣಿಕರು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಬಸ್ ನಲ್ಲಿ 30ಕ್ಕಿಂತ ಹೆಚ್ಚು ಜನರನ್ನು ಹಾಕುವಂತಿಲ್ಲ. ಅಂತರ ಕಾಯ್ದುಕೊಂಡು ಪ್ರಯಾಣಿಸಬೇಕು ಎಂಬ ಷರತ್ತುಗಳನ್ನು ರಾಜ್ಯಸರಕಾರ ವಿಧಿಸಿದೆ.