Advertisement

ಚುನಾವಣೆಗೆ ಬಸ್‌; ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

12:34 AM May 10, 2023 | Team Udayavani |

ಮಂಗಳೂರು: ಚುನಾವಣೆ ದಿನವಾದ ಮೇ 10ರಂದು ಕರಾವಳಿ ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 300ರಷ್ಟು ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಸುಮಾರು 138 ಖಾಸಗಿ ಬಸ್‌ಗಳು ಚುನಾವಣಾ ಕರ್ತವ್ಯಕ್ಕೆ ತೆರಳಲಿವೆ.

Advertisement

ಮಂಗಳೂರಿನಲ್ಲಿ 34, ಕುಂದಾಪುರ, ಉಡುಪಿ ಯಿಂದ 105, ಪುತ್ತೂರು ವಿಭಾಗದಿಂದ 130 ಬಸ್‌ ಸಂಚಾರ ಕಡಿತಗೊಳ್ಳಲಿದೆ. ಪೊಲೀಸ್‌ ಭದ್ರತೆಗೆಂದು ಈಗಾಗಲೇ ಸುಮಾರು 30ಕ್ಕೂ ಹೆಚ್ಚಿನ ಬಸ್‌ಗಳನ್ನು ನಿಯೋಜಿಸಲಾಗಿದೆ. ಇನ್ನೂ ಸುಮಾರು 20 ರಷ್ಟು ಬಸ್‌ಗಳನ್ನು ನೀಡಲು ನಿಗಮ ನಿರ್ಧರಿಸಿದೆ.

ಅದೇ ರೀತಿ, ಸುಮಾರು 138 ರಷ್ಟು ಮಂಗಳೂರು ನಗರ ದಲ್ಲಿ ಸಂಚರಿಸುವ ಸಿಟಿ/ಸರ್ವೀಸ್‌ ಬಸ್‌ಗಳೂ ಚುನಾವಣಾ ಕೆಲಸಕ್ಕೆ ತೆರಳಲಿವೆ. ಇದೇ ಕಾರಣಕ್ಕೆ ಮೇ 10 ರಂದು ಬಸ್‌ ಸಂಚಾರದಲ್ಲಿ ತೊಡಕು ಉಂಟಾಗುವ ಸಾಧ್ಯತೆ ಇದೆ.
ಧರ್ಮಸ್ಥಳ, ಕಾಸರಗೋಡು ಸಹಿತ ವಿವಿಧೆಡೆ ಗಳಿಗೆ ತೆರಳುವ ಸುಮಾರು 10 ರಿಂದ 15 ಟ್ರಿಪ್‌ ಇರುವ ಕೆಎಸ್ಸಾರ್ಟಿಸಿ ಬಸ್‌ಗಳು, ಬೆಂಗಳೂರು, ಮೈಸೂರು ಮಾರ್ಗದಲ್ಲಿಯೂ ಹೆಚ್ಚಿನ ಟ್ರಿಪ್‌ಗ್ಳಿರುವಲ್ಲಿ ಕೆಲವನ್ನು ಕಡಿತಗೊಳಿಸಿ ಆ ಬಸ್ಸುಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಂದೆರಡು ಟ್ರಿಪ್‌ಗ್ಳಿರುವಲ್ಲಿ ಹೆಚ್ಚಿನ ತೊಂದರೆ ಉಂಟಾಗದಂತೆ ಯೋಜನೆ ರೂಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸನಗಳೆಲ್ಲಾ ಫುಲ್‌
ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳ ಬಹುತೇಕ ಆಸನಗಳು ಭರ್ತಿಯಾಗಿದೆ. ಕೆಎಸ್ಸಾರ್ಟಿಸಿಯಿಂದ ಬಸ್‌ಗಳ ಕೊರತೆ ಇದೆ. ಆದರೂ ಆನ್‌ಲೈನ್‌ನ ಮುಖೇನ ಸೀಟು ಕಾದಿರಿಸಲು ಅವಕಾಶವಿದ್ದು, ಸೀಟು ಕಾದಿರಿಸುವಿಕೆ ಆಧರಿಸಿ ಬಸ್‌ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಆದರೆ, ಖಾಸಗಿ ಬಸ್‌ಗಳು ಹೆಚ್ಚಿನ ಬಸ್‌ಗಳನ್ನು ನಿಯೋಜಿಸುತ್ತಿದ್ದು, ಟಿಕೆಟ್‌ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ. ಅದರಂತೆ ಸುಮಾರು 800 ರಿಂದ 900 ರೂ. ಇದ್ದ ದರ ಸದ್ಯ 2500 ರಿಂದ 3000ಕ್ಕೆ ಏರಿಕೆಯಾಗಿದೆ. ಚುನಾವಣೆಯ ಬಳಿಕ ಎರಡು ದಿನ ರಜೆ ತೆಗೆದುಕೊಂಡರೆ ಬಳಿಕ ಎರಡನೇ ಶನಿವಾರ, ರವಿವಾರ ರಜಾ ಇರುವ ಕಾರಣವೂ ಈ ದರ ಹೆಚ್ಚಳಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ರವಿವಾರವೂ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ.

ವಿಧಾನಸಭಾ ಚುನಾವಣೆ ಮೇ 10ರಂದು ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದ ಸಂಬಂಧ ಸಾಂದರ್ಭಿಕ ಒಪ್ಪಂದದ ಮೇರೆಗೆ ಕೆಎಸ್ಸಾರ್ಟಿಸಿ ಬಸ್‌ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ನಿಗಮದ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.
-ರಾಜೇಶ್‌ ಶೆಟ್ಟಿ , ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next