ಹುಬ್ಬಳ್ಳಿ: ಇಲ್ಲಿನ ಹೊಸೂರನಲ್ಲಿ ನಿರ್ಮಾಣವಾಗುತ್ತಿರುವ ಬಸ್ ಟರ್ಮಿನಲ್ ಅನ್ನು ಸೆಪ್ಟಂಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗುವುದು ಎಂದು ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ತಿಳಿಸಿದರು. ಗುರುವಾರ ನೂತನ ಬಸ್ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ನಂತರ ಮಾತನಾಡಿದರು.
ಈಗಾಗಲೇ ಬಸ್ ನಿಲ್ದಾಣದ ಕಾಮಗಾರಿ ಶೇ.84ರಷ್ಟು ಮುಗಿದಿದೆ. ನಿಲ್ದಾಣದ ಸಂಪೂರ್ಣ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು. ಸುಮಾರು 52 ಕೋಟಿ ರೂ. ವೆಚ್ಚದಲ್ಲಿ 15 ಎಕರೆ 16 ಗುಂಟೆ ವಿಸ್ತಿರ್ಣದಲ್ಲಿ ನಿರ್ಮಿಸುತ್ತಿರುವ ಅತ್ಯಾಧುನಿಕ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸಲಾಗುತ್ತದೆ.
ನಿಲ್ದಾಣದಲ್ಲಿ 22 ಪ್ಲಾಟ್‌ಫಾರಂ ಹಾಗೂ ನಗರ ಸಾರಿಗೆ ಬಸ್ ಗಳಿಗಾಗಿ 6 ಪ್ಲಾಟ್‌ಫಾರಂ ನಿರ್ಮಿಸಲಾಗುತ್ತಿದ್ದು,4 ಹವಾ ನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೋಣೆ, ದ್ವಿಚಕ್ರ ವಾಹನ ಹಾಗೂ ಕಾರುಗಳ ನಿಲುಗಡೆಗೆ ವ್ಯವಸ್ಥೆ, 2 ಎಕ್ಸಲೇಟರ್, 6ಲಿಫ್ಟ್, ಸಬ್‌ವೇ, ಪಕ್ಕದಲ್ಲಿ ಡಿಪೋ, ಐದು ಮಹಡಿಯ ಕಟ್ಟಡ ಹಾಗೂ ಅತ್ಯಾಧುನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ ಎಂದರು.
ನ್ಯಾಯಾಲಯದ ಮುಂಭಾಗದಲ್ಲಿ ಬಸ್ ನಿಲ್ದಾಣದ ಮುಖ್ಯದ್ವಾರ ನಿರ್ಮಿಸಲಾಗುತ್ತಿದ್ದು ಮಹಿಳಾ ವಿದ್ಯಾಪೀಠದ ಮುಂಭಾಗದಿಂದ ಪ್ರಯಾಣಿಕರು ಆಗಮಿಸುವ ವ್ಯವಸ್ಥೆ ಹಾಗೂ ಬಿಆರ್‌ಟಿಎಸ್ ಬಸ್ ಪ್ರಯಾಣಿಕರು ಆಗಮಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ಈಗಾಗಲೇ ಅವಳಿನಗರದಲ್ಲಿರುವ ನೂತನ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ಧಾರವಾಡ ಬಸ್ ನಿಲ್ದಾಣಗಳಲ್ಲಿ ಮೂಲ ಸೌಕರ್ಯ ನೀಡುವಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರ ಅನುಕೂಲ ಹಾಗೂ ಉತ್ತಮ ಪ್ರಯಾಣಕ್ಕಾಗಿ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಬಿಆರ್‌ಟಿಎಸ್ ಆಯುಕ್ತ ಜಿ.ಎಂ.ಹಿರೇಮಠ ಮಾತನಾಡಿ, ಹುಬ್ಬಳ್ಳಿ ಹಾಗೂ ಧಾರವಾಡ ಬಸ್ ನಿಲ್ದಾಣದ ಕಾಮಗಾರಿ ಆಗಸ್ಟ್ ಅಂತ್ಯಕ್ಕೆ ಮುಕ್ತಾಯಗೊಳಿಸುತ್ತೇವೆ.
ಹುಬ್ಬಳ್ಳಿ-ಧಾರವಾಡ ಮಧ್ಯೆ ನಡೆಯುತ್ತಿರುವ ಬಿಆರ್‌ಟಿಎಸ್ ಕಾಮಗಾರಿ ಈಗಾಗಲೇ 22 ಕಿಮೀ ಕಾಮಗಾರಿ ಮುಕ್ತಾಯಗೊಂಡಿದ್ದು ಇನ್ನು ಸ್ವಲ್ಪ ಕಾಮಗಾರಿ ಬಾಕಿ ಇದೆ. ಇನ್ನು ರಸ್ತೆಯಲ್ಲಿ ಬರುವ ದೇವಸ್ಥಾನ ಹಾಗೂ ಮಸೀದಿ, ಮಂದಿರಗಳ ಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದ್ದು ಕಾಮಗಾರಿ ಮುಕ್ತಾಯಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
ಬಿಆರ್‌ಟಿಎಸ್ ಕಾಮಗಾರಿಯಲ್ಲಿ ಬರುವ 31 ಬಸ್ ನಿಲ್ದಾಣಗಳಲ್ಲಿ 5 ಬಸ್ ನಿಲ್ದಾಣ ಬಿಟ್ಟರೆ ಇನ್ನುಳಿದ ನಿಲ್ದಾಣದ ಕಾಮಗಾರಿ ಮುಕ್ತಾಯಗೊಂಡಿದೆ. ಈ ತಿಂಗಳ ಕೊನೆಯಲ್ಲಿ ಪ್ರಾಯೋಗಿಕವಾಗಿ ಸಂಚರಿಸಲು 3 ವೋಲ್Ì ಬಸ್‌ಗಳು ನಗರಕ್ಕೆ ಆಗಮಿಸಲಿವೆ ಎಂದರು. ಬಸವರಾಜ, ವಿವೇಕಾನಂದ ವಿಶ್ವಜ್ಞ, ಶಿವಲಿಂಗಯ್ಯ, ಸಂತೋಷ, ಸುನೀಲ ಅಭ್ಯಂಕರ ಮತ್ತಿತರರಿದ್ದರು.