Advertisement

ಸ್ಮಾರ್ಟ್ ಸಿಟಿಯಾಗುವ ಮೊದಲು ಬಸ್‌ ನಿಲ್ದಾಣಗಳು ಸ್ಮಾರ್ಟ್‌ ಆಗಲಿ

10:00 AM Apr 12, 2018 | |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಲು ಹೊರಟಿರುವ ಮಂಗಳೂರು ನಗರದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಮಾತ್ರ ಹಾಗೇ ಇವೆ. ಅವುಗಳ ಪೈಕಿ ಮುಖ್ಯವಾದದ್ದು ನೂರಾರು ಬಸ್‌ಗಳು ಸಂಚರಿಸುತ್ತಿರುವ ನಗರ ವ್ಯಾಪ್ತಿಯಲ್ಲಿನ
ಬಸ್‌ ನಿಲ್ದಾಣ ಅಥವಾ ತಂಗುದಾಣಗಳ ದುಃಸ್ಥಿತಿ.

Advertisement

ನಗರ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಬಸ್‌ ನಿಲ್ದಾಣ ಅಥವಾ ತಂಗುದಾಣಗಳ ಚಿತ್ರಣ ಮಾತ್ರ ಇನ್ನೂ ಬದಲಾಗಿಲ್ಲ. ಹಂಪನಕಟ್ಟೆ, ಕೆ.ಎಸ್‌. ರಾವ್‌, ಜ್ಯೋತಿ ರಸ್ತೆಯ‌ ಕೆಲವು ನಿಲ್ದಾಣಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿರುತ್ತಾರೆ. ಅವರಿಗೆ ಅಲ್ಲಿ ಕುಳಿತುಕೊಳ್ಳುವುದಕ್ಕೆ ತಂಗುದಾಣ ಬಿಡಿ, ನಿಲ್ಲುವುದಕ್ಕೂ ಸ್ಥಳಾವ ಕಾಶವಿಲ್ಲ. ಜ್ಯೋತಿಯ ತಂಗುದಾಣದಲ್ಲಿ ಹಿಂದೆ ಇದ್ದ ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಸರಿಯಾಗಿಲ್ಲ. ಸಂಜೆ ಶೌಚಾಲಯಗಳಿಗೆ ಬೀಗ ಜಡಿಯಲಾಗುತ್ತಿದೆ.

ಈಗ ಬೇಸಗೆ ಕಾಲ ಬೇರೆ. ಬಿಸಿಲಿನ ತಾಪ, ಸೆಕೆಯ ಕಿರಿಕಿರಿ ಸಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಮಧ್ಯಾಹ್ನದ ಹೊತ್ತು ಬಸ್‌ ಶೆಲ್ಟರ್‌ಗಳೇ ಇಲ್ಲದ ಕಡೆ ಬಸ್‌ಗಾಗಿ ಕಾದು ನಿಲ್ಲುವ ಪ್ರಯಾಣಿಕರ ಪಾಡು ಮತ್ತಷ್ಟು ಶೋಚನೀಯ. ಈ ನಡುವೆ, ಬಸ್‌ ನಿಲ್ದಾಣ ಎಲ್ಲೋ ಇದ್ದರೆ, ಚಾಲಕರು ಬಸ್‌ ಗಳನ್ನು ಮತ್ತೆಲ್ಲೋ ನಿಲ್ಲಿಸಿ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಈ ರೀತಿಯ ಹಲವಾರು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ‘ಸುದಿನ’ವು ನಗರದ ಕೆಲವು ಪ್ರಮುಖ ಬಸ್‌ನಿಲ್ದಾಣಗಳಲ್ಲಿನ ವಾಸ್ತವಾಂಶವನ್ನು ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಿದೆ.

ನಂತೂರಿನ ಬಸ್‌ ನಿಲ್ದಾಣ ಎಲ್ಲಿ?
ನಂತೂರಿನ ಆವೈಜ್ಞಾನಿಕ ಹಾಗೂ ಅಪಾಯಕಾರಿ ವೃತ್ತಕ್ಕೆ ಪರಿಹಾರ ಸೂಚಿಸುವ ಉದ್ದೇಶದಿಂದ ಅಲ್ಲಿ ಕಾಮಗಾರಿ ಸಾಗುತ್ತಿದ್ದರೆ, ಇತ್ತ ಪ್ರಯಾಣಿಕರು ಬಸ್‌ ನಿಲ್ದಾಣವಿಲ್ಲದೆ ಹಲವು ವರ್ಷಗಳಿಂದ ಪರದಾಡುತ್ತಿದ್ದರೂ ಪಾಲಿಕೆ ಗಮನಹರಿಸಿಲ್ಲ. ಸಾಮಾನ್ಯವಾಗಿ ನಂತೂರಿಗೆ ಅಪರಿಚಿತರು ಬಂದರೆ ಬಸ್‌ ನಿಲ್ದಾಣ ಎಲ್ಲಿ? ಎಂದು ಸುತ್ತಲೂ ಹುಡುಕ ಬೇಕಾಗುತ್ತದೆ. ಏಕೆಂದರೆ, ಈ ಪ್ರದೇಶದಲ್ಲಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲದೆ, ಪಕ್ಕದ ರಸ್ತೆ ಮೇಲೆಯೇ ನಿಲ್ಲಿಸಲಾಗುತ್ತಿದೆ. ಇದರಿಂದ ಸದಾ ಟ್ರಾಫಿಕ್‌ ಸಮಸ್ಯೆ, ಜತೆಗೆ ಅಪಘಾತ ಗಳಾಗುವ ಅಪಾಯವೂ ಇದೆ. ನಂತೂರು ವೃತ್ತದ ಬಳಿ ಹೊಸ ಬಸ್‌ ಬೇ, ಸುಗಮ ಸಂಚಾರ ವ್ಯವಸ್ಥೆ (ಫ್ರೀ ಲೆಫ್ಟ್‌) ಹಾಗೂ ಫುಟ್‌ಪಾತ್‌ ನಿರ್ಮಿಸುವ ಚಿಂತನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಪಡೀಲ್‌ನಲ್ಲಿ ರಸ್ತೆಯ ಒಂದು ಬದಿ ಮಾತ್ರ ತಂಗುದಾಣ
ಬೆಂಗಳೂರು, ಬಿ.ಸಿ. ರೋಡ್‌, ಪುತ್ತೂರು ಸಹಿತ ಇನ್ನಿತರ ಪ್ರದೇಶದಿಂದ ಪಂಪ್‌ವೆಲ್‌ ತಲುಪಲು ಪಡೀಲ್‌ ಮಾರ್ಗವಾಗಿಯೇ ಬರಬೇಕು. ಇ‌ಲ್ಲಿ ದಿನಂಪ್ರತಿ ಹಗಲು ರಾತ್ರಿ ಎನ್ನದೆ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತದೆ. ಆದರೆ ಪಂಪ್‌ವೆಲ್‌ ಕಡೆಗೆ ತೆರಳುವಾಗ ಪಡೀಲ್‌ನಲ್ಲಿ ಒಂದು ಬದಿ ಮಾತ್ರ ಬಸ್‌ ನಿಲ್ದಾಣವಿದೆ. ಬಸ್‌ ನಿಲ್ದಾಣವಂತೂ ಚಿಕ್ಕದಿದೆ.

Advertisement

ಇದರಿಂದಾಗಿ ಅನೇಕ ಮಂದಿ ಪ್ರಯಾಣಿಕರು ಬಸ್‌ ನಿಲ್ದಾಣದ ಹೊರಗೇ ನಿಲ್ಲುತ್ತಾರೆ. ಪಡೀಲ್‌ನಿಂದ ಪಂಪ್‌ವೆಲ್‌ಗೆ ತೆರಳುವ ಮತ್ತೂಂದು ಬದಿಯಲ್ಲಿ ಬಸ್‌ ನಿಲ್ದಾಣವಿಲ್ಲದೆ, ಬಸ್‌ಗಳು ಪ್ರಯಾಣಿರನ್ನು ರಸ್ತೆ ಬದಿಯಲ್ಲಿಯೇ ಇಳಿಸುತ್ತಿದ್ದಾರೆ.

ಕಳಪೆಯಾದ ಅಳಪೆ ನಿಲ್ದಾಣ
ಪಡೀಲ್‌ನಿಂದ ಪಂಪ್‌ವೆಲ್‌ ನಡುವೆ ಅಳಪೆ ಬಸ್‌ ನಿಲ್ದಾಣದ ಸ್ಥಿತಿ ಹೇಳತೀರದಾಗಿದೆ. ಮಳೆ ಬಂದರೆ ಸಾಕು ಈ ಬಸ್‌ ನಿಲ್ದಾಣದಲ್ಲಿ ನೀರು ತುಂಬಿ ಪ್ರಯಾಣಿರು ಕಷ್ಟ ಅನುಭವಿಸುತ್ತಾರೆ. ಏಕೆಂದರೆ, ಈ ಬಸ್‌ ನಿಲ್ದಾಣದ ಛಾವಣಿ ಶೀಟ್‌ಗಳು ತುಕ್ಕುಹಿಡಿದು ತೂತಾಗಿವೆ. ಅವು ಯಾವುದೇ ಸಂದರ್ಭದಲ್ಲಿಯೂ ಕುಸಿದು ಬೀಳುವ ಸ್ಥಿತಿಯಲ್ಲಿವೆ.

ಪಂಪ್‌ವೆಲ್‌ ನಿಲ್ದಾಣದಲ್ಲಿ ನಿಲ್ಲದ ಬಸ್‌
ಪಂಪ್‌ವೆಲ್‌ ಬಸ್‌ ನಿಲ್ದಾಣದ ಅವ್ಯವಸ್ಥೆಯೂ ಅದೇರೀತಿ ಇದೆ. ಇಲ್ಲಿ ಬಸ್‌ ಶೆಲ್ಟರ್‌ ಇದೆ. ಆದರೆ ಹೆಚ್ಚಿನ ಪ್ರಯಾಣಿಕರು ಅಲ್ಲಿ ಬಸ್‌ಗೆ ಕಾಯುವುದಿಲ್ಲ. ಬದಲಾಗಿ, ರಸ್ತೆ ಬದಿಯಲ್ಲಿ ನಿಲ್ಲುತ್ತಾರೆ. ಏಕೆಂದರೆ, ಅನೇಕ ಬಸ್‌ಗಳು ಬಸ್‌ ನಿಲ್ದಾಣದಲ್ಲಿ ನಿಲ್ಲದೆ, ಪಕ್ಕದ ರಸ್ತೆ ಬದಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ. ಇದರಿಂದಾಗಿ ಪಂಪ್‌ವೆಲ್‌ನಲ್ಲಿ ಸದಾ ಟ್ರಾಫಿಕ್‌ ಜಾಮ್‌ ಕಿರಿ ಕಿರಿ ತಪ್ಪಿದ್ದಿಲ್ಲ.

ಕಂಕನಾಡಿಯ ವೃತ್ತದಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಬಸ್‌ ನಿಲ್ದಾಣವಿದೆ. ಆದರೆ, ಇಲ್ಲಿ ಬಸ್‌ ನಿಲ್ಲುವುದು ಅಪರೂಪ. ಅದರ ಬದಲು ಸುಲ್ತಾನ್‌ ಗೋಲ್ಡ್‌ ಅಂಗಡಿಯ ಬಳಿ ನೂರಾರು ಪ್ರಯಾಣಿಕರು ನಿಂತಿರುತ್ತಾರೆ. ಆದರೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೇ ಕಾಣುವುದಿಲ್ಲ. ಜ್ಯೋತಿ ವೃತ್ತದಿಂದ ಪಿ.ವಿ.ಎಸ್‌. ಕಡೆಗೆ ತೆರಳುವ ಮಾರ್ಗದಲ್ಲಿ (ಹೋಟೆಲ್‌ ಮಹಾರಾಜ ಬಳಿ) ಬಸ್‌ ನಿಲ್ದಾಣವಿದೆ. ಆದರೆ ಅಲ್ಲಿ, ನಿಲ್ಲಲು ಸ್ಥಳವಿಲ್ಲದೆ ಪಕ್ಕದ ರಸ್ತೆ ಬದಿಯಲ್ಲಿಯೇ ಪ್ರಯಾಣಿರು ನಿಂತಿರುತ್ತಾರೆ.

ಹಂಪನಕಟ್ಟದಲ್ಲಿ ರಸ್ತೆಯಲ್ಲೇ ನಿಲ್ದಾಣ
ಹಂಪನಕಟ್ಟ ನಗರದ ಮುಖ್ಯ ಭಾಗವಾಗಿದೆ. ಮಂಗಳೂರು ವಿ.ವಿ. ಮುಂಭಾಗ ಜ್ಯೋತಿಗೆ ಹೋಗುವ ಮಾರ್ಗದಲ್ಲಿ ಬಸ್‌ನಿಲ್ದಾಣವೇ ಇಲ್ಲ. ಬಸ್‌ನವರು ಪ್ರಯಾಣಿಕರನ್ನು ಇಲ್ಲಿಂದ ಹತ್ತಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೂಡ ಇಲ್ಲಿ ನಿಂತಿರುತ್ತಾರೆ. ಗಣಪತಿ ಕಾಲೇಜು ಮಾರ್ಗವಾಗಿ ಹೋಗಬೇಕಾದ ಬಸ್‌ಗಳು, ಕುದ್ರೋಳಿ ಕಡೆಗೆ ಹೋಗುವ ಬಸ್‌ಗಳು ನಿಲ್ಲುವುದರಿಂದ ಜನ ನಿಲ್ಲುವ ಪ್ರಮೇಯ ತಪ್ಪುತ್ತಿಲ್ಲ. ಹಂಪನಕಟ್ಟ ಮುಖ್ಯ ಸರ್ಕಲ್‌ನ ಸಿಗ್ನಲ್‌ನಲ್ಲಿ ಪ್ರಯಾಣಿಕರು ಬಸ್‌ ಹತ್ತುವುದರಿಂದ ಜನಜಂಗುಳಿ ಇರುತ್ತದೆ.

ಈ ಬಗ್ಗೆ ಪಾಲಿಕೆ ಅಧಿಕಾರಿಯೊಬ್ಬರು ಸುದಿನಕ್ಕೆ ಪ್ರತಿಕ್ರಿಯಿಸಿದ್ದು, ‘ನಗರದ ಕೆಲವು ಕಡೆಗಳಲ್ಲಿ ಬಸ್‌ ನಿಲ್ದಾಣವಿಲ್ಲದೆ ವಿಚಾರ, ಇನ್ನೂ ಕೆಲವು ಕಡೆಗಳಲ್ಲಿ ಬಸ್‌ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸದೇ ಇರುವ ವಿಚಾರಗಳು ಗಮನಕ್ಕೆ ಬಂದಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲ ಕೆಲಸಗಳಿಗೆ ತಡೆಯಿದೆ. ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ’ ಎಂದು ತಿಳಿಸಿದ್ದಾರೆ.

ಬಸ್‌ ನಿಲ್ದಾಣ ನಾಪತ್ತೆ
ಪಿ.ವಿ.ಎಸ್‌.ನಲ್ಲಿ ರಾತ್ರಿ ಸಮಯದ ಬಸ್‌ನಿಲ್ದಾಣವೇ ಕಾಣೆಯಾಗುತ್ತದೆ! ಬೆಂಗಳೂರು, ಮುಂಬಯಿಗೆ ಹೋಗುವ ಖಾಸಗಿ ಬಸ್‌ಗಳು ಪಿವಿಎಸ್‌ನ ಇಕ್ಕೆಲೆಗಳಲ್ಲಿ ನಿಂತು ಸ್ಥಳೀಯವಾಗಿ ಹೋಗಲು ಬಸ್‌ ನಿಲ್ದಾಣದಲ್ಲಿ ನಿಲ್ಲಲು ಅವಕಾಶವೇ ಇಲ್ಲ. ಏಕೆಂದರೆ, ರಾತ್ರಿ 8ರಿಂದ ಬಸ್‌ ನಿಲ್ದಾಣದ ಮುಂಭಾಗ ಖಾಸಗಿ ಬಸ್‌ ಗಳೇ ಠಿಕಾಣಿ ಹೂಡುತ್ತಿದ್ದು, ಸಂಚಾರ ವ್ಯವಸ್ಥೆಗೂ ತಡೆಯಾಗುತ್ತಿದೆ.

ಬಸ್‌ ನಿಲ್ದಾಣವಾಗಿದೆ ಪ್ರಚಾರ ತಾಣ
ನಗರದ ಅನೇಕ ಬಸ್‌ ನಿಲ್ದಾಣಗಳು ಪ್ರಚಾರದ ತಾಣವಾಗಿ ಮಾರ್ಪಟ್ಟಿರುವುದು ವಿಪರ್ಯಾಸ. ನಗರದ ಜ್ಯೋತಿ, ಅಳಪೆ ಸೇರಿದಂತೆ ವಿವಿಧ ಬಸ್‌ ನಿಲ್ದಾಣಗಳಲ್ಲಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದರಿಂದ ಬಸ್‌ ನಿಲ್ದಾಣಗಳು ಗಲೀಜಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಮಿಲಾಗ್ರಿಸ್‌ನಲ್ಲಿ ನಿಲ್ದಾಣವೇ ಇಲ್ಲ
ಸ್ಟೇಟ್‌ಬ್ಯಾಂಕ್‌ಗೆ ತೆರಳುವ ಎಲ್ಲ ಬಸ್‌ಗಳು ಮಿಲಾಗ್ರಿಸ್‌ ಆಗಿಯೇ ತೆರಳಬೇಕು. ಆದರೂ ಇಲ್ಲಿ ಬಸ್‌ ನಿಲ್ದಾಣವಿಲ್ಲ. ರಸ್ತೆ ಬದಿಯೇ ಪ್ರಯಾಣಿಕರು ನಿಂತಿರುತ್ತಾರೆ. ಒಂದು ವೇಳೆ ಅಪ್ಪಿತಪ್ಪಿದರೆ ಅಪಘಾತವಾಗುವ ಪ್ರಮೇಯವಿಲ್ಲಿ ಹೆಚ್ಚಿದೆ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next