ಮೈಸೂರು: ಸಾರಿಗೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲೂಕಿನ ಹಂಚ್ಯಾ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ನಗರದ ಸಾತಗಳ್ಳಿ ಬಸ್ ಘಟಕ ಸಮೀಪವಿರುವ ಹಂಚ್ಯಾಗ್ರಾಮಕ್ಕೆ ಕಳೆದ ವರ್ಷ ಕೆಎಸ್ಸಾರ್ಟಿಸಿಯ ನಗರಸಾರಿಗೆ ವಿಭಾಗದಿಂದ 110 ಸಿ ಮಾರ್ಗ ಸಂಖ್ಯೆಯ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುಸಜ್ಜಿತವಾಗಿದ್ದ ಈ ಬಸ್ ಅನ್ನು ವಿಜಯನಗರ ಘಟಕಕ್ಕೆ ವರ್ಗಾಯಿಸಿ, ಹಂಚ್ಯಾ ಮಾರ್ಗಕ್ಕೆ ದುರಸ್ತಿಯಲ್ಲಿರುವ ಬಸ್ ಹಾಕಲಾಗಿದೆ. ಈ ಬಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದರಿಂದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗಲಾಗುತ್ತಿಲ್ಲ. ಬಸ್‌ಗಳನ್ನೇ ಅವಲಂಬಿಸಿರುವ ಗ್ರಾಮಸ್ಥರಿಗೂ ಇದರಿಂದ ತೊಂದರೆಯಾಗಿದೆ. ಈ ಬಗ್ಗೆ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್‌ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಇಂದು ಮೂರನೇ ಬಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿ ಬಾರಿಯೂ ಸುಳ್ಳು ಭರವಸೆಗಳನ್ನು ನೀಡುವ ಡಿಪೋ ಮ್ಯಾನೇಜರ್ ಕಲಾಶ್ರೀ ಅವರು ಗ್ರಾಮದ ಬಸ್ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಆಕ್ರೋಶಕ್ಕೆ ಕೊನೆಗೆ ಮಣಿದ ಸಾತಗಳ್ಳಿ ಬಸ್ ಡಿಪೋ ಮ್ಯಾನೇಜರ್ ಕಲಾಶ್ರೀ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಫೆ.1ರಿಂದ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಸುಸಜ್ಜಿತ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಪಂ ಅಧ್ಯಕ್ಷ ಮಂಜು, ಸದಸ್ಯರಾದ ಚೆನ್ನಯ್ಯ, ಬಸವರಾಜು, ವೀಣಾ ಮಹದೇವು, ಗ್ರಾಮದ ಮುಖಂಡರಾದ ತಮ್ಮಯ್ಯ, ಶ್ರೀನಿವಾಸ್, ನಾಗರಾಜಪ್ಪ, ವಿದ್ಯಾರ್ಥಿಗಳಾದ ಯೋಗೇಶ್, ಹೇಮಂತ್‌ಕುಮಾರ್, ಅಭಿಷೇಕ್, ಮನು, ಗಿರೀಶ್, ನಾಗೇಂದ್ರ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.