Advertisement

ಕೆಡಹಿದ ಜಾಗದಲ್ಲೇ ಬಸ್‌ ತಂಗುದಾಣ

12:18 PM May 26, 2022 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಯ ಉದ್ದೇಶಕ್ಕೆ ಈಗಾಗಲೇ ಕೆಡವಲಾಗಿದ್ದ ಬಸ್‌ ತಂಗುದಾಣವನ್ನು ಆ ಜಾಗದಲ್ಲಿ ಮರು ನಿರ್ಮಿಸಲು ಪಾಲಿಕೆ ಮುಂದಾಗಿದೆ. ಮೊದಲನೇ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ.

Advertisement

ರಸ್ತೆ, ಕಾಂಕ್ರಿಟ್‌ ಕಾಮಗಾರಿ ಉದ್ದೇಶದಿಂದ ನಗರದ ಲಾಲ್‌ ಬಾಗ್‌, ಬಳ್ಳಾಲ್‌ಬಾಗ್‌, ಪಿ.ವಿ.ಎಸ್. ಜಂಕ್ಷನ್‌ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಬಸ್‌ ತಂಗುದಾಣ ಕೆಡವಲಾಗಿತ್ತು. ಕೆಲವೊಂದು ಕಡೆಗಳಲ್ಲಿ ಈಗಾಗಲೇ ತಂಗುದಾಣ ನಿರ್ಮಾಣಗೊಂಡಿದೆ. ನಗರದ ಡಾ| ಬಿ.ಆರ್. ಅಂಬೇಡ್ಕರ್‌ ವೃತ್ತ ಮತ್ತು ಬಂಟ್ಸ್‌ ಹಾಸ್ಟೆಲ್‌ ರಸ್ತೆಯ ನಡುವಣ ಗೋಲ್ಡ್‌ಫಿಂಚ್‌ ಹೋಟೆಲ್‌ ಬಳಿ ಬಸ್‌ ತಂಗುದಾಣ ನಿರ್ಮಾಣ ಮಾಡಲಾಗುತ್ತಿದೆ.

ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಬಸ್‌ ತಂಗುದಾಣ ಕೆಡಹಿರುವ ಬಗ್ಗೆ ‘ಉದಯವಾಣಿ ಸುದಿನ’ ಈಗಾಗಲೇ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಕೆಲವೊಂದು ಕಡೆ ಮರು ಬಸ್‌ ಶೆಲ್ಟರ್‌ ನಿರ್ಮಾಣ ಕಾರ್ಯ ಪಾಲಿಕೆ ಕೈಗೊಂಡಿತ್ತು. ಇನ್ನುಳಿದ ಕಡೆಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಇದೀಗ ಪಾಲಿಕೆ ಮುಂದಾಗಿದೆ. ಇದರಲ್ಲಿ ಕುಡಿಯುವ ನೀರು ಸಹಿತ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಮತ್ತಷ್ಟು ಕಡೆ ಬಸ್‌ ತಂಗುದಾಣ

ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು, ಪ್ರಯಾಣಿಕರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಂಗಳೂರು ನಗರದ 15 ಕಡೆ ಗಳಲ್ಲಿ ಬಿಒಟಿ (ಬಿಲ್ಡ್‌ ಆಪರೇಟ್‌ ಟ್ರಾನ್ಸ್‌ಫರ್‌) ಮಾದರಿಯಲ್ಲಿ ಸ್ಮಾರ್ಟ್‌ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ನಗರದ ಕದ್ರಿಹಿಲ್ಸ್‌ (ಕದ್ರಿ ಪೊಲೀಸ್‌ ಠಾಣೆಯ ಎದುರು), ಪಿ.ವಿ.ಎಸ್. ಕುದ್ಮಲ್‌ ರಂಗರಾವ್‌ ರಸ್ತೆ, ಮಿಲಾಗ್ರಿಸ್‌ ಬಳಿಯ ವೆನ್ಲಾಕ್‌ ಆಸ್ಪತ್ರೆ, ಲೇಡಿಗೋಷನ್‌ ಆಸ್ಪತ್ರೆ ಬಳಿ, ಕೊಟ್ಟಾರ ಇನ್ಫೋಸಿಸ್‌ ಬಳಿ, ಯುಎಸ್‌ ಮಲ್ಯ ರಸ್ತೆಯ ಪಿಡಬ್ಲ್ಯೂಡಿ ಕಚೇರಿ ಬಳಿ, ವಾಸ್‌ಲೇನ್‌ ಮಂಗಳೂರು ನರ್ಸಿಂಗ್‌ ಹೋಂ ಬಳಿ, ಮಣ್ಣಗುಡ್ಡ ವೃತ್ತ ಬಳಿ, ವಿಮಾನ ನಿಲ್ದಾಣ ರಸ್ತೆ ಯೆಯ್ನಾಡಿ, ನಂತೂರು ಜಂಕ್ಷನ್‌, ವಿಮಾನ ನಿಲ್ದಾಣ ರಸ್ತೆ ಕೆಪಿಟಿ, ವಿಮಾನ ನಿಲ್ದಾಣ ರಸ್ತೆ ಶರಬತ್ತು ಕಟ್ಟೆ, ಅಳಕೆ ಗೋಕರ್ಣನಾಥ ದೇವಸ್ಥಾನ ಬಳಿ, ಕೊಟ್ಟಾರ ಇನ್ಫೋಸಿಸ್‌ ಎದುರು ಮತ್ತು ಪಂಪ್‌ವೆಲ್‌ ಪೆಂಟಗಾನ್‌ ಹೋಟೆಲ್‌ ಬಳಿ ನೂತನವಾಗಿ ಬಸ್‌ ತಂಗುದಾಣ ನಿರ್ಮಾಣ ಆಗಲಿದೆ. ಈಗಾಗಲೇ ಟೆಂಡರ್‌ ಅಂತಿಮಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ಪಾಲಿಕೆಯಿಂದ ಅನುಮತಿ ದೊರಕಲಿದೆ.

ಮೂಲ ಸೌಕರ್ಯಕ್ಕೆ ಆದ್ಯತೆ

ನಗರದಲ್ಲಿ ಈ ಹಿಂದೆ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣ ವೇಳೆ ಕೆಲವು ಕಡೆ ಬಸ್‌ ತಂಗುದಾಣವನ್ನು ಕೆಡವಲಾಗಿತ್ತು. ಇದೀಗ ಅದೇ ಜಾಗದಲ್ಲಿ ಮತ್ತೆ ಬಸ್‌ ತಂಗುದಾಣ ನಿರ್ಮಾಣ ಕೆಲಸ ನಡೆಸಲಾಗುತ್ತಿದೆ. ಅಲ್ಲದೆ, ನಗರದ 15 ಕಡೆಗಳಲ್ಲಿ ಹೊಸದಾಗಿ ಬಸ್‌ ತಂಗುದಾಣ ನಿರ್ಮಾಣವಾಗುತ್ತಿದೆ. ಬಸ್‌ ತಂಗುದಾಣದಲ್ಲಿ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಕ್ಕೆ ಪ್ರಾಶಸ್ತ್ಯ ನೀಡಲಾಗುವುದು. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್

Advertisement

Udayavani is now on Telegram. Click here to join our channel and stay updated with the latest news.

Next