ಮುಜಾಫರ್ ನಗರ: ವಲಸೆ ಕಾರ್ಮಿಕರ ಮೇಲೆ ಉತ್ತರ ಪ್ರದೇಶ ಸರ್ಕಾರಿ ಬಸ್ ಹರಿದ ಪರಿಣಾಮ ಆರು ಜನ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ದುರಂತ ಘಟನೆನಯೊಂದು ನಡೆದಿದೆ.
ಲಾಕ್ ಡೌನ್ ಕಾರಣದಿಂದ ವಲಸೆ ಕಾರ್ಮಿಕರು ಪಂಜಾಬ್ ನಿಂದ ತಮ್ಮ ಗೋಪಾಲ್ ಗಂಜ್ ನಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ತೆರಳುತ್ತಿದ್ದರು. ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ಬಸ್ಸೊಂದು ಈ ಕಾರ್ಮಿಕರ ಮೇಲೆ ಹರಿದಿದ್ದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಸ್ ನಲ್ಲಿ ಯಾವುದೇ ಪ್ರಯಾಣಿಕರಿಲಿಲ್ಲ . ಘಟನೆಯ ನಂತರ ಚಾಲಕ ಪರಾರಿಯಾಗಿದ್ದಾನೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರವಷ್ಟೇ ಉತ್ತರ ಪ್ರದೇಶ ಸರ್ಕಾರ ‘ಯಾವುದೇ ಕಾರಣಕ್ಕೂ ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದುಕೊಂಡು ತೆರಳಬಾರದು’ ಎಂಬ ಆದೇಶ ನೀಡಿತ್ತು.
ಕಳೆದ ಕೆಲವು ದಿನಗಳಿಂದ ದೇಶದ ಹಲವಡೆ ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದು ತಮ್ಮ ಮನೆಗೆಳಿಗ ನಡೆದುಕೊಂಡು ತೆರಳುತ್ತಿರುವ ವಲಸೆ ಕಾರ್ಮಿಕರಿಗೆ ವಾಹನಗಳೇ ಯಮನಾಗಿ ಪರಿಣಮಿಸಿವೆ. ಉತ್ತರ ಪ್ರದೇಶದಲ್ಲಿ ದಿನಗಳ ಹಿಂದೆ ಮೂವರು ವಲಸೆ ಕಾರ್ಮಿಕರು ಮತ್ತು ಓರ್ವ ಬಾಲಕಿ ರಸ್ತೆ ಅಪಘಾತಕ್ಕೆ ಬಲಿಯಾಗಿ 46 ಜನರು ಗಂಭಿರ ಗಾಯಗೊಂಡಿದ್ದರು.
ವಾರಗಳ ಹಿಂದಷ್ಟೆ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ಸಾವನ್ನಪ್ಪಿದ್ದರು.