ಕುಂದಾಪುರ/ಕೊಲ್ಲೂರು: ಸಿಗಂಧೂರಿನಿಂದ ಕೊಲ್ಲೂರಿಗೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ಸೊಂದು ದಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಹಲವರು ಗಾಯಗೊಂಡ ಘಟನೆ ಜ.11ರ ಸಂಜೆ ನಡೆದಿದೆ.
ಅಪಘಾತದಿಂದಾಗಿ 22 ಮಂದಿ ಪ್ರಯಾಣಿಕರು ಗಾಯಗೊಂಡರು. ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ತತ್‌ಕ್ಷಣ ಡಾ| ರಾಬರ್ಟ್ ರೆಬೆಲ್ಲೋ ನೇತೃತ್ವದ ವೈದ್ಯರ ತಂಡ ಕರ್ತವ್ಯ ಮುಗಿಸಿ ತೆರಳಿದ್ದ ವೈದ್ಯರು ಹಾಗೂ ಸಿಬಂದಿಯನ್ನು ಕರೆಸಿ ಚಿಕಿತ್ಸೆ ಕೊಡಿಸಿದೆ. 22 ಮಂದಿಯ ಪೈಕಿ ಸಂಕ್ರಪ್ಪ (50), ರೂಪಾ (35),
ಶ್ಯಾಮಲಮ್ಮ (42), ರತ್ನಮ್ಮ (52), ವೆಂಕಟರಮಣ (45), ಚಂದ್ರಕಲಾ (43) ಅವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇಬ್ಬರು ಮಹಿಳೆಯರ ಕೈ ತುಂಡಾಗಿದ್ದು, ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ. ಮತ್ತೂಬ್ಬರ ಪಕ್ಕೆಲುಬು ಮುರಿದಿದೆ. ಜಿಲ್ಲಾಡಳಿತ ಸಕಾಲದಲ್ಲಿ ನೆರವಿಗೆ ಧಾವಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 14,473 ಕೋವಿಡ್ ಪ್ರಕರಣ ಪತ್ತೆ, 5 ಸಾವು: ಪಾಸಿಟಿವಿಟಿ ದರ ಶೇ.10.30
ಗಾಯಾಳುಗಳು ಕೋಲಾರದ ಮುಳುಬಾಗಿಲು ಮೂಲದವರೆಂದು ತಿಳಿದುಬಂದಿದೆ. ಕೊಲ್ಲೂರು ಪೊಲೀಸರು ಸ್ಥಳೀಯರೊಂದಿಗೆ ಸೇರಿ ಜೆಸಿಬಿ ಬಳಸಿ ಮಗುಚಿ ಬಿದ್ದ ಬಸ್ ಅನ್ನು ಮೇಲೆತ್ತಿದರು.