Advertisement

ಬಸ್‌ ಯಾನ

06:45 AM Jul 28, 2017 | |

ನಿಮ್ಮ ಗುರಿ ಸದಾ ಯಶಸ್ಸಿನ ಕಡೆ ನೋಡುತ್ತಿರಲಿ ಎಂದು ಬಸ್ಸಿನಲ್ಲಿ ಬರೆದಿರುವ ನುಡಿಮುತ್ತನ್ನು ಓದಿದ ಹುಡುಗರು ಹುಡುಗಿಯರತ್ತ ದೃಷ್ಟಿಹರಿಸುವುದು, “ಇರುವುದೆಲ್ಲವ ಬಿಟ್ಟು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂದು ಬಸ್ಸಿನಲ್ಲಿ ಬರೆದಿರುವ ನುಡಿಮುತ್ತಿನ ಕಡೆಗೆ. ಓದಿದ ಪ್ರಯಾಣಿಕರು ಬಸ್ಸಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿ ಹರುಷವನ್ನು ಕಾಣುವುದು ಇನ್ನೊಂದು ವಿಸ್ಮಯದ ಸಂಗತಿ.

Advertisement

ಬಸ್ಸಿನಲ್ಲಿ ಪ್ರಯಾಣಿಸುವುದೆಂದರೆ- ಅದು ಕೇವಲ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಪ್ರಯಾಣಿಸುವುದಲ್ಲ. ಎಷ್ಟೋ ಸತ್ಯಾಂಶಗಳನ್ನು ನಾವು ಕಣ್ಣಾರೆ ಕಂಡು ಅನುಭವಿಸುವ ವಿಸ್ಮಯ ಜಗತ್ತು. 
                   
“ಏನೇ ಇಷ್ಟು ತೆಳ್ಳಗಾಗಿದ್ದಿಯಾ?’ ಎಂದು ಪರಿಚಿತ ನೆಂಟರಿಷ್ಟರು ಕೇಳಿದರೆ, “ಬಸ್ಸಿನಲ್ಲಿ ನೇತಾಡಿ ಹೀಗಾಗಿದೆ’ ಎಂಬ ಹುಡುಗಿಯರ ವೈಯಾರದ ಮಾತು ಕೇಳಿ ಬರುತ್ತದೆ. ಬಸ್ಸಿನಲ್ಲಿ ನೇತಾಡುವುದು ಅಂದರೆ ಏನು? ಹುಡುಗಿಯರಿಗೆ ಬಸ್ಸಿನ ತಳಕ್ಕೆ ಕಾಲು ಎಟುಕ‌ದೆ ಬಸ್ಸಿನ ಹ್ಯಾಂಗರಿಗೆ ಬಲವಾಗಿ ಕೈ ಹಿಡಿದು ಒಂಟಿಕಾಲಿನಲ್ಲಿ ನೇತಾಡುವುದೆ? ಎಂಬ ಪ್ರಶ್ನೆ ಮೂಡುತ್ತದೆ. ಇರಬಹುದು. ಹಾಗೆಯೇ “ಊರಿಗೆ ಒಬ್ಬಳೇ ಪದ್ಮಾವತಿ’ ಎಂಬಂತೆ ಊರಿಗೊಂದೇ ಬಸ್ಸು ಇದ್ರೆ ಒಂಟಿ ಕಾಲಿನಲ್ಲಿ ನೇತಾಡುವುದಿರಬಹುದು. ದೂರದ ಪ್ರತಿಷ್ಠಿತ ಕಾಲೇಜುಗಳಿಗೆ ಶೋಕಿ ಮಾಡಲೆಂದು ಹೋಗುವ ಹುಡುಗಿಯರು ಬಹಳಷ್ಟಿರುವುದರಿಂದ ಕುಳಿತುಕೊಳ್ಳುವುದಕ್ಕಿರಲಿ… ನಿಂತುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಇರುತ್ತದೆ.ಇತ್ತೀಚೆಗೆ ಬಸ್ಸಿನಲ್ಲಿ ನೇತಾಡುವುದು ಕಡಿಮೆಯಾಗುತ್ತ ಬಂದಿದೆ. ಯಾಕೆಂದರೆ, ಹುಡುಗಿಯರ ಸ್ಲಿವ್‌ಲೆಸ್‌ ಡ್ರೆಸ್‌ಗಳಿಂದ ಕೈ ಮೇಲೆ ಮಾಡಲು ಹುಡುಗಿಯರು ಒಪ್ಪುತ್ತಿಲ್ಲ. ಅಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಈಗ ಹುಡುಗಿಯರಿಗೆ ಉಳಿದಿರುವ ಅಸ್ತ್ರವೆಂದರೆ ಬಸ್ಸಿನ ಸರಳನ್ನೋ ಅಥವಾ ಶೀಟನ್ನೋ ಬಲವಾಗಿ ಹಿಡಿದುಕೊಳ್ಳುವುದು.ಎಷ್ಟು ಬಲವಾಗಿ ಎಂದರೆ ಶೀಟಿನ ಮೇಲು ಹೊದಿಕೆಯು ಕೈಯಲ್ಲೇ ಬಂದುಬಿಡುತ್ತದೆ. ನಂತರ ಶೀಟಿನ ಹಿಂದಿರುವ ಸರಳನ್ನು ಹಿಡಿದುಕೊಳ್ಳುವುದು. ಮಾರ್ಗ ತಿರುವಿನಲ್ಲಿ ಈ ಸರಳು ನಮ್ಮ ಕೈಗೆ ಬಂದು ಬಿಡುತ್ತದೆ. ಎಷ್ಟೋ ಭಾರಿ ನನಗೂ ಅನುಭವ ಆಗಿದೆ.

ಹೆಚ್ಚಿನ ಹುಡುಗಿಯರಿಗೆ ಮಳೆಯಲ್ಲಿ ನೆನೆಯುವುದು ಎಂದರೆ ಇಷ್ಟ .ಆದರೆ ನಮ್ಮ ಸೋರುವ ಬಸ್ಸಿನಲ್ಲಿ ನೆನೆಯುವುದೆಂದರೆ ಹುಡುಗಿಯರು ದೂರ ಸರಿಯುತ್ತಾರೆ. ಇನ್ನೂ ಕಿಟಕಿಯ ಬದಿಯಲ್ಲಿ ಕುಳಿತುಕೊಳ್ಳಲು ಹರಸಾಹಸ ಪಡುತ್ತಿದ್ದ ಹುಡುಗರು ಮಳೆಗಾಲದಲ್ಲಿ ಇದರಿಂದ ಕೊಂಚ ದೂರ ಸರಿಯುತ್ತಾರೆ.ನೂಕುನುಗ್ಗಲು ಇರುವ ಬಸ್ಸಿನ ರಶ್‌ನಲ್ಲಿ ಬ್ಯಾಗನ್ನು ಹೆಗಲಮೇಲೆ ಹಾಕಿಕೊಳ್ಳುವಂತಿಲ್ಲ. ಅಪ್ಪಿತಪ್ಪಿ ಹಾಕಿಕೊಂಡರೆ ಜನರ ಬೈಗುಳ ಪೆಟ್ಟಿಗಿಂತ ಹರಿತವಾಗಿರುತ್ತದೆ. ಬಸ್ಸಿನಲ್ಲಿ ನಮ್ಮ ಬ್ಯಾಗಿನ ಜವಾಬ್ದಾರಿಯನ್ನು ಕುಳಿತವರು ವಹಿಸಿಕೊಳ್ಳುವರು. ಬ್ಯಾಗ್‌ ವಾಪಸು ತೆಗೆದುಕೊಳ್ಳುವಾಗ ಥ್ಯಾಂಕ್ಸ್‌ ಹೇಳಲು ಮರೆಯಬಾರದು.

ದೇವಸ್ಥಾನ ಕಂಡಾಗಲೆಲ್ಲ ಕೈ ಮುಗಿಯುವ ಹುಡುಗಿಯರು ಅದೇನು ದೇವರಲ್ಲಿ ಬೇಡಿಕೊಳ್ಳುವರೋ ನಾ ಕಾಣೆ ! ನನ್ನ ಮೇಕಪ್‌ ಹಾಳಾಗದೆ ಇರಲಿ ಅಥವಾ ಬಸ್ಸಿನಲ್ಲಿ ಒಂಟಿಕಾಲಿನಲ್ಲಿ ನಿಂತಿರುವ ನನ್ನನ್ನು ಸರಿಯಾದ ಪೊಜಿಶನ್ನಿಗೆ ನಿಲ್ಲಿಸೆಂದೊ ಅಥವಾ ಹಾಳಾದ ಹುಡುಗರಿಗೆ ಹುಡುಗಿ ನಿಂತಿರುವಾಗ ಕುಳಿತುಕೊಳ್ಳುವಂತೆ ಹೇಳುವ ಸೌಜನ್ಯ ಬೆಳೆಯಲಿ ಎಂದು ಪರಮಾತ್ಮನನ್ನು ಬೇಡುತ್ತಿರಬಹುದು. ಆದರೆ, ಇವ‌ಕ್ಕೆಲ್ಲ ಬ್ರೇಕ್‌ ಹಾಕಿದಂತಾಗಿದೆ. ಕೈ ಮುಗಿದರೆ ಪರಮಾತ್ಮ ಸಂತಸ, ಕೈ ಬಿಟ್ಟರೆ ಪಡ್ಡೆ ಹುಡುಗರಿಗೆ ಉಲ್ಲಾಸ ಎಂಬುದರಲ್ಲಿ ಎರಡು ಮಾತಿಲ್ಲ.

ನಿಮ್ಮ ಗುರಿ ಸದಾ ಯಶಸ್ಸಿನ ಕಡೆ ನೋಡುತ್ತಿರಲಿ ಎಂದು ಬಸ್ಸಿನಲ್ಲಿ ಬರೆದಿರುವ ನುಡಿಮುತ್ತನ್ನು ಓದಿದ ಹುಡುಗರು ಹುಡುಗಿಯರತ್ತ ದೃಷ್ಟಿಹರಿಸುವುದು, “ಇರುವುದೆಲ್ಲವ ಬಿಟ್ಟು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂದು ಬಸ್ಸಿನಲ್ಲಿ ಬರೆದಿರುವ ನುಡಿಮುತ್ತಿನ ಕಡೆಗೆ. ಓದಿದ ಪ್ರಯಾಣಿಕರು ಬಸ್ಸಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿ ಹರುಷವನ್ನು ಕಾಣುವುದು ಇನ್ನೊಂದು ವಿಸ್ಮಯದ ಸಂಗತಿ.

Advertisement

ಬಸ್ಸು ಎಂಬುದು ಒಂದು ಚರ್ಚಾವೇದಿಕೆ. ಎಷ್ಟೊ ವಿಷಯಗಳು ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಅದು ರಟ್ಟಾಗಿ ಬಿಡುತ್ತದೆ. ನಮ್ಮ ಸ್ವಂತ ಕಾರು, ಟ್ಯಾಕ್ಸಿ ಇತ್ಯಾದಿಗಳಲ್ಲಿ ಪ್ರಯಾಣಿಸಿದರೆ ಮನಸ್ಸಿಗೆ ಸಂತಸವಿರುವುದಿಲ್ಲ. ಆದರೆ, ಮೂವತ್ತು-ನಲವತ್ತು ಜನರ ಮಧ್ಯದಲ್ಲಿ ನಾವು ಪ್ರಯಾಣಿಕರಾದಾಗ ಎಷ್ಟೋ ವಿಚಾರಗಳನ್ನು ಹಂಚಿಕೊಳ್ಳಬಹುದು. ಮನಸ್ಸಿನಲ್ಲಿರುವ ಎಷ್ಟೋ ಭಾರಗಳನ್ನು ಕಡಿಮೆ ಮಾಡಲು ಸಾಧ್ಯ. ಆದ್ದರಿಂದ ಬಸ್ಸೆಂಬುದು ಕೇವಲ ಪ್ರಯಾಣವಲ್ಲ. ಅಲ್ಲಿ ಅಡಗಿದೆ ಎಷ್ಟೋ ಸತ್ಯಾಂಶಗಳು. ನಮ್ಮನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವ ಒಂದು ವಿಸ್ಮಯ ಜಗತ್ತು.

– ವಿಜೇತಾ  ಎ. ಕೊಕ್ಕಡ   
ದ್ವಿತೀಯ ಬಿ.ಎ.
ಎಸ್‌.ಡಿ.ಎಂ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next