ಐಶ್ವರ್ಯ ಎಂದರೆ ಅವಳಾ? ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಅವಳಲ್ಲ… ಅದು ನಮ್ಮೂರಿನ ಬಸ್. ನನಗೆ ನೆನಪಿರುವ ಹಾಗೆ, ನಾನು ಬಿ.ಇ. ಮೊದಲ ವರ್ಷದಲ್ಲಿ ಇರುವಾಗ ಅದು ನಮ್ಮೂರಿಗೆ ಬಂದದ್ದು. ಹಾಗೆ ನೋಡಿದರೆ, ಸಾಧಾರಣ 5-6 ವರ್ಷಗಳ ಹಿಂದೆ. ಆಗ ನೋಡಲು ಮಾತ್ರ ಸೀಮಿತವಾಗಿತ್ತು. ಅಂದರೆ, ನಾನು ಕಾಲೇಜಿಗೆ ಹೋಗುವಾಗ ಅದು ಎಲ್ಲಿಂದಲೊ ಬರುತ್ತಿತ್ತು ಮತ್ತು ಕಾಲೇಜಿನಿಂದ ಬರುವಾಗ ಇನ್ನೆಲ್ಲಿಗೋ ಹೋಗುತ್ತಿತ್ತು. ಹೀಗಾಗಿ, ಅದರಲ್ಲಿ ಪ್ರಯಾಣದ ಅನುಭವ ಸಾಧ್ಯವಾಗಿರಲಿಲ್ಲ.
ಕಾಲೇಜು ಜೀವನ ಮುಗಿದ ಮೇಲೆ ಕೆಲಸ ಸಾಮಾನ್ಯ. ಈಗಂತೂ ನನ್ನ ಪ್ರಯಾಣ “ಐಶ್ವರ್ಯಾ’ದಲ್ಲಿ ಅಂತ ಹೇಳಬಹುದು. ಹಾಗಾಗಿ, ಈ ಮುಂದಿನ ಸಾಲುಗಳು… ಬಸ್ ಹತ್ತಿದ ಕೂಡಲೇ ನಮ್ಮ/ನಿಮ್ಮ ಕಣ್ಣಿಗೆ ಕಾಣುವ ಡ್ರೈವರ್. ಅವರು ಸಾಹಸಿ ಡ್ರೈವರ್ ಆತನ ಸೀಟಿನಲ್ಲಾದರೆ, ಹರಸಾಹಸಿ ಕಂಡಕ್ಟರ್ ಫುಟ್‌ಬೋರ್ಡಿನಲ್ಲಿ ! ಇನ್ನು ಬಸ್ ಒಳಗಿನ ಪ್ರಪಂಚವನ್ನು ಹೇಳುವುದಾದರೆ ಯಾವಾಗಲೂ ಮನಸ್ಸಿಗೆ ಮುದ ನೀಡುವ ನಾನ್‌ಸ್ಟಾಪ್ ಸಂಗೀತ. ಬಲಗಡೆ ಸೀಟಿನಲ್ಲಿ ಡ್ರೈವರ್ ಆದ್ರೆ, ಅದರ ಪಕ್ಕದಲ್ಲಿರುವ ಅಡ್ಡ ಸೀಟಿನಲ್ಲಿ ಮಹಿಳಾಮಣಿಗಳ ದರ್ಬಾರ್. ಇದನ್ನು ಆಂಗ್ಲ ಪದಗಳಲ್ಲಿ ಹೇಳುವುದಾದರೆ ಲೇಡೀಸ್ ಕ್ಲಬ…. ಮಹಿಳೆಯರ ನಾಲಿಗೆ ಸ್ವಲ್ಪ ಉದ್ದ ಅಂತ ಹೇಳ್ತಾರೆ. ಯಾರು ಅಳತೆ ಮಾಡಿದ್ದಾರೊ ಗೊತ್ತಿಲ್ಲ. ಅದಕ್ಕಿಂತ, ಸ್ವಲ್ಪ ಮಾತು ಜಾಸ್ತಿ ಅಂತ ಹೇಳಬಹುದೇನೋ ! ಹೀಗಾಗಿ, ಅಲ್ಲಿ ಮಾತುಕತೆ, ಗಾಸಿಪ್, ಹಾಡು, ಹರಟೆ, ನಗು, ಸ್ವಲ್ಪ ಜಗಳ, ಇತ್ಯಾದಿ ಇತ್ಯಾದಿ… ಇದ್ದದ್ದೇ. ಮುಂದೆ ನಿಂತು ಇನ್ನುಳಿದ ಸೀಟುಗಳತ್ತ ಗಮನವನ್ನು ಹರಿಸಿದರೆ ಕಿಟಕಿಯ ಪಕ್ಕದಲ್ಲಿ ಕೂತು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಿರುವವರು ಒಂದೆಡೆಯಾದರೆ, ಮಧ್ಯದಲ್ಲಿ ಕುಳಿತವರು/ನಿಂತವರು ತಮ್ಮ ಹತ್ತಿರದವರೊಂದಿಗೆ ಯಾರದೋ ಮನೆಯ ಕತೆೆಗಳನ್ನು ಮಾತಾಡುತ್ತ, ಮಾತನಾಡಲು ಏನೂ ವಿಷಯ ಇಲ್ಲವೆಂದಾಗ, “”ಹೇ, ನಿನ್ನೆ ಅಗ್ನಿಸಾಕ್ಷಿ ನೋಡಿದ್ದೀಯಾ? ರಾಧಾ-ರಮಣ ನೋಡಿದ್ದೀಯಾ? ಏನಾಯ್ತು? ಅಥವಾ ನಿನ್ನೆ ಬಿಗ್‌ಬಾಸಲ್ಲಿ ಅವರು ಹಾಗೆ ಮಾಡಬಾರದಿತ್ತು ಅಲ್ವಾ?” ಎನ್ನುವ ಮಾತುಗಳು ಇನ್ನೊಂದೆಡೆ. ಹೀಗೆ ಮಾತನಾಡುವ ಭರದಲ್ಲಿ ನಿರಂತರ ಸಂಗೀತ ಅಸ್ಪಷ್ಟವಾಗಿಯೇ ಕೇಳುತ್ತದೆ ಎಂದರೆ ತಪ್ಪಾಗಲಾರದು.
ಇನ್ನು ಕಿವಿಗೆ ಇಯರ್‌ಫೋನ್ ಹಾಕಿ ತಮ್ಮದೇ ಪ್ರಪಂಚದಲ್ಲಿ ತೇಲುವವರು, ಎಚ್ಚರವಾಗುವುದು “ಪಿರ ಪೋಲೆ ಮಾರ್ರೆ, ಭಾಷೆ ಅರ್ಥ ಆಪುಜ? ಕೈಕಂಜಿಲೆಕ್ಕ ದಾಯೆಗ್ ಮಲ್ಪುವರ್?’ (ಹಿಂದೆ ಹೋಗಿ ಮಹಾರಾಯರೆ, ಭಾಷೆ ಅರ್ಥ ಆಗೋದಿಲ್ವಾ? ಪ್ರಾಣಿಗಳ ತರಹ ಯಾಕೆ ಮಾಡ್ತೀರಿ?) ಎಂದು ಕಂಡಕ್ಟರ್ ಬೈದಾಗಲೇ! ಉಳಿದ ಸಹಪ್ರಯಾಣಿಕರೆಲ್ಲರೂ ಕೇಳುಗರು. ನಮ್ಮ ಬಸ್ಸಲ್ಲಿರುವವರು ಸುತ್ತಮುತ್ತಲಿನ ಊರಿನವರು, ಹಾಗಾಗಿ ಎಲ್ಲರೂ ನಗುವಿಗಷ್ಟೇ ಚಿರಪರಿಚಿತರು ! ಬೆಳಗ್ಗಿನ ಪ್ರಯಾಣದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ತುಂಬಿರುತ್ತಾರೆ. ಅವರನ್ನು ಮತ್ತು ಅವರಿಗಿಂತ ಜಾಸ್ತಿ ಭಾರದ ಅವರ ಬ್ಯಾಗುಗಳನ್ನು ಹೊತ್ತು ರಸ್ತೆಯಲ್ಲಿ ಬಸ್ ಸಾಗುತ್ತಿರಬೇಕಾದರೆ 90 ಡಿಗ್ರಿಗಿದ್ದ ಬಸ್ ತಿರುವುಗಳಲ್ಲಿ 45 ಡಿಗ್ರಿಗೆ ವಾಲಿದ ಅನುಭವವಂತೂ ಹೇಳತೀರದು. ತಮ್ಮ ಬ್ಯಾಗಲ್ಲಿ ಪುಸ್ತಕದ ಜೊತೆಗೆ ಮಧ್ಯಾಹ್ನ ಊಟಕ್ಕೆಂದು ಕೊಂಡು ಹೋಗಿರುವ ಬುತ್ತಿ, ಕಾಲೇಜು ತಲುಪುವಷ್ಟರಲ್ಲಿ ಪುಸ್ತಕಗಳು ಊಟದ ರುಚಿಯನ್ನು ಸವಿದಿರುತ್ತದೆ.
ಇನ್ನು ಮನೆಯಲ್ಲಿ ಕೂತವರ ಪಾಡಂತೂ ಹೇಳಲಾಗದು. ಮಧ್ಯಾಹ್ನ ಭರ್ಜರಿಯಾಗಿ ಊಟ ಮಾಡಿ ಮಲಗಿದರೆ, ಇನ್ನೇನು ನಿದ್ದೆ ಬಂತು ಎನ್ನುವಷ್ಟರಲ್ಲಿ ಈ ಬಸ್ ಬರುತ್ತದೆ, ತನ್ನ ಜೋರಾದ ಹಾರ್ನ್ ಹಾಕಿಕೊಂಡು, ನಿದ್ದೆ ಬಂದವರೆಲ್ಲ ಎಚ್ಚರ… ಎಚ್ಚರ… ಇನ್ನೂ ಕೂಲಿ ಕೆಲಸಕ್ಕೆಂದು ನಮ್ಮ ಊರಿಗೆ ಬರುವವರಿಗೆ ವಾಚ್ ಅಥವಾ ಸಮಯದ ಆವಶ್ಯಕತೆಯೇ ಇಲ್ಲ. ಏಕೆಂದರೆ, ಸಮಯಕ್ಕೆ ಸರಿಯಾಗಿ ಬಸ್ ಬರುತ್ತದೆ. ಇದರ ಹಾರ್ನ್ನಿಂದ ಸಮಯ ಗೊತ್ತಾಗುತ್ತದೆ. ಕಿವಿ ಕೇಳದವರಿಗೂ ಇದರ ಹಾರ್ನ್ ಕೇಳುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಾಹಸಿ ಡ್ರೈವರ್! ಅವರ ಡ್ರೈವಿಂಗ್ ಸ್ಪೀಡಿಗೆ ನಾವೇ ಹಾರಿಹೋಗುತ್ತೇವೇನೋ ಎನ್ನುವ ಭಯ! ಎಲ್ಲರ ಜೀವವೂ ಡ್ರೈವರ್ ಕೈಯಲ್ಲೇ ಆದರೂ ಇನ್ನೊಂದು ವಾಹನಕ್ಕೆ ಗುದ್ದಿದ್ದು ನೆನಪಿಲ್ಲ ! ಇಂಥ ಸಾಹಸಿ ಮತ್ತು ಹರಸಾಹಸಿ ಬಸ್ ನಿರ್ವಾಹಕರಿಗೆ ನನ್ನದೊಂದು ದೊಡ್ಡ ಸಲಾಂ. ಇದನ್ನೆಲ್ಲಾ ಓದಿದ ಮೇಲೆ ನಿಮಗೂ ಅನಿಸ್ತಿದೆಯಾ, ನಾನೂ “ಐಶ್ವರ್ಯ’ದಲ್ಲಿ ಪ್ರಯಾಣ ಮಾಡಬೇಕು ಅಂತ !
ರಕ್ಷಿತಾ ಪ್ರಭು ಪಾಂಬೂರು