ಜೇವರ್ಗಿ: ಪಟ್ಟಣದಿಂದ 14ಕಿ.ಮೀ ದೂರದಲ್ಲಿರುವ ತಾಲೂಕಿನ ಮಾವನೂರ ಗ್ರಾಮಕ್ಕೆ ಕಳೆದ ಎಂಟು ವರ್ಷಗಳಿಂದ ಬಸ್ ಸೌಲಭ್ಯವೇ ಇಲ್ಲ. ಹೀಗಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಇದಕ್ಕೂ ಮೊದಲು ಜೇವರ್ಗಿಯಿಂದ ಮಾವನೂರ ಮೂಲಕ ಹರವಾಳ ಗ್ರಾಮಕ್ಕೆ ಬಸ್ ಸೌಲಭ್ಯ, ತದ ನಂತರ ಜೇವರ್ಗಿಯಿಂದ ಮಾವನೂರ ಮೂಲಕ ಹರನೂರ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಇತ್ತು. ರಸ್ತೆ ಸರಿಯಿಲ್ಲ ಎಂಬ ಕುಂಟು ನೆಪ ಹೇಳಿ ಕಳೆದ ಎಂಟು ವರ್ಷಗಳ ಹಿಂದೆಯೇ ಈ ಎರಡು ಬಸ್ ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ತಾಲೂಕಿನ ಮಾವನೂರ ಗ್ರಾಮದಿಂದ ನಿತ್ಯ 50ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಾಲೆ-ಕಾಲೇಜಿಗೆಂದು ಜೇವರ್ಗಿ ಬಂದು ಹೋಗುತ್ತಾರೆ. ನಿತ್ಯ ಶಾಲೆಗೆ ಹೋಗಲು ಮಕ್ಕಳು 2ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ-50ರ ತನಕ ನಡೆದುಕೊಂಡೇ ಬಂದು ಖಾಸಗಿ ವಾಹನಗಳ ಮೂಲಕ ಜೇವರ್ಗಿಗೆ ಬರಬೇಕು. ಸಾರಿಗೆ ಬಸ್‌ನ ವ್ಯವಸ್ಥೆ ಇಲ್ಲದ ಕಾರಣ ಬೈಕ್, ಟಂಟಂ ಸೇರಿದಂತೆ ಇನ್ನಿತರೆ ವಾಹನ ಸವಾರರಿಗೆ ಕೈ ಮಾಡಿ ವಾಹನ ನಿಲ್ಲಿಸಿ ಹತ್ತುವ ಪರಿಸ್ಥಿತಿ ಇದೆ. ಮಕ್ಕಳು ಹತ್ತುವಾಗ ಏನಾದರೂ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.
ಹಣವುಳ್ಳ ವಿದ್ಯಾರ್ಥಿಗಳು ಆಟೋ, ಜೀಪ್‌ಗ್ಳಿಗೆ ಹಣ ಕೊಟ್ಟು ಹೋದರೆ, ಬಡ ವಿದ್ಯಾರ್ಥಿಗಳು ಮಾತ್ರ ನಿತ್ಯ 4 ಕಿ.ಮೀ ನಡೆದುಕೊಂಡು ಹೋಗಿ ಬಂದು ತೊಂದರೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಸಿದ್ಧು ಮಾವನೂರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜೇವರ್ಗಿ ಬಸ್ ಘಟಕದ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಕೇಳಿದರೆ ಇಲ್ಲಸಲ್ಲದ ಕುಂಟು ನೆಪ ಹೇಳಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಸಾರಿಗೆ ಅಧಿಕಾರಿಗಳು ಕೂಡಲೇ ನಿತ್ಯ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಎರಡು ಬಸ್, ಸಂಜೆ ಎರಡು ಬಸ್ ವ್ಯವಸ್ಥೆ ಮಾಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಜೇವರ್ಗಿ ಪಟ್ಟಣದಲ್ಲಿ ವಿದ್ಯಾರ್ಥಿಗಳೊಂದಿಗೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮೊದಲು ರಸ್ತೆ ಸಮಸ್ಯೆಯಿಂದ ಮಾವನೂರ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೂರ್‍ನಾಲ್ಕು ದಿನಗಳಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ರಸ್ತೆ ಸರ್ವೇ ನಡೆಸಿದ ನಂತರ ಬಸ್ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು.
-ಕೃಷ್ಣ ಪವಾರ, ಪ್ರಭಾರಿ ವ್ಯವಸ್ಥಾಪಕ, ಬಸ್ ಘಟಕ, ಜೇವರ್ಗಿ.
ವಿದ್ಯಾರ್ಥಿಗಳು ಅನೇಕ ಬಾರಿ ಜೇವರ್ಗಿ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಕೇಳಿದರೆ ಇಲ್ಲಸಲ್ಲದ ಕುಂಟು ನೆಪ ಹೇಳಿಕೊಂಡು ವಿದ್ಯಾರ್ಥಿಗಳ ಭವಿಷ್ಯ ಜತೆ ಚೆಲ್ಲಾಟವಾಡುತ್ತಿದ್ದಾರೆ.
-ಸಿದ್ಧು ಮಾವನೂರ, ಗ್ರಾಪಂ ಸದಸ್ಯ
-ವಿಜಯಕುಮಾರ ಎಸ್.ಕಲ್ಲಾ