Advertisement
ಸುಳ್ಯ ತಾಲೂಕಿನಲ್ಲಿ ನೂತನ ಬಸ್ ಡಿಪೋ ಆದ ಮೇಲೆ ತಾಲೂಕಿನ ಕೆಲವೊಂದು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒಂದು ವರ್ಷದಿಂದ ಬೇಡಿಕೆ ವ್ಯಕ್ತಗೊಳ್ಳುತ್ತಿದೆ.ಚೊಕ್ಕಾಡಿ-ಕಳಂಜ ಭಾಗವಾಗಿ ಪುತ್ತೂರಿಗೆ ಸಂಚರಿಸುವ ಬಸ್ಸುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಮಾರ್ಗದಲ್ಲಿ ಎರಡು ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಬಾಳಿಲ, ಬೆಳ್ಳಾರೆ ಹಾಗೂ ಪೆರುವಾಜೆಯಲ್ಲಿರುವ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದೆ.
ನಿತ್ಯ ಬೆಳಗ್ಗೆ 7.45ಕ್ಕೆ ಸುಳ್ಯ ನಿಲ್ದಾಣದಿಂದ ಹೊರಟು ಚೊಕ್ಕಾಡಿ, ಕಳಂಜ, ಬೆಳ್ಳಾರೆ ಮಾರ್ಗವಾಗಿ ಪುತ್ತೂರಿಗೆ ಒಂದು ಬಸ್ ಸಂಚರಿಸುತ್ತಿದ್ದು, ಶೇಣಿ ಎಂಬಲ್ಲಿಯೇ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಬಸ್ಸನ್ನೇರುವುದರಿಂದ ಮುಂದಿನ ಎಲ್ಲ ನಿಲ್ದಾಣಗಳಲ್ಲಿಯೂ ನೂಕುನುಗ್ಗಲು ಇರುತ್ತದೆ. ಹಲವು ಕಡೆಗಳಲ್ಲಿ ಬಸ್ ನಿಲ್ಲಿಸಲಾಗದ ಸ್ಥಿತಿಯೂ ಇರುತ್ತದೆ. ಸಣ್ಣ ಮಕ್ಕಳೂ ಬಸ್ಸಿನಲ್ಲಿ ನಿಲ್ಲಲೂ ಜಾಗವಿಲ್ಲದೆ ಅಪಾಯಕಾರಿಯಾಗಿ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತ ಸಂಚರಿಸುತ್ತಾರೆ. ಹಲವು ವಿದ್ಯಾರ್ಥಿಗಳು, ಉದ್ಯೋಗಿಗಳು ಸರಕಾರಿ ಬಸ್ಸನ್ನೇ ನಂಬಿದ್ದು, ನಿಲುಗಡೆ ದೊರೆಯದೆ ಆಟೋ ರಿಕ್ಷಾ, ಜೀಪಿನಂತಹ ಖಾಸಗಿ ವಾಹನಗಳಲ್ಲಿ ದುಬಾರಿ ದರ ತೆತ್ತು ಸಂಚರಿಸಬೇಕಾಗಿದೆ. ಶಾಲೆ-ಕಾಲೇಜಿಗೆ ತೆರಳಲೂ ತಡವಾಗುತ್ತಿದ್ದು, ಹಲವು ಸಂದರ್ಭಗಳಲ್ಲಿ ಪ್ರಥಮ ಅವಧಿಯ ತರಗತಿಗಳನ್ನು ತಪ್ಪಿಸಿಕೊಂಡಿದ್ದಿದೆ. ಖಾಸಗಿ ಉಪಟಳ
ಚೊಕ್ಕಾಡಿ, ಕಳಂಜ ಭಾಗದಲ್ಲಿ ವ್ಯಾನ್ ಜೀಪುಗಳಂತಹ ಖಾಸಗಿ ವಾಹನಗಳದ್ದೇ ದರ್ಬಾರ್. ಸ್ಪರ್ಧೆಗೆ ಇಳಿದವರಂತೆ ಸರಕಾರಿ ಬಸ್ಸು ನಿಲ್ದಾಣಕ್ಕೆ ಬರುವ ಕೊಂಚ ಮೊದಲು ಹೊರಡುವು¨ರಿಂದ ಸರಕಾರಿ ಬಸ್ಸಿಗೆ ಪ್ರಯಾಣಿಕರ ಕೊರತೆಯಾಗುತ್ತಿದೆ.ಸಾರಿಗೆ ಇಲಾಖೆಗೆ ನಷ್ಟವುಂಟಾಗಬಹುದೆಂಬ ಲೆಕ್ಕಾಚಾರದಿಂದ ಬಸ್ ಸಂಚಾರವನ್ನು ಹೆಚ್ಚಿಸಲು ಪುತ್ತೂರು ಮತ್ತು ಸುಳ್ಯ ಡಿಪೋ ಅಧಿಕಾರಿಗಳು ಹಿಂದಡಿಯಿಡುತ್ತಿದ್ದಾರೆ. ಸಾವಿರಾರು ರೂ. ತೆತ್ತು ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯ ನಡುವೆ ಬಲಿಪಶುಗಳಾಗಿದ್ದು, ನಿಯಮಿತ ಸಂಖ್ಯೆಯಲ್ಲಿರುವ ಬಸ್ಸಿನಲ್ಲಿ ಪ್ರಯಾಣಿಸಲಾಗದೆ ಖಾಸಗಿ ವಾಹನಗಳಲ್ಲಿ ತೆರಳುವಂತಾಗಿದ್ದು ಕಟು ವಾಸ್ತವ.
Related Articles
ಸಂದರ್ಭದ ಲಾಭ ಪಡೆಯುತ್ತಿರುವ ಖಾಸಗಿ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಪಡೆಯುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥ ಸಹಿತ ಶುಭಕಾರ್ಯಗಳ ಬಾಡಿಗೆ ನೆಪದಲ್ಲಿ ವ್ಯಾನುಗಳು ನಿತ್ಯ ಸಂಚಾರಕ್ಕೆ ಬರುವುದಿಲ್ಲ. ಪರೀಕ್ಷೆ ಸಂದರ್ಭದಲ್ಲೇ ಇವೂ ಕೈಕೊಡುವುದರಿಂದ ಹಲವು ವಿದ್ಯಾರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಒದ್ದಾಡುತ್ತಿದ್ದಾರೆ. ಬಸ್ ಸಮಸ್ಯೆ ನಿವಾರಿಸುವ ಸಲುವಾಗಿ ಚೊಕ್ಕಾಡಿ-ಕಳಂಜ ಭಾಗದ ಗ್ರಾಮಸ್ಥರು ಅನೇಕ ಬಾರಿ ಸಾರಿಗೆ ಇಲಾಖೆಗೆ, ಡಿಪೋಗಳಿಗೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ನೀಡಿದ್ದರೂ ಇಲಾಖೆಯಿಂದ ಸೂಕ್ತ ಸ್ಪಂದನೆ ಈವರೆಗೂ ಸಿಕ್ಕಿಲ್ಲ.
Advertisement
ಸಂಚಾರ ಪುನರಾರಂಭಿಸಿಕೆಲವು ವರ್ಷಗಳ ಹಿಂದೆ ಎರಡು ಗಂಟೆಗೆ ಒಂದರಂತೆ ಬಸ್ಸುಗಳು ಸಂಚರಿಸುತ್ತಿದ್ದವು. ಇತ್ತೀಚೆಗೆ ಯಾವ್ಯಾವುದೋ ನೆಪವೊಡ್ಡಿ ಬಸ್ಸುಗಳು ಸೀಮಿತವಾಗಿ ಸಂಚರಿಸುತ್ತಿವೆ. ಸ್ಥಗಿತಗೊಂಡ ಅಷ್ಟೂ ಬಸ್ಸುಗಳು ಮರಳಿ ಆರಂಭಗೊಳ್ಳಬೇಕು. ಹಾಗೆಯೇ ಬಸ್ಸುಗಳ ನಿಲ್ದಾಣಗಳು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ವಿಂಗಡಿಸಬೇಕು ಎಂದು ಸ್ಥಳೀಯರಾದ ಶಿವಪ್ರಸಾದ್ ಕೋಟೆ ಆಗ್ರಹಿಸಿದ್ದಾರೆ. ಸಕಾಲದಲ್ಲಿ ತಲುಪಲು ಕಷ್ಟ
ನೂಕುನುಗ್ಗಲಿರುವ ನಮ್ಮೂರಿನ ಬಸ್ಸಿನಲ್ಲಿ ನಿತ್ಯವೂ ಶಾಲೆಗೆ ಹೋಗಿ ಬರಲು ಕಷ್ಟಪಡುತ್ತಿದ್ದೇವೆ. ಪುಸ್ತಕಗಳಿರುವ ಚೀಲ, ಛತ್ರಿ ಹಿಡಿದುಕೊಂಡು ಬಸ್ಸನ್ನು ಏರುವುದೇ ಕಷ್ಟ. ಪರೀಕ್ಷೆಗಳ ಸಮಯದಲ್ಲಂತು ಸಕಾಲದಲ್ಲಿ ಶಾಲೆಗೆ ತಲುಪಲು ಕಷ್ಟ. ಬೆಳಗ್ಗೆ ಹಾಗೂ ಸಂಜೆ ಅವಧಿಯಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಿಸಿ.
– ರಜನೀಶ್ ವಾರಣಾಶಿ
ವಿದ್ಯಾರ್ಥಿ ಬಾಲಚಂದ್ರ ಕೋಟೆ