Advertisement

ಸರಕಾರಿ ಶಾಲೆಗೆ ಶಾಸಕರ ಅನುದಾನದಲ್ಲಿ ಬಸ್‌: ನಿರ್ವಹಣೆಯೇ ದೊಡ್ಡ ಸವಾಲು

01:33 AM Jul 10, 2022 | Team Udayavani |

ಉಡುಪಿ: ಶಾಸಕರ ಪ್ರದೇಶಾ ಭಿವೃದ್ಧಿ ನಿಧಿಯಲ್ಲಿ ಸರಕಾರಿ ಶಾಲೆಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಲು ಸರಕಾರ ಅನುಮೋದನೆ ನೀಡಿದೆ. ಆದರೆ ಯಾವ ಮಾನದಂಡದಡಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸ್ಪಷ್ಟಪಡಿಸಿಲ್ಲ. ಯಾವುದೇ ಸರಕಾರ ಶಾಲೆಗಳಿಗೆ ಈವರೆಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಸರಕಾರದಿಂದ ಶಾಲಾ ಬಸ್‌ ನೀಡಿಲ್ಲ. ಕೆಲವು ಶಾಲೆಗಳು ವಿವಿಧ ಸಂಸ್ಥೆಗಳ ಸಿಎಸ್‌ಆರ್‌ ನಿಧಿ ಪಡೆದುಕೊಂಡು, ಹಲವು ಶಾಲೆಗಳು ಸ್ಥಳೀಯ ದಾನಿಗಳ ಮೂಲಕ ಹಾಗೂ ಇನ್ನು ಕೆಲವು ಶಾಲೆಗಳು ಹಳೇ ವಿದ್ಯಾರ್ಥಿ ಗಳ ಸಂಘದ ಮೂಲಕ ಶಾಲಾ ಮಕ್ಕಳಿಗೆ ಬಸ್‌ ವ್ಯವಸ್ಥೆಯನ್ನು ತಾತ್ಕಾಲಿಕ ಹಾಗೂ ಶಾಶ್ವತ ನೆಲೆಯಲ್ಲಿ ಮಾಡಿಕೊಂಡಿವೆ. ಆದರೆ ಈ ಬಸ್‌ಗಳ ನಿರ್ವಹಣೆಯೇ ಶಾಲೆಗೆ ಕಗ್ಗಂಟಾಗಿದೆ.

Advertisement

ಆಯ್ಕೆಯೇ ಸವಾಲು
ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶಾಲೆಗೆ ಹೊಸ ಕಟ್ಟಡ, ಶೌಚಾಲಯ ಸಹಿತ ಮೂಲಸೌಕರ್ಯಕ್ಕಾಗಿ ಈವರೆಗೂ ಶಾಲೆ
ಗಳಿಂದ ಶಾಸಕರಿಗೆ ಅರ್ಜಿ ಸಲ್ಲಿಸಲಾಗುತ್ತಿತ್ತು. ಈಗ ಶಾಲಾ ವಾಹನದ ವ್ಯವಸ್ಥೆ ಮಾಡುವಂತೆಯೂ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಒಂದು ಶಾಲೆಗೆ ಒಂದು ಬಸ್‌ ಖರೀದಿಗೆ ಕನಿಷ್ಠ 15 ಲ.ರೂ.ಗಳಿಂದ 20 ಲ.ರೂ. ವರೆಗೂ ಬೇಕಾಗುತ್ತದೆ. ವರ್ಷಕ್ಕೆ ಎಷ್ಟು ಶಾಲೆಗೆ ಶಾಲಾ ಬಸ್‌ಗಾಗಿ ಅನುದಾನ ನೀಡಬೇಕು ಮತ್ತು ಅದಕ್ಕಾಗಿ ಯಾವ ಮಾನದಂಡ ಅನುಸರಿಸಬೇಕು ಎಂಬುದಕ್ಕೆ ನಿಯಮವಿಲ್ಲ. ಶಾಸಕರು ತಮ್ಮ ವಿವೇಚನೆ ಆಧಾರದಲ್ಲಿ ನಿರ್ಧಾರ ತೆಗೆದು ಕೊಳ್ಳಬಹುದಾಗಿದೆ. ಆದರೆ ಸ್ಥಳೀಯ ನಾಯಕರ ಒತ್ತಡ ಹೆಚ್ಚಿರುವುದರಿಂದ ಆಯ್ಕೆಯೂ ಸವಾಲಾಗಿದೆ.

ನಿರ್ವಹಣೆ ಅಸಾಧ್ಯ
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯಿಂದ ಶಾಲಾ ವಾಹನ ಖರೀದಿ ಮಾಡಿ ಅದರ ನಿರ್ವಹಣೆಯನ್ನು ಸಂಪೂರ್ಣವಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ನೋಡಿಕೊಳ್ಳಬೇಕು ಎಂದು ಸರಕಾರ ಷರತ್ತು ವಿಧಿಸಿದೆ. ವಾಸ್ತವವಾಗಿ ಎಸ್‌ಡಿಎಂಸಿಗೆ ಇಲಾಖೆಯಿಂದ ಪ್ರತ್ಯೇಕ ಅನುದಾನ ಬರುವುದಿಲ್ಲ. ಹೀಗಾಗಿ ಸ್ಥಳೀಯ ದಾನಿಗಳು ಅಥವಾ ವಿದ್ಯಾರ್ಥಿಗಳಿಂದಲೇ ಹಣ ಸಂಗ್ರಹ ಮಾಡಬೇಕು. ಒಂದು ವಾಹನದ ನಿರ್ವಹಣೆ (ಪೆಟ್ರೋಲ್‌/ ಡೀಸೆಲ್‌) ಮತ್ತು ಚಾಲಕನ ವೇತನ ಸಹಿತ ತಿಂಗಳಿಗೆ ಕನಿಷ್ಠ 30 ಸಾವಿರದಿಂದ 40 ಸಾವಿರ ರೂ. ಬೇಕಾಗುತ್ತದೆ. ಗ್ರಾಮೀಣ ಭಾಗದ ಯಾವುದೇ ಸರಕಾರಿ ಶಾಲೆಯಲ್ಲಿ ತಿಂಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ಸುಲಭವಿಲ್ಲ. ಈ ಪ್ರಕ್ರಿಯೆ ನಿರಂತರ ನಡೆಯಬೇಕಿರುವುದರಿಂದ ಸರಕಾರವೇ ಯಾವುದಾದರೂ ಮೂಲದಿಂದ ಇದಕ್ಕೆ ಅನುದಾನ ನೀಡಬೇಕು. ಇಲ್ಲವಾದರೆ ಶಾಲೆ ಯಿಂದ ನಿರ್ವಹಣೆ ಕಷ್ಟವಾಗಲಿದೆ ಎಂಬುದು ಎಸ್‌ಡಿಎಂಸಿ ಸದಸ್ಯರ ಅಭಿಪ್ರಾಯವಾಗಿದೆ.

ಸದ್ಯದ ವ್ಯವಸ್ಥೆ ಹೇಗಿದೆ?
ಉಡುಪಿಯಲ್ಲಿ 50ಕ್ಕೂ ಅಧಿಕ ಶಾಲೆ ಹಾಗೂ ದ.ಕ.ದಲ್ಲಿ 100ಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಕರೆತರಲು ಶಾಲಾ ವಾಹನದ ವ್ಯವಸ್ಥೆಯನ್ನು ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳ ಸಂಘದ ಸಮನ್ವಯದಿಂದ ಮಾಡಿಕೊಂಡಿವೆ. ಈ ಶಾಲಾ ವಾಹನಗಳಲ್ಲಿ ಬಹುತೇಕ ಬಾಡಿಗೆಯದಾಗಿದ್ದು, ಅದರಲ್ಲಿ ರಿಕ್ಷಾ, ಟಿಟಿ, ಆಮ್ನಿ ಇತ್ಯಾದಿ ಹೆಚ್ಚಿವೆ. ಅಂದರೆ ನಿರ್ದಿಷ್ಟ ಶಾಲಾ ವಾಹನ (ಹಳದಿ ಬಣ್ಣದ) ಬಳಸುತ್ತಿಲ್ಲ. ಕಾರಣ, ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬಂದ ಅನಂತರ ಬೇರೆ ಬಾಡಿಗೆಗೆ ಹೋಗುತ್ತಾರೆ. ಪುನಃ ಸಂಜೆ ಶಾಲೆ ಬಿಡುವಾಗ ಬರುತ್ತಾರೆ. ಇದರಿಂದ ಚಾಲಕರ ವೇತನ ಮತ್ತು ಬಾಡಿಗೆ ಕಡಿಮೆಯಾಗುತ್ತದೆ. ಶಾಶ್ವತ ವಾಹನ ವ್ಯವಸ್ಥೆ ಮಾಡಿಕೊಂಡಿರುವ ಶಾಲೆಗಳಲ್ಲಿ ಶಿಕ್ಷಕರು ಅಥವಾ ಎಸ್‌ಡಿಎಂಸಿ ಸದಸ್ಯರೇ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯಾವುದೇ ಸರಕಾರಿ ಶಾಲೆಗೆ ಈವರೆಗೂ ಸರಕಾರದಿಂದ ಶಾಲಾ ವಾಹನ ನೀಡಿಲ್ಲ. ಈಗ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶಾಲಾ ವಾಹನ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ನಿರ್ವಹಣೆ ಶಾಲೆಯಿಂದಲೇ ಮಾಡಬೇಕಿರುವುದರಿಂದ ಅದು ಕೂಡ ಹೊರೆಯಾಗಲಿದೆ. ದಾನಿಗಳು ಅಥವಾ ಬೇರೆ ಯಾವುದಾದರೂ ಆದಾಯದ ಮೂಲ ಬೇಕಾಗುತ್ತದೆ. ಇಲ್ಲವಾದರೆ ನಿರ್ವಹಣೆ ಕಷ್ಟ.
– ಗೋವಿಂದ ಮಡಿವಾಳ / ಸುಧಾಕರ,
ಡಿಡಿಪಿಐ, ಉಡುಪಿ /ದಕ್ಷಿಣ ಕನ್ನಡ

Advertisement

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next