ಬ್ರಹ್ಮಾವರ: ತಾಂತ್ರಿಕ ಕಾರಣಗಳಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇವಾಸಿಂಧು ಕಚೇರಿಯೊಳಗೆ ನುಗ್ಗಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ರವಿವಾರ ನಡೆದಿದೆ.
ಘಟನೆಯಲ್ಲಿ ಬಸ್ ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ರಜಾದಿನವಾದ ಹಿನ್ನಲೆಯಲ್ಲಿ ಸೇವಾ ಸಿಂಧು ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ಅನಾಹುತವೊಂದು ತಪ್ಪಿದೆ.
ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಸ್ಟಾರ್ಟ್ ಆಗದ ಕಾರಣ ಸಿಬ್ಬಂದಿ ಹಿಂದಿನಿಂದ ದೂಡಿಕೊಂಡು ಹೋಗಿದ್ದರು. ಇಳಿಜಾರಾದ ಕಾರಣ ಬಸ್ ವೇಗವಾಗಿ ಚಲಿಸಿದ್ದು, ಎದುರಿದ್ದ ತಾಲೂಕು ಪಂಚಾಯತ್ ಕಟ್ಟಡದ ಕಡೆಗೆ ಸಾಗಿದೆ. ಬಸ್ ನಲ್ಲಿ ಚಾಲಕನಿದ್ದರೂ ತಾಂತ್ರಿಕ ದೋಷ ಉಂಟಾಗಿ ಬ್ರೇಕ್ ಕೂಡಾ ಕೆಲಸ ಮಾಡದೆ ಬಸ್ ನ್ನು ನಿಯಂತ್ರಣ ತರಲು ಸಾಧ್ಯವಾಗಿಲ್ಲ. ವೇಗವಾಗಿ ಬಂದ ಬಸ್ ಸೇವಾ ಸಿಂಧು ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ.
ಕಟ್ಟಡದ ಮುಂಭಾಗಕ್ಕೆ ಹಾನಿಯಾಗಿದ್ದು, ಕಚೇರಿಯ ಒಳಗಿದ್ದ ಕಂಪ್ಯೂಟರ್ ಕೂಡಾ ಜಖಂ ಆಗಿದೆ. ಬಸ್ ನಲ್ಲಿ ಸುಮಾರು ಹತ್ತು ಮಂದಿ ಪ್ರಯಾಣಿಕರಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ತಪ್ಪಿದ ಅನಾಹುತ: ಭಾನುವಾರವಾದ ಕಾರಣ ಸೇವಾ ಸಿಂಧು ಕಚೇರಿಯಲ್ಲಿ ಯಾರೂ ನಾಗರಿಕರು, ಸಿಬ್ಬಂದಿ ಇರಲಿಲ್ಲ. ಆದರೆ ಇತರ ದಿನಗಳಲ್ಲಿ ಆಧಾರ್ ತಿದ್ದುಪಡಿ ಮುಂತಾದ ಕಾರ್ಯಗಳಿಗೆ ಇಲ್ಲಿ ದೊಡ್ಡ ಮಟ್ಟದ ಕ್ಯೂ ಇರುತ್ತದೆ. ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.