Advertisement
ಇದು, ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟ್ಟಿದ್ದ ಖಾಸಗಿ ಬಸ್‌ನ್ನು ದುಷ್ಕರ್ಮಿಗಳು ಹೈಜಾಕ್ ಮಾಡಿದಾಗ ಪ್ರಯಾಣಿಕರಿಗೆ ಉಂಟಾದ ಅನುಭವ. ಸಾಲ ಮರುಪಾವತಿ ಮಾಡದ್ದಕ್ಕೆ ಫೈನಾನ್ಸ್ ಕಂಪನಿಯೊಂದು ಬಸ್ ಅನ್ನು ಅಪಹರಿಸಿರುವುದು ಆ ನಂತರ ಗೊತ್ತಾಯಿತು.
ಕಣ್ಣೆದುರೇ ನಡೆಯುತ್ತಿದ್ದನ್ನೆಲ್ಲಾ ನೋಡಿದ ಪ್ರಯಾಣಿಕರಿಗೆ ಜೀವ ಭಯ ಕಾಡಿದೆ. ಆಗ ಕೆಲವರು ದುಷ್ಕರ್ಮಿಗಳನ್ನು ಪ್ರಶ್ನಿಸಿದರೆ ನಾವು ಸಿಸಿಬಿ ಪೊಲೀಸರು ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. ಗೋಡೌನ್‌ನಲ್ಲಿ ಬಸ್ ನಿಲ್ಲಿಸಿದ್ದರಿಂದ ಅನುಮಾನಗೊಂಡ ನಾಲ್ಕೈದು ಮಂದಿ ಪ್ರಯಾಣಿಕರು ಕೂಡಲೇ ಪೊಲೀಸ್ ಸಹಾಯವಾಣಿ “ನಮ್ಮ-100’ಗೆ ಕರೆ ಮಾಡಿ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಸುಮಾರು 30 ಮಂದಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ನಾಲ್ಕು ಮಂದಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮೂವರು ತಲೆಮರೆಸಿಕೊಂಡಿದ್ದಾರೆ. ಬಳಿಕ 45 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
Related Articles
ಅಪಹರಣಕ್ಕೊಳಗಾದ ಬಸ್ ಕೇರಳದ ನೌಷಾದ್ ಎಂಬಾತನಿಗೆ ಸೇರಿದ್ದು, ಈತ ಫುಲ್ಟ್ರಾನ್ ಎಂಬ ಫೈನಾನ್ಸಿ ಕಂಪನಿಯಿಂದ ಸಾಲ ಪಡೆದುಕೊಂಡಿದ್ದ. ಆದರೆ, ನಿಗದಿತ ಸಮಯಕ್ಕೆ ಮರು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಣ ವಸೂಲಿ ಮಾಡುವ ಖಾಸಗಿ ಕಂಪನಿಗೆ ಬಸ್ ಜಪ್ತಿ ಮಾಡಲು ಫೈನಾನ್ಸ್ ಕಂಪನಿ ಸೂಚಿಸಿತ್ತು. ಈ ಸಂಬಂಧ ದುಷ್ಕರ್ಮಿಗಳು ಪೊಲೀಸರ ಹೆಲ್ಮೆಟ್ ಬಳಸಿ ಬಸ್ ಹೈಜಾಕ್ ಮಾಡಿದ್ದಾರೆ. ಬಳಿಕ ಜಪ್ತಿ ಮಾಡಿದ ವಾಹನಗಳನ್ನು ನಿಲ್ಲಿಸುತ್ತಿದ್ದ ಪಟ್ಟಣಗೆರೆಯ ಗೋಡೌನ್‌ಗೆ ಕೊಂಡೊಯ್ದಿದ್ದಾರೆ.
Advertisement
ಆರು ಗಂಟೆ ಪರದಾಟಈ ಘಟನೆಯಿಂದ ಎಲ್ಲ ಪ್ರಯಾಣಿಕರು ಸುಮಾರು ಆರು ಗಂಟೆಗಳ ಕಾಲ ಆತಂಕದಲ್ಲೇ ಕಾಲ ಕಳೆಯಬೇಕಾಯಿತು. ಸುರಕ್ಷಿತವಾಗಿ ಪ್ರಯಾಣಿಕರನ್ನು ರಕ್ಷಿಸಿದ ಪೊಲೀಸರು ಬಸ್ ಅನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು, ಬಳಿಕ ಚಾಲಕ ಸೇರಿ ಎಲ್ಲ ಪ್ರಯಾಣಿಕರಿಂದ ಹೇಳಿಕೆ ದಾಖಲಿಸಿಕೊಂಡು ಶನಿವಾರ ನಸುಕಿನ 3.30ರ ಸುಮಾರಿಗೆ ಕೇರಳ ಕಣ್ಣೂರಿಗೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸ್ ಸಹಾಯವಾಣಿ “ನಮ್ಮ-100’ನಿಂದ ದೂರು ಬರುತ್ತಿದ್ದಂತೆ ನಮ್ಮ ಸಿಬ್ಬಂದಿ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಹಾಗೆಯೇ ಅಕ್ರಮವಾಗಿ ಬಸ್ ತಡೆ ಹಿಡಿದಿದ್ದ ಫೈನಾನ್ಸ್ ಕಂಪನಿಯ ಮೇಲೆ ದಾಳಿ ನಡೆಸಿ ಜಪ್ತಿ ಮಾಡಲಾಗುವುದು. ನಸುಕಿನ 3.30ರ ಸುಮಾರಿಗೆ ಕಾನೂನು ಪ್ರಕ್ರಿಯೆ ಮುಗಿಸಿ ಬಸ್ ಮತ್ತು ಪ್ರಯಾಣಿಕರನ್ನು ಕಣ್ಣೂರಿಗೆ ಕಳುಹಿಸಿಕೊಡಲಾಯಿತು.
– ರವಿ ಡಿ. ಚನ್ನಣ್ಣನವರ್, ಪಶ್ಚಿಮ ವಿಭಾಗದ ಡಿಸಿಪಿ