Advertisement

ಬಸ್‌ ಹೈಜಾಕ್‌ ಪ್ರಕರಣ: ಪ್ರಮುಖ ಆರೋಪಿ ಸೆರೆ

07:55 AM Apr 30, 2018 | |

ಬೆಂಗಳೂರು: ಸಾಲ ಮರುಪಾವತಿ ಮಾಡದ ಕಾರಣಕ್ಕೆ ಪ್ರಯಾಣಿಕರಿದ್ದ “ಲಾಮಾ ಟ್ರಾವೆಲ್ಸ್‌’ ಬಸ್‌ ಹೈಜಾಕ್‌ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಚಿಕ್ಕರಂಗೇಗೌಡ (35) ಎಂಬಾತನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಫ‌ುಲ್ಟ್ರಾನ್‌ ಇಂಡಿಯಾ ಫೈನಾನ್ಸ್‌ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕರಂಗೇಗೌಡನೇ ಬಸ್‌ ಅಪಹರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈತನ ಸೂಚನೆ ಮೇಲೆ ಇತರರು ಬಸ್‌ ಹೈಜಾಕ್‌ ಮಾಡಿದ್ದರೆಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟಿದ್ದ ಲಾಮಾ ಟ್ರಾವೆಲ್ಸ್‌ಗೆ ಸೇರಿದ ಬಸ್‌ನ್ನು ಅಡ್ಡಗಟ್ಟಿ ಅಪಹರಿಸುವಂತೆ ಚಿಕ್ಕರಂಗೇಗೌಡ ಸೂಚಿಸಿದ್ದ. ಅದರಂತೆ ಚಿಕ್ಕರಂಗೇಗೌಡ ಮತ್ತಿತರರು ಬಸ್‌ ಅಡ್ಡಗಟ್ಟಿ ಪ್ರಯಾಣಿಕರ ಸಮೇತ ಅದನ್ನು ಗೋದಾಮು ಒಂದಕ್ಕೆ ಕೊಂಡೊಯ್ದಿದ್ದರು. ನಂತರ ಚಿಕ್ಕರಂಗೇಗೌಡ ಅಲ್ಲಿಂದ ತೆರಳಿದ್ದ. ಪ್ರಕರಣದ ಇತರ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ, ಕುಟುಂಬದ ಜತೆ ತುಮಕೂರು ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.

ಪ್ರಕರಣದ ತನಿಖೆ ಮುಂದುವರಿಸಲಾಗಿದ್ದು, ಇನ್ನೂ ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೆ, ಬಸ್‌ ಅಪಹರಣಕ್ಕೆ ಕಾರಣವಾದ ಇನ್ನೂ ಹಲವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ  ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ. ಡಿ ಚೆನ್ನಣ್ಣನವರ್‌ ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟ್ಟಿದ್ದ ಖಾಸಗಿ ಬಸ್‌ನ್ನು ಪ್ರಯಾಣಿಕರ ಸಮೇತ ದುಷ್ಕರ್ಮಿಗಳು ಹೈಜಾಕ್‌ ಮಾಡಿ ಗೋದಾಮು ಒಂದರಲ್ಲಿ ನಿಲ್ಲಿಸಿದ್ದರು. ಈ ಕುರಿತು ಪೊಲೀಸರು ವಿಚಾರಣೆ ನಡೆಸಿದಾಗ ಸಾಲ ಮರುಪಾವತಿ ಮಾಡದಕ್ಕೆ ಫೈನಾನ್ಸ್‌ ಕಂಪನಿಯೊಂದರ ಸೂಚನೆ ಮೇಲೆ ಬಸ್‌ ಹೈಜಾಕ್‌ ಮಾಡಿದ್ದು ಗೊತ್ತಾಗಿತ್ತು.
ಆರೋಪಿಗಳು ಆ ಫೈನಾನ್ಸ್‌ ಕಂಪೆನಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಾಲ ವಸೂಲಾತಿ ಕಾರ್ಯದಲ್ಲಿ ತೊಡಗಿದ್ದರು. ಬಸ್‌ ಖರೀದಿಗೆ ಮಾಡಿದ್ದ ಸಾಲ ಹಿಂತಿರುಗಿಸದ ಬಸ್‌ ವಶಕ್ಕೆ ಪಡೆಯುವಂತೆ ಫೈನಾನ್ಸ್‌ ಕಂಪೆನಿ ಸೂಚಿಸಿದ್ದ ಹಿನ್ನೆಲೆಯಲ್ಲಿ ತಾವು ಈ ರೀತಿ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next