Advertisement

ಉಡುಪಿಯಲ್ಲೂ ಬಸ್‌ ಫ‌ುಟ್‌ಬೋರ್ಡ್‌, ಏಣಿ ಪ್ರಯಾಣ

10:32 AM Sep 27, 2019 | sudhir |

ಉಡುಪಿ: ಉಡುಪಿ-ಮಂಗಳೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ವೊಂದರಲ್ಲಿ ಜನರು ಫ‌ುಟ್‌ಬೋರ್ಡ್‌ ಮತ್ತು ಹಿಂಭಾಗದ ಏಣಿಯಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಸುಮಾರು ಮೂರು ದಿನಗಳ ಹಿಂದೆ ಈ ಬಸ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ನೇತಾಡಿಕೊಂಡು ಹೋಗುತ್ತಿದ್ದರು. ರವಿವಾರ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಎಕ್ಸ್‌ಪ್ರೆಸ್‌ ಬಸ್‌ ರಾತ್ರಿ 9.35ಕ್ಕೆ ಉಡುಪಿಯಿಂದ ಮಂಗಳೂರಿಗೆ ಹೊರಡುತ್ತದೆ. ಇದರ ಬಳಿಕ 10.15ಕ್ಕೆ ಶಟ್ಲ (ಲೋಕಲ್‌) ಬಸ್‌ ಇದೆ. 9.35ರ ಬಳಿಕ ಉಡುಪಿಯಿಂದ ಮಂಗಳೂರಿಗೆ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳಿಲ್ಲ. ಇದಾದ ಬಳಿಕದ ಬಸ್‌ ಶಟ್ಲ ಆದ ಕಾರಣ ಈ ಬಸ್‌ಗೆ ಸಹಜವಾಗಿ ಜನಜಂಗುಳಿ ಇರುತ್ತದೆ. ಘಟನೆ ಸಂಭವಿಸಿದ ದಿನ 10.15ರ ಬಸ್‌ ರದ್ದಾಗಿತ್ತು. ಹೀಗಾಗಿ ಅಂದು ಈ ಬಸ್‌ ತಡವಾಗಿ ಹೊರಟಿತ್ತು. ಇದರಿಂದಾಗಿ ಕಟಪಾಡಿ, ಉದ್ಯಾವರ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್‌ಗಳ ನಿರ್ವಾಹಕರು ಮತ್ತು ಚಾಲಕರು ಬಸ್‌ನ ಹಿಂಬದಿ ಇರುವ ಏಣಿ ಮೆಟ್ಟಿಲುಗಳಲ್ಲಿ ಮತ್ತು ಫ‌ುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸಿದರು ಎಂದು ಮೂಲಗಳು ತಿಳಿಸಿವೆ.

“ಉಡುಪಿಯಲ್ಲಿ ಇಂತಹ ಸನ್ನಿವೇಶಗಳನ್ನು ನಾವು ಊಹಿಸಿರಲಿಲ್ಲ’ ಎನ್ನುತ್ತಾರೆ ಆರ್‌ಟಿಒ ಕಚೇರಿಯ ಮೂಲಗಳು.

“ವಿಡಿಯೋ ಗಮನಕ್ಕೆ ಬಂದಿದೆ. ಪ್ರಯಾಣಿಕರ ಸುರಕ್ಷತೆ ಆದ್ಯತೆ ನೀಡುವ ಉದ್ದೇಶದಲ್ಲಿ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಲಾಗಿದೆ.

Advertisement

ವಾಹನಗಳಲ್ಲಿ ಬೇಕಾಬಿಟ್ಟಿಯಾಗಿ ಜನರನ್ನು ತುಂಬುವಂತಿಲ್ಲ. ಈ ನಿಯಮ ಉಲ್ಲಂ ಸಿದವರು ಭಾರೀ ದಂಡ ತೆರಬೇಕಾಗುತ್ತದೆ’ ಎಂದು ಆರ್‌ಟಿಒ ಸಹಾಯಕಾಧಿಕಾರಿ ಶ್ರೀಧರ್‌ ರಾವ್‌ ಎಚ್ಚರಿಸಿದ್ದಾರೆ.

“ಬಸ್‌ ಮಾಲಕರಿಗೆ ಬುಧವಾರ ಕೋರ್ಟ್‌ ನೋಟಿಸ್‌ ನೀಡಲಾಗಿದೆ. ಈ ಘಟನೆ ಯಾವಾಗ ನಡೆಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುವುದರಿಂದ ಕಾನೂನು ಕ್ರಮ ಜರುಗಿಸಲಾಗಿದೆ. ಬಸ್‌ ಮಾಲಕನಿಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗುತ್ತದೆ’ ಎಂದು ಎಸ್ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.
ಸದ್ಯ ಪೊಲೀಸರು ಬಸ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಸ್‌ ನಿರ್ವಾಹಕರು ತಿಳಿಸಿದ್ದಾರೆ.

ರಾತ್ರಿ ಬಸ್ಸುಗಳ ಕೊರತೆ
ರಾತ್ರಿ 8.45ರಿಂದ 9.35ರ ವರೆಗೆ ಉಡುಪಿಯಿಂದ ಮಂಗಳೂರಿಗೆ ಸುಮಾರು 8 ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳಿವೆ. ರಾತ್ರಿ 10.15ಕ್ಕೆ ಖಾಸಗಿ ಲೋಕಲ್‌ ಬಸ್‌ ಇದೆ. ಇವಿಷ್ಟು ಹೊರತುಪಡಿಸಿದರೆ ಬೇರೆ ಖಾಸಗಿ ಬಸ್ಸುಗಳಿಲ್ಲ. ರಾತ್ರಿ 8.20ರಿಂದ 9.45ವರೆಗೆ ಮಂಗಳೂರು ಮಾರ್ಗವಾಗಿ ಉಡುಪಿಯಿಂದ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿಯ ಒಟ್ಟು 6 ಬಸ್‌ಗಳಿವೆ. ಇವಲ್ಲದೆ ಮಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಕುಂದಾಪುರ, ಉತ್ತರ ಕನ್ನಡ ಜಿಲ್ಲೆಗಳಿಂದ ಬರುತ್ತವೆ. ಸರಕಾರಿ ಬಸ್‌ಗಳಲ್ಲಿ ಉಡುಪಿ- ಮಂಗಳೂರು ನಡುವೆ ಕೆಲವಾದರೂ ನಿಲುಗಡೆಗಳನ್ನು ಕೊಟ್ಟರೆ ಉತ್ತಮ ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next