Advertisement

ಬಸ್‌ ಪ್ರಯಾಣ ದರ ಏರಿಕೆ ಶೀಘ್ರ?

06:00 AM Jul 19, 2018 | |

ಬೆಂಗಳೂರು: ಈಗಾಗಲೇ ನಷ್ಟದಲ್ಲಿರುವ ರಸ್ತೆ ಸಾರಿಗೆ ನಿಗಮಗಳಿಗೆ ಉಚಿತ ಬಸ್‌ಪಾಸ್‌ ಮತ್ತು ಡೀಸೆಲ್‌ ದರ ಏರಿಕೆಯಿಂದ ಆಗುತ್ತಿರುವ ಹೊರೆಯಿಂದ ಪಾರಾಗಲು ಬಸ್‌ ಪ್ರಯಾಣ ದರ ಏರಿಕೆ ಮಾಡಲೇ ಬೇಕಾದ ಒತ್ತಡದಲ್ಲಿ ಸರಕಾರ ಸಿಲುಕಿದ್ದು, ಶೀಘ್ರವೇ ಈ ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ.

Advertisement

ಬಸ್‌ ಪ್ರಯಾಣ ದರವನ್ನು ಶೇ.20ರಷ್ಟು ಹೆಚ್ಚಿಸಬೇಕೆಂದು ನಾಲ್ಕೂ ಸಾರಿಗೆ ನಿಗಮಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ಇದಕ್ಕೆ ಅನುಮೋದನೆ ನೀಡಿರಲಿಲ್ಲ. ಇದೀಗ ದರ ಏರಿಕೆಗೆ ಒಪ್ಪಿಗೆ ಕೊಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಅನುಭವಿಸುತ್ತಿರುವ ನಷ್ಟದ ಜತೆಗೆ ಡೀಸೆಲ್‌ ದರ ಏರಿಕೆಯಿಂದ ಆಗುತ್ತಿರುವ ಹೊರೆಯಿಂದ ಪಾರಾಗಲು ಸಾಧ್ಯವಾಗದೆ ನಿಗಮಗಳು ತೊಂದರೆಗೆ ಸಿಲುಕುವ ಆತಂಕ ಎದುರಾಗಿದೆ.

ಹೀಗಾಗಿ, ನಿಗಮಗಳನ್ನು ಸಮಸ್ಯೆಯಿಂದ ಪಾರು ಮಾಡಬೇಕಾದರೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಇಲ್ಲವೇ ಬಸ್‌ ಪ್ರಯಾಣ ದರ ಏರಿಕೆ ಮಾಡಬೇಕು. ಆದರೆ, ಸಾಲ ಮನ್ನಾ ಸೇರಿ ಹಲವು ಹೊಸ ಕಾರ್ಯಕ್ರಮಗಳಿಂದಾಗಿ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ನಿಗಮಗಳಿಗೆ ಆರ್ಥಿಕ ನೆರವು ನೀಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ, ಬಸ್‌ ಪ್ರಯಾಣ ದರ ಏರಿಸಲು ಒಪ್ಪಿಗೆ ನೀಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚುತ್ತಿರುವ ಹೊರೆ: ಇತ್ತೀಚಿನ ದಿನಗಳಲ್ಲಿ ಡೀಸೆಲ್‌ ದರ ಏರಿಳಿಕೆ ಸಾಮಾನ್ಯ ಎನ್ನುವಂತಾಗಿದ್ದು, ಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ, ಇತ್ತೀಚೆಗೆ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.2ರಷ್ಟು ಹೆಚ್ಚಿಸಿದೆ. ಇನ್ನು, ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ಯೋಜನೆ ಜಾರಿಗೆ ಬಂದರೆ ಅದಕ್ಕೆ ಶೇ.25ರಷ್ಟು ಮೊತ್ತವನ್ನು ಸಾರಿಗೆ ಇಲಾಖೆ ಭರಿಸಬೇಕಾಗುತ್ತದೆ.

Advertisement

ಇದರೊಂದಿಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಈಶಾನ್ಯ ಸಾರಿಗೆ ನಿಗಮಗಳು ಸುಮಾರು 600 ಕೋಟಿ ರೂ.ನಷ್ಟದಲ್ಲಿವೆ. ನಷ್ಟದ ಜತೆ ಹೆಚ್ಚುತ್ತಿರುವ ಹೊರೆಯಿಂದಾಗಿ ನಿಗಮಗಳು ಸಮಸ್ಯೆಯ ಸುಳಿಗೆ ಸಿಲುಕುವ ಆತಂಕ
ಕಾಣಿಸಿಕೊಂಡಿದೆ. ಹೀಗಾಗಿ, ಸರ್ಕಾರ ಆರ್ಥಿಕ ನೆರವು ನೀಡದಿದ್ದಲ್ಲಿ ಈ ಹೊರೆಯ ಸ್ವಲ್ಪ ಭಾಗವನ್ನಾದರೂ ಭರಿಸಲು ದರ ಏರಿಕೆ ಅನಿವಾರ್ಯ ಎಂಬ ವಾದವನ್ನು ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸರ್ಕಾದರ ಮುಂದೆ ಮಂಡಿಸಿದ್ದಾರೆ.
ಪ್ರಯಾಣ ದರ ಏರಿಕೆ ಕುರಿತಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಇನ್ನೊಂದು ವಾರದಲ್ಲಿ ಸಭೆ ನಡೆಸುವ ಸಾಧ್ಯತೆ ಇದ್ದು, ಸಭೆಯಲ್ಲಿ ಬಸ್‌ ಪ್ರಯಾಣ ದರ ಏರಿಕೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ಉಚಿತ ಬಸ್‌ಪಾಸ್‌ ನೀಡುವ ಬಗ್ಗೆ ವಾರದಲ್ಲಿ ಇತ್ಯರ್ಥ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸುವ ಕುರಿತು ಇನ್ನೊಂದು ವಾರದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ಗಾಗಿ ಶೇ.25ರಷ್ಟು ಮೊತ್ತವನ್ನು ಭರಿಸಲು ಸಾರಿಗೆ ಇಲಾಖೆ ಸಿದಟಛಿವಿದೆ. ಶೇ.25ರಷ್ಟು ಮೊತ್ತ ಭರಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. ಹೀಗಾಗಿ, ಉಳಿದ ಶೇ.50ರಷ್ಟು ಮೊತ್ತವನ್ನು ಸರ್ಕಾರ ಭರಿಸಿದರೆ ಸಾಕು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೆಹಲಿಯಿಂದ ಹಿಂತಿರುಗಿದ ಕೂಡಲೇ ತಾವು ಮತ್ತು ಶಿಕ್ಷಣ ಇಲಾಖೆ ಸಚಿವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸಲಾಗುತ್ತಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಲು ಸುಮಾರು 2 ಸಾವಿರ ಕೋಟಿ ರೂ.ಅಗತ್ಯವಿದೆ. ಈ ಪೈಕಿ ಅರ್ಧದಷ್ಟು ಮೊತ್ತವನ್ನು ಸಾರಿಗೆ ಮತ್ತು ಶಿಕ್ಷಣ ಇಲಾಖೆಗಳು ಭರಿಸಲು ಸಿದ್ಧವಿವೆ ಎಂದು ಹೇಳಿದರು.

ಸಾರಿಗೆ ನಿಗಮಗಳು ನಷ್ಟ ಮತ್ತು ಹೊರೆಯಿಂದ ಪಾರಾಗಲು ಬಸ್‌ ಪ್ರಯಾಣ ದರವನ್ನು ಶೇ.20ರಷ್ಟು ಹೆಚ್ಚಿಸಬೇಕೆಂದು
ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಇದುವರೆಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮುಖ್ಯಮಂತ್ರಿಗಳೊಂದಿಗೆ
ಚರ್ಚಿಸಿದ ಬಳಿಕವಷ್ಟೇ ದರ ಏರಿಕೆ ಕುರಿತು ನಿರ್ಧರಿಸಲಾಗುವುದು.

– ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next