Advertisement
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ವರ್ಷಗಳ ಹಿಂದೆ ಬಿಎಂಟಿಸಿ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿತ್ತು. ಅಲ್ಲಿಂದ ಇದುವರೆಗೆ ಶೇ. 50ರಷ್ಟು ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಇದರಿಂದ ಸಂಸ್ಥೆಗೆ ಹೊರೆಯಾಗುತ್ತಿದೆ. ಸದ್ಯ ರಾಜ್ಯ ಸರಕಾರ ಸಂಸ್ಥೆಗೆ ಆಗುತ್ತಿರುವ ಹೊರೆಯನ್ನು ಭರಿಸುತ್ತಿದೆ. ಆದರೆ ಟಿಕೆಟ್ ದರ ಹೆಚ್ಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನ ಆಗಲಿದ್ದು, ಈ ನಿಟ್ಟಿನಲ್ಲಿ ಇದುವರೆಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ಹೇಳಿದರು.
ಈ ಹಿಂದೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಬಳಕೆ ಮಾಡಲಾಗುತ್ತಿದ್ದ ಇಟಿಎಂನಲ್ಲಿ (ಎಲೆಕ್ಟ್ರಾನಿಕ್ ಟಿಕೆಟ್ ವಿತರಣ ಯಂತ್ರ) ಟಿಕೆಟ್ ಮಾತ್ರ ಮುದ್ರಣ ಮಾಡಿ ವಿತರಣೆ ಮಾಡಲಾಗುತ್ತಿತ್ತು. ಹೊಸದಾಗಿ ವಿತರಣೆ ಮಾಡುತ್ತಿರುವ ಯಂತ್ರಗಳಲ್ಲಿ ಟಿಕೆಟ್ ಮುದ್ರಣಗೊಂದಿಗೆ ಫೋನ್‌ಪೇ, ಗೂಗಲ್‌ಪೇ, ಎಟಿಎಂ ಕಾರ್ಡ್ ಸೇರಿದಂತೆ ಇನ್ನಿತರ ಡಿಜಿಟಲ್ ಮಾದರಿಯಲ್ಲಿ ಹಣ ಪಾವತಿ ಮಾಡಿ ಟಿಕೆಟ್ ಪಡೆಯಬಹುದಾಗಿದೆ. ಪ್ರಾಯೋಗಿಕವಾಗಿ ಇದನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಟೆಂಡರ್ ಆಹ್ವಾನಿಸಿ ಎಲ್ಲ ಬಸ್‌ಗಳಲ್ಲಿಯೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ವಿವರಿಸಿದರು.