Advertisement

ಪಡುಬಿದ್ರಿ: ಬಸ್‌- ಬೈಕ್‌ ಮುಖಾಮುಖೀ ಢಿಕ್ಕಿ; ಸವಾರ ಸಾವು

09:25 AM Jul 30, 2017 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ನಾಗರಾಜ್‌ ಎಸ್ಟೇಟ್‌ ಬಳಿ ಬಸ್‌ ಮತ್ತು ಬೈಕ್‌ ಮುಖಾಮುಖಿಯಾಗಿ ಢಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‌ ಸವಾರ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ. ಕುಬೆವೂರು ಕಿಲ್ಪಾಡಿ ಕಂಚರಪದವು ನಿವಾಸಿ ವಾಮನ ದೇವಾಡಿಗ ಅವರ ಪುತ್ರ ಅವಿನಾಶ್‌ ದೇವಾಡಿಗ (28) ಮೃತಪಟ್ಟವರು. ಅವರು ತಂದೆ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

Advertisement

ಅಜ್ಜಿ ಮನೆಯಿಂದ ತೆರಳುವಾಗ ಅಪಘಾತ: ಗುರುವಾರ ರಾತ್ರಿ ಎಲ್ಲೂರು ಗ್ರಾಮದ ಕೆಮ್ಮುಂಡೇಲಿನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದು ಶುಕ್ರವಾರ ಬೆಳಗ್ಗೆ ಅಗತ್ಯ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದಾಗ ಪಡುಬಿದ್ರಿ ನಾಗರಾಜ್‌ ಎಸ್ಟೇಟ್‌ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ರಾತ್ರಿ ತಂಗಿದ್ದ ತಡೆರಹಿತ ಬಸ್‌ ವಿರುದ್ಧ ದಿಕ್ಕಿನಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್‌ ಬಸ್‌ನ ಮುಂದಿನ ಬಲ ಪಾರ್ಶ್ವದಲ್ಲಿ ಟಯರ್‌ನೊಳಗೆ ನುಗ್ಗಿದ್ದು, ತಲೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾದ ಪರಿಣಾಮ ಆತ ಸಾವಿಗೀಡಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.


ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ ಬಸ್‌:
ಉಡುಪಿ-ಮಂಗಳೂರು 
ನಡುವೆ ಸಂಚರಿಸುವ ಖಾಸಗಿ  ಬಸ್‌ ರಾತ್ರಿ ಪಡುಬಿದ್ರಿಯ ಪೆಟ್ರೋಲ್‌ ಬಂಕ್‌ನಲ್ಲಿ ತಂಗಿದ್ದು, ಶುಕ್ರವಾರ ಬೆಳಗ್ಗೆ ಪಡುಬಿದ್ರಿಗೆ ಬರಬೇಕಾದರೆ ಹೆಜಮಾಡಿ ಬೀಡುವಿನ ಡೈವರ್ಷನ್‌ನ ಮೂಲಕ ಬರಬೇಕಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಚಾಲಕ ವಿರುದ್ಧ ದಿಕ್ಕಿನಲ್ಲೇ ಬಸ್ಸನ್ನು ಅತೀವ ವೇಗದಿಂದ ಚಲಾಯಿಸಿಕೊಂಡು ಬಂದಿದ್ದು, ಈ ಕಾರಣದಿಂದಾಗಿ ಅಪಘಾತ ಸಂಭವಿಸಿದೆ ಎಂದುಅವರು ತಿಳಿಸಿದ್ದಾರೆ.

ಗಲ್ಫ್ ಹೋಗುವ ಸಿದ್ಧತೆಯಲ್ಲಿದ್ದರು: ಗಲ್ಫ್ನಲ್ಲಿ ಉದ್ಯೋಗಿಯಾಗಿದ್ದ ಅವಿನಾಶ್‌ ದೇವಾಡಿಗ ಅವರು ಕೆಲವು ಸಮಯಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಮತ್ತೆ ಗಲ್ಫ್ಗೆ ತೆರಳಲು ವೈದ್ಯಕೀಯ ತಪಾಸಣೆಗಳನ್ನು ಪೂರ್ಣಗೊಳಿಸಿ, ಸಿದ್ಧತೆ ಮಾಡುತ್ತಿದ್ದರು.

ತಾಯಿಯ ಮೇಲೆ ಅತೀವ ಪ್ರೀತಿ: ಕಳೆದ ವರ್ಷವಷ್ಟೇ ಅವರ ತಾಯಿ ನಿಧನ ಹೊಂದಿದ್ದರು. ತನ್ನ ತಾಯಿಯ ಮೇಲೆ ಅತೀವ ಪ್ರೀತಿ ಹೊಂದಿದ್ದ ಅವಿನಾಶ್‌ ಕೈಮೇಲೆ ತಾಯಿ ಸತ್ತ ದಿನಾಂಕವನ್ನು ದೊಡ್ಡದಾಗಿ ಹಚ್ಚೆ ಹಾಕಿಸಿಕೊಂಡಿದ್ದರು.

Advertisement

ನೇತ್ರದಾನ: ಅವಿನಾಶ್‌ ಅವರ ಮನೆಯವರು ಸಾವಿನಲ್ಲೂ ಸಾರ್ಥಕತೆ ಕಂಡಿದ್ದು, ಅವರ ಕಣ್ಣುಗಳನ್ನು ಉಡುಪಿ ಪ್ರಸಾದ್‌ ನೇತ್ರಾಲಯದ ನೇತ್ರ ಜ್ಯೋತಿ ಮತ್ತು ಇಂಡಿಯನ್‌ ರೆಡ್‌ ಕ್ರಾಸ್‌ ಸೊಸೈಟಿಯ ಐ ಬ್ಯಾಂಕ್‌ಗೆ ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಪ್ರಯತ್ನ ಮಾಡಿದ್ದಾರೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಟಿಪ್ಪರ್‌ಗೆ ಬಸ್‌ ಢಿಕ್ಕಿ: ಬೈಕ್‌ ಮತ್ತು ಬಸ್‌ ನಡುವಿನ ಅಪಘಾತವನ್ನು ನೋಡುತ್ತ ಬಲಬದಿಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಉಡುಪಿ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ನ ಚಾಲಕ ಹಠಾತ್ತನೆ ಬ್ರೇಕ್‌ ಹಾಕಿದ ಪರಿಣಾಮ ಖಾಸಗಿ ಬಸ್‌ ಟಿಪ್ಪರ್‌ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್‌ನ ಮುಂಭಾಗ ಹಾನಿಗೊಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next