ಕಡೂರು: ಗ್ರಾಮದ ಜನರ ದಶಕಗಳ ಸಾರಿಗೆ ಸೌಲಭ್ಯದ ಕನಸು ನನಸಾಗಿದೆ. ಸಾರಿಗೆ ಸೌಲಭ್ಯವಿಲ್ಲದೇ ಪರಿತಪಿಸುತ್ತಿದ್ದ ಕೇದಿಗೆರೆ ಗ್ರಾಮಕ್ಕೆ ಸೋಮವಾರ ಸಾರಿಗೆ ಬಸ್ ಬಂದಾಗ, ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸುವುದರ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
ಗ್ರಾಮದ ಯುವಕ ಕೇದಿಗೆರೆ ಓಂಕಾರ್ ಮಾತನಾಡಿ, ದಶಕಗಳಿಂದ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ದೂರದ ಹಿರೇನಲ್ಲೂರು, ಗಿರಿಯಾಪುರಕ್ಕೆ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು ಎಂದರು.
ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ ಶಾಸಕ ಬೆಳ್ಳಿಪ್ರಕಾಶ್ ಅವರು, ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ನೌಕರರಿಗೆ ಸಹಾಯವಾಗುವಂತೆ ಸಾರಿಗೆ ಸಂಸ್ಥೆ ಬಸ್ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ, ಗ್ರಾಮಸ್ಥರ ಪರವಾಗಿ ಶಾಸಕರನ್ನು ಅಭಿನಂಧುಸುತ್ತೇವೆ ಎಂದು ತಿಳಿಸಿದರು.
15ವರ್ಷಗಳ ಹಿಂದೆ ಕೆ.ಎಂ.ಕೃಷ್ಣಮೂರ್ತಿ ಶಾಸಕರಾಗಿದ್ದ ಅವಧಿಯಲ್ಲಿ ಬಸ್ ಸಂಚಾರ ಆರಂಭವಾಗಿತ್ತು. ಆದರೆ, ಕಾರಣಾಂತರದಿಂದ ನಿಂತು ಹೋಗಿತ್ತು. 15ವರ್ಷಗಳ ಕಾಲ ಗ್ರಾಮಸ್ಥರು ಸಂಚಾರದ ಸೌಲಭ್ಯವಿಲ್ಲದೇ ಸಂಕಷ್ಟ ಅನುಭವಿಸಿದ್ದರು. ಬಸ್ ಸೇವೆ ಆರಂಭವಾಗಿರುವುದರಿಂದ ಬೆಳಗ್ಗೆ ಶಾಲಾ-ಕಾಲೇಜಿಗೆ ತೆರಳುವ ಸುಮಾರು 25 ಮಕ್ಕಳಿಗೆ ಸಹಕಾರವಾಗಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಬಸ್ ಸಂಚಾರ ವರದಾನವಾಗಿದೆ ಎಂದರು.
ಬಸ್ ಬೆಳಗ್ಗೆ ಕಡೂರಿನಿಂದ ಹೊರಟು ಹಿರೇನಲ್ಲೂರು ಮಾರ್ಗವಾಗಿ ಕೇದಿಗೆರೆಗೆ ತಲುಪಿ ಅಲ್ಲಿಂದ 7.30ಕ್ಕೆ ಹೊರಟು ಸಿದ್ರಾಹಳ್ಳಿ, ಬಂಟಗನಹಳ್ಳಿ ಮಾರ್ಗವಾಗಿ ಕಡೂರು ತಲುಪಲಿದೆ ಎಂಬ ಮಾಹಿತಿ ನೀಡಿದರು.
ಗ್ರಾಮಸ್ಥರಾದ ಚಂದ್ರಪ್ಪ, ಬಸವರಾಜು, ರುದ್ರಪ್ಪ ನಾಯ್ಕ, ಮಂಜುಳಾ ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು.