ಯುನೋ ಎಂಬ ಬಡವನಿದ್ದ. ಅವನು ಪ್ರತಿದಿನವೂ ಬೆಳಗ್ಗೆ ಎದ್ದು ಕಾಡಿಗೆ ಹೋಗುತ್ತಿದ್ದ. ಮರಗಳಿಂದ ಉದುರಿದ ಒಣ ಕಟ್ಟಿಗೆಗಳನ್ನು ಆರಿಸಿ ಹೊರೆಯಾಗಿ ಕಟ್ಟುತ್ತಿದ್ದ. ಅದನ್ನು ಹೊತ್ತುಕೊಂಡು ಹೋಗಿ ನಿನೋ ಎಂಬ ವ್ಯಾಪಾರಿಗೆ ಮಾರಾಟ ಮಾಡುತ್ತಿದ್ದ. ವ್ಯಾಪಾರಿ ಬೆಲೆ ಎಂದು ಕೊಡುತ್ತಿದ್ದುದು ಒಂದೇ ಒಂದು ನಾಣ್ಯ. ಆದರೆ ಅದೇ ಕಟ್ಟಿಗೆಯನ್ನು ಬೇರೆಯವರಿಗೆ ಅವನು ಹತ್ತು ನಾಣ್ಯಗಳಿಗೆ ಮಾರಾಟ ಮಾಡಿ ಭರ್ಜರಿ ಲಾಭ ಸಂಪಾದಿಸುತ್ತಿದ್ದ. ಯುನೋ ಗಳಿಸಿದ ಹಣದಿಂದ ಅಂದಿಗೆ ಅವನ ದೊಡ್ಡ ಸಂಸಾರಕ್ಕೆ ಒಂದು ಹೊತ್ತಿನ ಊಟಕ್ಕೆ ಮಾತ್ರ ಸಾಕಾಗುತ್ತಿತ್ತು. ಏನೂ ಉಳಿತಾಯವಾಗುತ್ತಿರಲಿಲ್ಲ. ಅವನ ಹೃದಯದಲ್ಲಿ ಪ್ರಾಣಿ, ಪಕ್ಷಿಗಳ ಬಗೆಗೆ ದಯಾಭಾವ ಇತ್ತು. ಕಾಡಿಗೆ ಹೋಗುವಾಗ ದಿನಾಲೂ ಒಂದು ಸೋರೆ ಬುರುಡೆಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಬಾಯಾರಿದ ಹಕ್ಕಿಗಳು ಕುಡಿಯಲಿ ಎಂಬ ಒಳ್ಳೆಯ ಮನೋಭಾವದಿಂದ ಎಲೆಗಳ ದೊನ್ನೆಯಲ್ಲಿ ಅದನ್ನು ಹೊಯಿದು ಇಡುತ್ತಿದ್ದ. ಈ ನೀರನ್ನು ಕುಡಿದು ಕಾಡಿನ ಜೀವಿಗಳು ದಾಹ ತಣಿಸಿಕೊಳ್ಳುತ್ತಿದ್ದವು. ಹೀಗೆ ಅವನು ಕೊಡುವ ನೀರನ್ನು ದಿನವೂ ಒಂದು ದೊಡ್ಡ ಹಕ್ಕಿಯೂ ಕುಡಿದು ಹೋಗುತ್ತಿತ್ತು.
ದಿನವೂ ಕಟ್ಟಿಗೆ ಆರಿಸುವ ಯುನೋವಿನ ಕಷ್ಟವನ್ನು ನೋಡಿ ಹಕ್ಕಿಯು ಅವನಿಗೆ ಏನಾದರೂ ಉಪಕಾರ ಮಾಡಿ ಅವನ ಬಡತನವನ್ನು ತೊಲಗಿಸಬೇಕೆಂದು ನಿರ್ಧರಿಸಿತು. ಅದು ಅವನ ಮುಂದೆ ಒಂದು ಚಿನ್ನದ ಮೊಟ್ಟೆಯನ್ನು ಇಕ್ಕಿತು. ಯುನೋ ಮೊಟ್ಟೆಯನ್ನು ಎತ್ತಿಕೊಂಡು ಕಣ್ಣರಳಿಸಿ ನೋಡಿದ. ಫಳಫಳ ಹೊಳೆಯುತ್ತಿದ್ದ ಅದು ಚಿನ್ನದ್ದೆಂಬುದು ಅವನಿಗೆ ಅರ್ಥವಾಯಿತು. ಮೊಟ್ಟೆಯನ್ನು ಕಿಸೆಗೆ ಹಾಕಿಕೊಂಡ. ಹೆಕ್ಕಿದ ಕಟ್ಟಿಗೆಯನ್ನು ಹೊರೆಯಾಗಿ ಕಟ್ಟಿ ಹೊತ್ತುಕೊಂಡು ವ್ಯಾಪಾರಿಯ ಬಳಿಗೆ ಹೋದ. ಮಾಮೂಲಿಗಿಂತ ತುಂಬ ಕಡಿಮೆ ಕಟ್ಟಿಗೆ ತಂದಿರುವುದು ನೋಡಿ ವ್ಯಾಪಾರಿ ಕಿಡಿಕಿಡಿಯಾದ. “ಯಾಕೆ ಇಷ್ಟು ಕಡಮೆ ತಂದಿರುವೆ? ಕಾಡಿಗೆ ಕಿಚ್ಚು ಬಿದ್ದು ಸುಟ್ಟು ಹೋಯಿತೇ? ಅಲ್ಲ ದುಡಿದದ್ದು ಸಾಕಾಯಿತೆ?’ ಎಂದು ವ್ಯಂಗ್ಯವಾಗಿ ಪ್ರಶ್ನೆಗಳನ್ನು ಕೇಳಿದ.
“ಹಾಗೇನೂ ಆಗಿಲ್ಲ. ನಾಳೆಯಿಂದ ನಾನು ಕಾಡಿಗೆ ಹೋಗುವುದಿಲ್ಲ. ಕಟ್ಟಿಗೆ ಆಯ್ದು ತರುವ ಕೆಲಸ ಮಾಡುವುದಿಲ್ಲ. ಇವತ್ತಿಗೆ ಕೊನೆ’ ಎಂದ ಯುನೋ. ವ್ಯಾಪಾರಿ ಅಚ್ಚರಿಯಿಂದ, “ಏನೋ, ಕೆಲಸ ಮಾಡದೆ ಕುಳಿತರೆ ಹೊಟ್ಟೆಗೇನು ಮಣ್ಣು ತಿನ್ನುತ್ತೀಯಾ? ಒಂದೇ ದಿನದಲ್ಲಿ ಕುಬೇರನಾಗಿರುವಂತಿದೆ, ಏನು ಕತೆ?’ ಎಂದು ಕೇಳಿದ. ಯುನೋ ಕಿಸೆಯಿಂದ ಚಿನ್ನದ ಮೊಟ್ಟೆಯನ್ನು ತೆಗೆದು ಅವನಿಗೆ ತೋರಿಸಿದ. “ದಿನವೂ ಹಕ್ಕಿಗಳಿಗೆ ಕುಡಿಯಲು ನೀರು ಕೊಡುತ್ತಿದ್ದೆನಲ್ಲ. ಅದೇ ಪುಣ್ಯ ನನ್ನ ಕೈ ಹಿಡಿಯಿತು. ಈ ಚಿನ್ನದ ಮೊಟ್ಟೆಯಿಂದ ನನ್ನ ಬಡತನವನ್ನು ನೀಗಬಹುದು’ ಎಂದು ನಡೆದ ವಿಷಯವನ್ನು ಹೇಳಿದ.
ವ್ಯಾಪಾರಿ ಅವನ ಕೈಯಿಂದ ಮೊಟ್ಟೆಯನ್ನು ತೆಗೆದುಕೊಂಡ. ತಿರುಗಿಸಿ ನೋಡಿ ಅದರ ತೂಕ ಎಷ್ಟೆಂಬುದನ್ನು ಅಂದಾಜು ಮಾಡಿದ. ಆದರೆ ತನ್ನ ಮೋಸ ಮಾಡುವ ಬುದ್ಧಿಯನ್ನು ಬಳಸಿಕೊಂಡ. “”ಶುದ್ಧ ಬೇಕೂಫ ನೀನು. ಇದು ಭಾರೀ ಬೆಲೆ ಬಾಳುತ್ತದೆಂದು ನಿನಗೆ ಹೇಳಿದವರು ಯಾರು? ಬರೇ ಕಾಗೆ ಬಂಗಾರ. ಆದರೂ ನನಗಿದು ಸಂಗ್ರಹಿಸಿಡಲು ಬೇಕು. ಒಂದು ಚಿನ್ನದ ನಾಣ್ಯ ಕೊಡುತ್ತೇನೆ. ಈ ಮೊಟ್ಟೆ ನನಗಿರಲಿ’ ಎಂದು ಹೇಳಿ ಮೊಟ್ಟೆಯನ್ನು ತಿಜೋರಿಯಲ್ಲಿರಿಸಿದ. ಯುನೋಗೆ ಒಂದು ನಾಣ್ಯ ಕೊಟ್ಟು ಕಳುಹಿಸಿದ. ಈ ನಾಣ್ಯದಿಂದ ಬೇಕಾದ ವಸ್ತುಗಳನ್ನು ಖರೀದಿಸಿ ತಂದು ಯುನೋ ಒಂದು ದಿನ ಹಬ್ಬ ಆಚರಿಸಿದ. ಆದರೆ ಮರುದಿನ ಮತ್ತೆ ಕಟ್ಟಿಗೆ ಆರಿಸಲು ಕಾಡಿಗೆ ಹೋದ.
ತಾನು ನೀಡಿದ ಮೊಟ್ಟೆಯಿಂದ ಯುನೋ ಬಡತನದಿಂದ ದೂರವಾಗಲಿಲ್ಲ ಎಂಬುದು ಹಕ್ಕಿಗೆ ಗೊತ್ತಾಯಿತು. ಅದು ಇನ್ನೊಂದು ಮೊಟ್ಟೆಯನ್ನು ಅವನ ಮುಂದೆ ಇಕ್ಕಿತು. ಅದನ್ನು ತೆಗೆದುಕೊಂಡು ಅವನು ವ್ಯಾಪಾರಿಯ ಬಳಿಗೆ ಬಂದ. ಅಂದು ಕೂಡ ವ್ಯಾಪಾರಿ ಮೊಟ್ಟೆಯನ್ನು ಕಬಳಿಸಿ ಅವನಿಗೆ ಒಂದು ನಾಣ್ಯ ಮಾತ್ರ ಕೊಟ್ಟು ಕಳುಹಿಸಿದ. ಹೀಗೆ ಕೆಲವು ದಿನಗಳ ವರೆಗೆ ನಡೆಯಿತು. ವ್ಯಾಪಾರಿಯ ತಿಜೋರಿಯಲ್ಲಿ ಮೊಟ್ಟೆಗಳು ತುಂಬಿಕೊಂಡವು. ಇದರಿಂದಾಗಿ ಅವನ ದುರಾಶೆ ಹೆಚ್ಚಿತು. ಯುನೋವನ್ನು ಕರೆದು, “ನೀನು ಒಂದು ಕೆಲಸ ಮಾಡಬೇಕು. ಅದರ ಪ್ರತಿಫಲವಾಗಿ ಹತ್ತು ಚಿನ್ನದ ನಾಣ್ಯಗಳನ್ನು ಕೊಡುತ್ತೇನೆ. ಹತ್ತು ದಿನ ನಿನ್ನ ಸಂಸಾರದವರೊಂದಿಗೆ ಮೋಜಿನಿಂದ ಕಾಲ ಕಳೆಯಬಹುದು. ಬೇರೇನಿಲ್ಲ. ಕಾಡಿಗೆ ಹೋಗುವಾಗ ಒಂದು ಚೂರಿ ಮತ್ತು ಒಂದು ಒಂದು ಚೀಲ ಕೈಯಲ್ಲಿ ತೆಗೆದುಕೋ. ಹಕ್ಕಿಯನ್ನು ಉಪಾಯವಾಗಿ ಹಿಡಿದು ಚೂರಿಯಿಂದ ಅದರ ಹೊಟ್ಟೆಯನ್ನು ಸೀಳು. ಒಳಗೆ ತುಂಬ ಚಿನ್ನದ ಮೊಟ್ಟೆಗಳಿರುತ್ತವೆ. ಅದನ್ನೆಲ್ಲ ಚೀಲದಲ್ಲಿ ತುಂಬಿಸಿ ನನಗೆ ತಂದುಕೊಡು’ ಎಂದು ಹೇಳಿದ.
ಹತ್ತು ನಾಣ್ಯಗಳ ಆಸೆಯಲ್ಲಿ ಯುನೋ ವ್ಯಾಪಾರಿ ಹೇಳಿದಂತೆಯೇ ನಡೆದುಕೊಂಡ. ಹಕ್ಕಿಯನ್ನು ಉಪಾಯವಾಗಿ ಹಿಡಿದ. ಚೂರಿಯಿಂದ ಅದರ ಹೊಟ್ಟೆಯನ್ನು ಸೀಳತೊಡಗಿದ. ವೇದನೆಯಿಂದ ನರಳುತ್ತ ಹಕ್ಕಿಯು, “ಯಾಕೆ ವೃಥಾ ನನ್ನನ್ನು ಕೊಲ್ಲುತ್ತಿರುವೆ? ನಾನು ನಿನಗೆ ಏನು ಅಪಕಾರ ಮಾಡಿದ್ದೇನೆ?’ ಎಂದು ಕೇಳಿತು. “ನನ್ನ ಹೊಟ್ಟೆಯಲ್ಲಿರುವ ಚಿನ್ನದ ಮೊಟ್ಟೆಗಳನ್ನು ತರಲು ವ್ಯಾಪಾರಿ ಹೇಳಿದ್ದಾನೆ. ಅದಕ್ಕಾಗಿ ನನಗೆ ಹತ್ತು ನಾಣ್ಯಗಳನ್ನು ಕೊಡುತ್ತಾನಂತೆ’ ಎಂದ ಯುನೋ. ಹಕ್ಕಿಯು ವಿಷಾದದಿಂದ, “ನೀನು ಶುದ್ಧ ಮೂರ್ಖ. ಅವನ ಮೋಸದ ಮಾತಿಗೆ ಮರುಳಾಗಿ ನನ್ನನ್ನು ಸುಮ್ಮನೆ ಕೊಂದಿರುವೆ. ನನ್ನ ಹೊಟ್ಟೆಯಲ್ಲಿ ನಿನಗೆ ಮೊಟ್ಟೆಗಳು ಸಿಗುವುದಿಲ್ಲ. ಹೇಗೂ ನಾನು ಬದುಕುವ ಆಸೆ ಇಲ್ಲ. ನನ್ನ ಗರಿಗಳನ್ನು ತೆಗೆದುಕೊಂಡು ಹೋಗಿ ಆ ವ್ಯಾಪಾರಿಗೆ ಕೊಟ್ಟು ಇದು ನನ್ನ ಕೊನೆಯ ಕಾಣಿಕೆ ಎಂದು ಹೇಳಿಬಿಡು’ ಎಂದಿತು.
ಯುನೋ ಗರಿಗಳನ್ನು ತಂದು ವ್ಯಾಪಾರಿಗೆ ನೀಡಿ ಹಕ್ಕಿಯ ಮಾತುಗಳನ್ನು ಹೇಳಿದ. ವ್ಯಾಪಾರಿ ಬಾಯಲ್ಲಿ ನೀರಿಳಿಸುತ್ತ ಆಶೆಯಿಂದ ಗರಿಗಳನ್ನು ಬಾಚಿ ತೆಗೆದುಕೊಂಡ. ಇದು ಬಂಗಾರದ್ದೇ ಆಗಿರಬಹುದೇ ಎಂದು ಕಣ್ಣಿನ ಬಳಿಗೆ ತಂದು ಪರೀಕ್ಷಿಸಿದ. ಆಗ ಎರಡು ಗರಿಗಳು ಅವನ ಕಣ್ಣುಗಳಿಗೆ ಬಾಣದಂತೆ ಚುಚ್ಚಿಕೊಂಡು ಕುರುಡನಾಗಿ ಹೋದ. ಇದು ತಾನು ಮಾಡಿದ ಮೋಸಕ್ಕೆ ಹಕ್ಕಿ ನೀಡಿದ ಶಿಕ್ಷೆ ಎಂದು ಅರ್ಥ ಮಾಡಿಕೊಂಡ. ಯುನೋವಿನಿಂದ ಪಡೆದ ಮೊಟ್ಟೆಗಳನ್ನು ಅವನಿಗೇ ಕೊಟ್ಟು ಕಳುಹಿಸಿದ.
ಯುನೋ ಮೊಟ್ಟೆಗಳನ್ನು ದೇಶದ ರಾಜನಿಗೆ ಕಾಣಿಕೆಯಾಗಿ ನೀಡಿದ. ಪ್ರತಿಫಲವಾಗಿ ಬಿಡಿಗಾಸನ್ನೂ ಪಡೆಯಲಿಲ್ಲ. “ದೊರೆಯೇ, ನನಗೆ ಇದಕ್ಕಾಗಿ ನೀವು ಏನನ್ನೂ ಕೊಡುವುದು ಬೇಡ. ಆದರೆ ನನ್ನಿಂದಾಗಿ ಒಂದು ಹಕ್ಕಿಗೆ ದ್ರೋಹ ನಡೆದಿದೆ. ಅದರ ಪಾಪ ಕಳೆದುಕೊಳ್ಳಬೇಕಿದ್ದರೆ ಒಂದು ಪುಣ್ಯದ ಕೆಲಸವನ್ನು ತಾವು ಮಾಡಬೇಕು. ಕಾಡಿನಲ್ಲಿ ಸದಾಕಾಲ ಹಕ್ಕಿಗಳಿಗೆ, ಪ್ರಾಣಿಗಳಿಗೆ ಕುಡಿಯಲು ನೀರು ಸಿಗುವಂತೆ ಒಂದು ಕೊಳವನ್ನು ತೋಡಬೇಕು’ ಎಂದು ಕೇಳಿಕೊಂಡ. ರಾಜನು ಅವನ ಕೋರಿಕೆಯನ್ನು ನೆರವೇರಿಸಿದ. ಹಕ್ಕಿಗಳು ನೀರು ಕುಡಿಯುವುದನ್ನು ನೋಡಿ ಆನಂದಿಸುತ್ತ ಯುನೋ ತಾನು ಕಟ್ಟಿಗೆ ಆರಿಸುವ ಕೆಲಸದಲ್ಲೇ ಸುಖವಾಗಿ ದಿನಗಳೆದ.