ಬೆಂಗಳೂರು: ವೇತನ ಬಂದ ನಂತರ ಹಣ ನೀಡಲಿಲ್ಲ ಎಂಬ ವಿಚಾರಕ್ಕೆ ಪತ್ನಿಯನ್ನು ಕೊಲೆಮಾಡಿ, ನಾಪತ್ತೆಯಾಗಿದ್ದಾಳೆ ಎಂಬ ಕಥೆ ಕಟ್ಟಲು ಹೋದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶಿಲ್ಪಾ (21) ಎಂಬಾಕೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಕಲ್ಲೇಶ್ (32), ಆತನ ಸಹೋದರ ಕೃಷ್ಣಪ್ಪ ಎಂಬಾತನನ್ನು ಬಂಧಿಸಿರುವ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ಎಂ.ಎಲ್, ನೇತೃತ್ವದ ತಂಡ ತನಿಖೆ ಮುಂದುವರಿಸಿದೆ.
ಬಳ್ಳಾರಿ ಮೂಲದ ಕಲ್ಲೇಶ್ ಹಾಗೂ ಶಿಲ್ಪಾ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ದುರ್ಗಾ ಪರಮೇಶ್ವರಿ ಲೇಔಟ್‌ನಲ್ಲಿ ವಾಸವಿದ್ದರು. ಕಲ್ಲೇಶ್ ಸ್ವಿಗ್ಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಸಣ್ಣಪುಟ್ಟ ವಿಚಾರಕ್ಕೂ ದಂಪತಿ ನಡುವೆ ಜಗಳ ನಡೆಯುತ್ತಿತ್ತು.
ಒಂದು ತಿಂಗಳ ಹಿಂದೆ ಶಿಲ್ಪಾ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಇದು ಕಲ್ಲೇಶ್‌ಗೆ ಇಷ್ಟವಿರಲಿಲ್ಲ. ಆ.12ರಂದು ಶಿಲ್ಪಾಗೆ ಸಂಬಳ ಬಂದಿತ್ತು. ಅದೇ ದಿನ ರಾತ್ರಿ ಪತ್ನಿಯನ್ನು ವೇತನದ ಹಣ ಕೊಡುವಂತೆ ಕೇಳಿದ್ದು, ಆಕೆ ಕೊಟ್ಟಿಲ್ಲ. ಇದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು.
ಕಲ್ಲೇಶ್ ಪೂರ್ವನಿರ್ಧಾರಿತ ಸಂಚಿನಂತೆ ಆಕೆ ನಿದ್ದೆ ಹೋದ ಮೇಲೆ ದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಪಕ್ಕದ ಬಡಾವಣೆಯಲ್ಲಿ ವಾಸವಿರುವ ತನ್ನ ಸಹೋದರ ಕೃಷ್ಣಪ್ಪನನ್ನು ಮನೆಗೆ ಕರೆಸಿಕೊಂಡು ಮೃತದೇಹವನ್ನು ಸಾಗಿಸಿ ನಿರ್ಜನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿ, ಏನು ನಡೆಯದವರಂತೆ ಸುಮ್ಮನಿದ್ದಾರೆ.
ನಾಪತ್ತೆ ನಾಟಕ!: ಶಿಲ್ಪಾ ಮನೆಯಲ್ಲಿ ಕಾಣಿಸದಿದ್ದುದನ್ನು ಗಮನಿಸಿದ ಸ್ಥಳೀಯರು ಹಾಗೂ ಸಂಬಂಧಿಕರು, ಆಯಕೆ ಎಲ್ಲಿ ಹೋಗಿದ್ದಾಳೆ ಎಂದು ಪ್ರಶ್ನಿಸಿದಾಗ ಕಲ್ಲೇಶ ಪ್ರತಿ ಬಾರಿಯೂ ಒಂದೊಂದು ಸಬೂಬು ಹೇಳುತ್ತಿದ್ದ. ಹೀಗಾಗಿ ಶಿಲ್ಪಾಳ ಸಂಬಂಧಿಕರು ಪೊಲೀಸರಿಗೆ ದೂರು ನೀಡು, ಅವರೇ ಹುಡುಕುತ್ತಾರೆ ಎಂದು ಹೇಳಿದ್ದರು. ನೀನು ದೂರು ನೀಡದಿದ್ದರೆ ನಾವೇ ಬೆಂಗಳೂರಿಗೆ ಬಂದು ದೂರು ನೀಡುತ್ತೇವೆ ಎಂದಿದ್ದರು.
ಇದರಿಂದ ಕಂಗಾಲಾದ ಕಲ್ಲೇಶ್ ಆ.17ರಂದು ಕೊತ್ತನೂರು ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ. ಆತನ ಅನುಮಾನಸ್ಪದ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ಪನ್ನಿಯನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಆರೋಪಿ ಕಲ್ಲೇಶ್ ಪತ್ನಿ ಶಿಲ್ಪಾಳ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ ಎಂದು ಅಧಿಕಾರಿ ಹೇಳಿದರು.