ತಾಳಿಕೋಟೆ: ಮಹಿಳೆಯೊಬ್ಬಳ ಮನೆಗೆ ನುಗ್ಗಿ ರಾತ್ರಿ ಹೊತ್ತು ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಲ್ಲದೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ರವಿವಾರ ರಾತ್ರಿ ಹೊತ್ತು ನಡೆದಿದೆ. ಗುಂಡಕನಾಳ ಗ್ರಾಮದ ಶಂಕ್ರವ್ವ ಪ್ರಭು ಹರಿಜನ (28)
ಕೊಲೆಗೀಡಾದ ಮಹಿಳೆ. ಗಂಡ ಪ್ರಭು ಹರಿಜನ ವನಹಳ್ಳಿ ಗ್ರಾಮದ ಜಾತ್ರೆಗೆ ತೆರಳಿದ್ದರಿಂದ ಶಂಕ್ರವ್ವ ತನ್ನ 6 ವರ್ಷದ ಮಗ ವಿಕ್ರಮ ಜೊತೆಯಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದನ್ನು ಗಮನಿಸಿ ರಾತ್ರಿ ಹೊತ್ತು ಆಗಮಿಸಿದ ದುಷ್ಕರ್ಮಿಗಳಾದ ಮಾಳಪ್ಪ ಮಲ್ಲಪ್ಪ ಗುಡಿಮನಿ ಹಾಗೂ ಶಿವಪ್ಪ ಹನುಮಂತ ಚಲವಾದಿ ಮತ್ತಿತರರು ಸೇರಿ ರಾತ್ರಿ 12ರ ನಂತರ ಮನೆಗೆ ನುಗ್ಗಿ ಮಹಿಳೆಯನ್ನು ಚೀರಾಡದಂತೆ ಕುತ್ತಿಗೆ ಭಾಗ ಹಿಡಿದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ಶಂಕ್ರವ್ವಳ ಪತಿ ಪ್ರಭು ಹರಿಜನ ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶ್ವಾನದಳದಿಂದ ಪರಿಶೀಲನೆ: ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು, ಬೆರಳಚ್ಚು ತಜ್ಞರು ಘಟನೆ ನಡೆದ ಸ್ಥಳದಿಂದ ಪರಿಶೀಲನೆಗೆ ಮುಂದಾದರು. ಆ ಸಮಯದಲ್ಲಿ ನಾಯಿಗಳು ಮನೆ ಅಕ್ಕಪಕ್ಕದಲ್ಲಿ ಸುತ್ತು ಹೊಡೆದು ಮರಳಿ ಅದೇ ಸ್ಥಳಕ್ಕೆ ಆಗಮಿಸಿ ನಿಂತವು. ಇದರಿಂದ ಪೊಲೀಸರು ಆರೋಪಿತರು ಇದೇ ಸ್ಥಳದವರಾಗಿದ್ದಾರೆಂಬ ಸಂಶಯ ಪಡುವಷ್ಟರಲ್ಲಿಯೇ ಸ್ಥಳೀಯ ಪೊಲೀಸರು ಆರೋಪಿತರ ಸುಳಿವನ್ನು ಅರಿತು ಮಾಳಪ್ಪ ಮಲ್ಲಪ್ಪ ಗುಡಿಮನಿ ಹಾಗೂ ಶಿವಪ್ಪ ಹನುಮಂತ ಚಲವಾದಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.
ಎಸ್‌ಪಿ ಭೇಟಿ: ಘಟನೆ ನಡೆದ ಗುಂಡಕನಾಳ ಗ್ರಾಮಕ್ಕೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಪ್ರಕಾಶ ನಿಕಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಘಟನೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಕೂಡಲೇ ಆರೋಪಿತರ ಪತ್ತೆ ಹಚ್ಚಲಾಗಿದೆ ಶೀಘ್ರದಲ್ಲಿಯೇ ಅಗತ್ಯ ಕ್ರಮ ಜರುಗಿಸಲಾಗುವುದೆಂದು ಸಂಬಂಧಿಕರಿಗೆ ವಿವರಿಸಿದರು. ಘಟನೆ ಬಗ್ಗೆ ಮಾಹಿತಿ ಅರಿತುಕೊಳ್ಳುವುದರೊಂದಿಗೆ ಆರೋಪಿತರ ಸುಳಿವು ಅರಿತು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೇದೆಗಳಾದ ಸಂಜೀವ ಜಾಧವ, ಎಂ.ಎಲ್. ಪಟ್ಟೇದ, ಬಿ.ಜಿ. ಬಲಕಲ್ಲ ಅವರಿಗೆ ಎಸ್‌ಪಿ ವೈಯಕ್ತಿಕವಾಗಿ ತಲಾ 2 ಸಾವಿರ ರೂ. ಬಹುಮಾನ ನೀಡಿದರು.
ಡಿಎಸ್‌ಪಿ ಮಹೇಶ್ವರಗೌಡ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಜಿ.ಎಸ್. ಬಿರಾದಾರ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆ ನಂತರ ತಿಳಿಯಲಿದ್ದು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ. ಆರೋಪಿತರಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು ತನಿಖೆ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಸಂಶಯಾಸ್ಪದ ಮೇಲೆ ಅದೆ ಗ್ರಾಮದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಲಾಗಿದೆ. ಅವರೇ ಈ ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆ ನಂತರ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ದೃಢಪಡಲಿದೆ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇವೆ.
ಪ್ರಕಾಶ ನಿಕ್ಕಂ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ