Advertisement

Hubli; ಬಂಟರು ಪ್ರವಾಸೋದ್ಯಮ ಬೆಳವಣಿಗೆಗೆ ಮುಂದಾಗಬೇಕು: ಶಾಸಕ ಗುರುರಾಜ ಗಂಟಿಹೊಳೆ

04:05 PM Feb 04, 2024 | Team Udayavani |

ಹುಬ್ಬಳ್ಳಿ: ಬಂಟ ಸಮಾಜದವರು ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಸೃಷ್ಟಿಸಿದ್ದಾರೆ. ಆದರೆ, ತಮಗೆ ಜನ್ಮ ನೀಡಿದ ಊರಿನ ಬಗ್ಗೆಯೂ ಗಮನ ಹೊಂದಿ ಊರಿನ ಅಭಿವೃದ್ಧಿಗೆ ಹಾಗೂ ಅಲ್ಲಿನ ಪ್ರವಾಸೋದ್ಯಮ ಬೆಳವಣಿಗೆಗೆ ಮುಂದಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಭಿಪ್ರಾಯಪಟ್ಟರು.

Advertisement

ಹುಬ್ಬಳ್ಳಿ- ಧಾರವಾಡ ಬಂಟರ ಸಂಘ ಆಯೋಜಿಸಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಬಂಟ ಸಮಾಜದವರು ಹೋಟೆಲ್ ಉದ್ಯಮ ಸೇರಿದಂತೆ ವಿವಿಧ ಉದ್ಯಮ ವ್ಯವಹಾರಗಳಲ್ಲಿ ತಮ್ಮದೇ ಸಾಧನೆ ತೋರಿದ್ದಾರೆ. ಇನ್ನು ಮುಂದಾದರು ತಮ್ಮ ಊರಿನ ಕಡೆ ಗಮನ ನೀಡಬೇಕೆಂದರು.

ಬೈಂದೂರು ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತಿಸುವ ಆಶಯ ತಮ್ಮದಾಗಿದ್ದು, ಇದಕ್ಕೆ ಪೂರಕವಾಗಿ ಹಲವು ಯತ್ನಗಳನ್ನು ಕೈಗೊಳ್ಳಲಾಗಿದೆ.  ಸಮಾಜದ ಯುವಕರು ತಮ್ಮ ಊರಿಗೆ ಬಂದು ಅಲ್ಲಿಯೇ ಉದ್ಯಮ- ವ್ಯಾಪಾರ ಆರಂಭಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದರು.

ಬೇರೆ, ಬೇರೆ ಕಡೆ ಇರುವ ಸಮಾಜದ ಜನರು ಬೈಂದೂರಿಗೆ ಹೆಚ್ಚು ಭೇಟಿ ನೀಡುವ ಮೂಲಕ ಅದನ್ನು ಪ್ರವಾಸೋದ್ಯಮ ಕೇಂದ್ರವಾಗಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಬಂಟ ಸಮಾಜದವರು ಸಾಹಸಿಗರು, ಸ್ನೇಹ ಪ್ರಿಯರು ಹೌದು. ಹೋಟೆಲ್ ಉದ್ಯಮ ಸುಲಭದ್ದಲ್ಲ ಅದನ್ನು ತಮ್ಮ ಪರಿಶ್ರಮದೊಂದಿಗೆ ಬಂಟರ ಸಮಾಜದವರು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಬಂಟರ ಸಮಾಜದವರು ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಡುವುದು ಉತ್ತಮ ಎಂದು ಸಲಹೆ ನೀಡಿದರು.

Advertisement

ಹುಬ್ಬಳ್ಳಿ -ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ವಿವಿಧ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಇದಕ್ಕೆ ಸಮಾಜದ ಎಲ್ಲರ ಸಹಕಾರವೇ ಕಾರಣ ಎಂದರು.

ಉದ್ಯಮಿ ಪ್ರಸನ್ನ ಶಂಕರಶೆಟ್ಟಿ ಅವರು ತಮ್ಮ ತಂದೆಯವರ ಸ್ಮರಣಾರ್ಥ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಾರಿ ಸುಮಾರು 7.5 ಲಕ್ಷ ವಿದ್ಯಾರ್ಥಿ ವೇತನ ಇನ್ನಿತರ ನೆರವು ನೀಡಿದ್ದು, ವಿದ್ಯಾರ್ಥಿಗಳಿರಲಿ, ರೋಗಿಗಳಿರಲಿ ನಮ್ಮಿಂದ ಬೇಡಿಕೆ ಹೋದರೆ ಖಂಡಿತವಾಗಿ ಅವರು ಸ್ಪಂದಿಸುತ್ತಾರೆ. ಕಳೆದೊಂದು ವರ್ಷದಲ್ಲಿ ಅವರು ಸುಮಾರು 20 ಲಕ್ಷ ರೂ.ಗಳ ನೆರವು  ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಬಂಟರ ಸಮಾಜದ ಹಲವರನ್ನು ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next