Advertisement

ಬಂಟರ ಸಂಘ: ಮುದ್ರಾಡಿ ಮೇಲ್ಮನೆ ಕೃಷ್ಣ  ಶೆಟ್ಟಿ ಅವರಿಗೆ ಶ್ರದ್ಧಾಂಜಲಿ

03:55 PM Jun 18, 2018 | |

ಮುಂಬಯಿ: ನಗರದ ಹಿರಿಯ ಹೊಟೇಲ್‌ ಉದ್ಯಮಿ, ಮಾಜಿ ನಗರ ಸೇವಕ ಮುದ್ರಾಡಿ ಮೇಲ್ಮನೆ ಕೃಷ್ಣ ಡಿ. ಶೆಟ್ಟಿ ಅವರು ಮೇ 28ರಂದು ನಿಧನರಾಗಿದ್ದು, ಅವರ ಆತ್ಮ ಸದ್ಗತಿಗಾಗಿ ಜೂ. 13ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

Advertisement

ಅಂಧೇರಿಯ ಮಾಜಿ ಶಾಸಕ ಸುರೇಶ್‌ ಶೆಟ್ಟಿ ಅವರು ನುಡಿನಮನ ಸಲ್ಲಿಸಿ, ಸಮಾಜ ಸೇವೆಯ ಮೂಲಕ ನಗರ ಸೇವಕರಾಗಿ, ಕಾಂಗ್ರೆಸ್‌ ಪಕ್ಷದ ಧೀಮಂತ ನಾಯಕರ ನಂಟನ್ನು ಬೆಳೆಸಿಕೊಂಡು ಓರ್ವ ನಿಷ್ಠಾವಂತ ರಾಜಕಾರಣಿಯಾಗಿ ಸಾರ್ಥಕ ಬದುಕನ್ನು ಕಟ್ಟಿಕೊಂಡವರು. ಅವರ ಆಗಲಿಕೆ ದು:ಖವಾಗಿರದೆ, ಜೀವನದ ಎಲ್ಲಾ ಮಜಲುಗಳಲ್ಲೂ ರಾಜರಾಗಿ ಬಾಳಿದವರು. ಅವರ ನೆನಪು ಅಂಧೇರಿಯಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ನುಡಿದರು.

ಬಂಟ್ವಾಳದ ಶಾಸಕ, ಕೃಷ್ಣ ಶೆಟ್ಟಿ ಅವರ ಅಳಿಯ ರಾಜೇಶ್‌ ನಾಯ್ಕ ಉಳಿಪಾಡಿ ಇವರು ಮಾತನಾಡಿ, ತಾನಿಂದು ರಾಜಕೀಯದಲ್ಲಿ ಬೆಳೆಯಲು ಪ್ರೇರಣೆ ಕೃಷ್ಣ ಶೆಟ್ಟಿ ಅವರು. ಸಮಾಜ ಸೇವಕನಾಗಿದ್ದ ತನ್ನನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ನಮ್ಮ ಕುಟುಂಬಕ್ಕೆ ರಾಜಕೀಯ ಜೀವನದ ಅರಿವು ಮೂಡಿಸಿದ್ದಾರೆ ಎಂದರು.

ಎನ್‌ಸಿಪಿಯ ನೇತಾರ ಲಕ್ಷ್ಮಣ್‌ ಪೂಜಾರಿ ಅವರು ನುಡಿನಮನ ಸಲ್ಲಿಸಿ, ಕೃಷ್ಣ ಶೆಟ್ಟಿ ಅವರು ಅಂಧೇರಿಯ ಪ್ರದೇಶಕ್ಕೆ ಹುಲಿಯಂತಿದ್ದರು. ಯಾವುದೇ ಸಮಸ್ಯೆಗಳು ಪರಿಸರದಲ್ಲಿ ಉದ್ಭವಿಸಿದಾಗ ಕೃಷ್ಣ ಶೆಟ್ಟಿ ಅವರೇ ನಿಂತು ಪರಿಹರಿಸುತ್ತಿದ್ದರು ಎಂದು ನುಡಿದರು.

ಪುಣೆಯ ನಗರ ಸೇವಕಿ ಸುಜಾತಾ ಶೆಟ್ಟಿ ಅವರು ಮಾತನಾಡಿ, ನಮ್ಮ ಕುಟುಂಬವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿ, ಪುಣೆಯಂತಹ ನಗರದಲ್ಲಿ ನಾನು ರಾಜಕೀಯವಾಗಿ ಬೆಳೆಯಲು ಮಾರ್ಗದರ್ಶಕರಾಗಿದ್ದರು ಎಂದರು.

Advertisement

ವಿಲೇಪಾರ್ಲೆಯ ಮಾಜಿ ಶಾಸಕ ಕೃಷ್ಣ ಹೆಗ್ಡೆ ಇವರು ನುಡಿ ನಮನ ಸಲ್ಲಿಸಿ, ನಮ್ಮ ತಂದೆಯ ಕಾಲದಿಂದಲೂ ನಮ್ಮೊಂದಿಗೆ ಬಹಳ ಆತ್ಮೀಯತೆಯನ್ನು ಬೆಳೆಸಿಕೊಂಡವರು. ನಿಷ್ಠಾವಂತ ರಾಜಕಾರಣಿಯಾಗಿ ನಿಷ್ಠುರವಾಗದಂತೆ 

ಜೀವನ ನಡೆಸಿ ಎಲ್ಲರಿಗೂ ಆದರ್ಶ ಪ್ರಾಯ ರಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ದಿ| ಕೃಷ್ಣ ಶೆಟ್ಟಿ ಅವರ ಭಾವಚಿತ್ರಕ್ಕೆ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮತ್ತು ಪದಾಧಿಕಾರಿಗಳು ಬೃಹತ್‌ ಹೂವಿನ ಹಾರ ಸಮರ್ಪಿಸಿದರು.

ಕಾಂಗ್ರೆಸ್‌ ಪಕ್ಷದ ಮುಂಬಯಿ ಪ್ರದೇಶ ಅಧ್ಯಕ್ಷ ಸಂಜಯ್‌ ನಿರುಪಮ್‌, ಬೊರಿವಲಿ ಮಾಜಿ ನಗರ ಸೇವಕ ಶಿವಾನಂದ ಶೆಟ್ಟಿ, ಚರಿಷ್ಮಾ ಸುಧೀರ್‌ ಶೆಟ್ಟಿ, ಐಕಳ ಹರೀಶ್‌ ಶೆಟ್ಟಿ, ಕೃಷ್ಣ ಶೆಟ್ಟಿ ಇವರ ಕುಟುಂಬಿಕರು, ಹಿತೈಷಿಗಳು, ಅಭಿಮಾನಿಗಳು, ಬಂಟ ಸಮಾಜದ ಗಣ್ಯರು, ಮುದ್ರಾಡಿ ದಿವಾಕರ ಶೆಟ್ಟಿ ಅವರು ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಿದರು. ಸಂತೋಷ್‌ ಕ್ಯಾಟರಿಂಗ್‌ ಇದರ ಮಾಲಕ ರಾಘು ಪಿ. ಶೆಟ್ಟಿ ಇವರು ಕೃಷ್ಣ ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next