ಮುಂಬಯಿ: ಮಹಿಳೆಯರು ಕೌಟುಂಬಿಕ ಕೆಲಸ- ಕಾರ್ಯಗಳ ನಿಮಿತ್ತದಿಂದಾಗಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನು ಮರೆತು ಬಿಡುತ್ತಿದ್ದಾರೆ. ಇದು ಸಲ್ಲದು. ತಮ್ಮ ದೈನಂದಿನ ಕೆಲಸ-ಕಾರ್ಯಗಳೊಂದಿಗೆ ಕುಟುಂಬವನ್ನು ನಿರ್ವಹಿಸಿಕೊಳ್ಳುವು ದರ ಜತೆಗೆ ಆರೋಗ್ಯ ಭಾಗ್ಯದೆಡೆಗೆ ಹೆಚ್ಚಿನ ಗಮನ ನೀಡಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವುದರಿಂದ ನಮ್ಮಲ್ಲಿರುವ ಸಮಸ್ಯೆಗಳಿಗೆ ಪ್ರಾರಂಭದಿಂದಲೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಕಾಯಿಲೆ ಉಲ್ಬಣಿಸಿದ ಮೇಲೆ ವೈದ್ಯರ ಬಳಿಗೆ ಹೋದರೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ. ಸಮಾಜದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯು ಆಯೋಜಿಸಿದ ಆರೋಗ್ಯ ಶಿಬಿರ ಸ್ತುತ್ಯರ್ಹವಾಗಿದೆ ಎಂದು ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ನುಡಿದರು.
ಜು. 30ರಂದು ದಹಿಸರ್ ಚೆಕ್‌ನಾಕಾದ ಸನ್‌ಶೈನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಉಚಿತ ವೈದ್ಯಕೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಇವರು, ಸಮಾಜದ ಮಹಿಳೆಯರು ಆರೋಗ್ಯ ಭಾಗ್ಯದೆಡೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು, ಮಹಿಳೆಯರು ತಮ್ಮ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಬೇಕು. ಸಮಾಜದ ಮತ್ತು ಕುಟುಂಬದ ಎಲ್ಲಾ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಇಂತಹ ವಿಚಾರ ಸಂಕಿರಣಗಳಲ್ಲಿ ಮಹಿಳೆಯರು ಪಾಲ್ಗೊಂಡು ಆರೋಗ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ನುಡಿದರು.
ಪ್ರಾದೇಶಿಕ ಸಮಿತಿಯ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ| ಅಂಬರೀಷ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ತ್ರೀಯರಿಗೆ ಬರುವ ವಿವಿಧ ಕಾಯಿಲೆಗಳನ್ನು, ದೂರೀ ಕರಿಸಲು ಮಾರ್ಗದರ್ಶನದ ಅಗತ್ಯವಿದೆ. ಕೇವಲ ಮಹಿಳೆಯರ ಆರೋಗ್ಯದ ಬಗ್ಗೆ ಚಿಂತಿಸದೆ, ಪುರುಷರಿಗೆ ಕೂಡ ಆರೋಗ್ಯದ ಬಗ್ಗೆ ಶಿಬಿರ ಬೇಕಾಗಿದೆ. ಹಿಂದಿನ ಕಾಲದಲ್ಲಿ ಕ್ಯಾನ್ಸರ್‌ನಂತಹ ಕಾಯಿಲೆ ದೊಡ್ಡ ದೊಡ್ಡ ನಗರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಒಬ್ಬ ವ್ಯಕ್ತಿಗೆ ಬಂತೆಂದರೆ ಅದು ಭಯದ ವಾತಾವರಣ ಸೃಷ್ಟಿಸುತ್ತಿತ್ತು. ಆದರೆ ಈಗ ಕ್ಯಾನ್ಸರ್‌ನಂಥ ಭಯಾನಕ ಕಾಯಿಲೆಗಳು ಮನೆ ಮನೆಗಳಲ್ಲಿ ಸಾಮಾನ್ಯವಾಗಿವೆ ಎಂದರು.
ಪ್ರಸಿದ್ಧ ವೈದ್ಯರಾದ ಡಾ| ನವನೀತಾ ದೇಸಾಯಿ, ಡಾ| ಗೀತಾಂಜಲಿ ಅಮೀನ್ ಅವರನ್ನು ಮಹಿಳಾ ವಿಭಾಗದಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಸುಮಂಗಳಾ ಶೆಟ್ಟಿ ಕಣಂಜಾರು, ಜಯಶ್ರೀ ಶೆಟ್ಟಿ, ಕಾರ್ಯದರ್ಶಿ ನಯನಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ವಸಂತಿ ಶೆಟ್ಟಿ, ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ, ಜೊತೆ ಕೋಶಾಧಿಕಾರಿ ಸುಜಾತಾ ಶೆಟ್ಟಿ ಉಪಸ್ಥಿತರಿದ್ದರು. ತಜ್ಞ ವೈದ್ಯರು ಮಹಿಳೆಯರಿಗೆ ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ ಅವರು ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ರವೀಂದ್ರ ಕೊಟ್ರಪಾಡಿಗುತ್ತು ಅವರು ಕಾರ್ಯಕ್ರಮ ನಿರ್ವಹಿಸಿದರು.
ಮಹಿಳೆಯರಿಗೆ ಪ್ರಯೋಜನವಾಗಲಿ
ನಮಗೆ ಆರೋಗ್ಯ ಹದಗೆಟ್ಟಾಗ ವೈದ್ಯರ ಬಳಿ ಹೋಗುವುದಕ್ಕಿಂತ ಮುಂಜಾಗ್ರತೆ ವಹಿಸಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆಗೆ ಯಾವುದೇ ಕಾಯಿಲೆ ಬಾರದಂತೆ ನೋಡಿಕೊಳ್ಳಲು ಸಾಧ್ಯವಿದೆ. ಆರೋಗ್ಯದ ಬಗ್ಗೆ ಈ ವಿಚಾರ ಸಂಕಿರಣ ಉಪಯುಕ್ತವಾಗಿದೆ. ಇಂದು ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಕೂಡಾ ವೈದ್ಯಕೀಯ ಮಾಹಿತಿ ಅಗತ್ಯವಿದ್ದವರು ಸೇರಿಕೊಂಡಿರುವುದು ಅಭಿನಂದನೀಯ. ಈ ನಿಟ್ಟಿನಲ್ಲಿ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಮಹಿಳೆಯರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿ ಎಂದು ಗಿರೀಶ್ ಶೆಟ್ಟಿ ತೆಳ್ಳಾರ್ (ಕಾರ್ಯಾಧ್ಯಕ್ಷರು : ಬಂಟರ ಸಂಘ ಮೀರಾ-ಭಾಯಂದರ್ ಸಮಿತಿ) ಅವರು ಹೇಳಿದರು.