ಮುಂಬಯಿ: ಎಲ್ಫಿನ್‌ಸ್ಟನ್ ರೈಲ್ವೇ ಬ್ರಿಡ್ಜ್ ದುರಂತದಿಂದ ಸಾವನ್ನಪ್ಪಿರುವ ಬಂಟರ ಮುಂಬಯಿ ಇದರ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಸಕ್ರಿಯ ಸದಸ್ಯರಾದ ಸುಮಲತಾ ಸಿ. ಶೆಟ್ಟಿ ಮತ್ತು ಸುಜಾತಾ ಪಿ. ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆಯು ಕುರ್ಲಾ ಪೂರ್ವದ ಬಂಟರ ಭವನದ ಕಬೆತ್ತಿಗುತ್ತು ಕಾಶಿ ಸಿದ್ದು ಶೆಟ್ಟಿ ಕಿರು ಸಭಾಗೃಹದಲ್ಲಿ ಅ. 4ರಂದು ಸಂಜೆ ನಡೆಯಿತು.
ಸಂಘದ ಪದಾಧಿಕಾರಿಗಳು, ಸದಸ್ಯರು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಮೃತರ ಕುಟುಂಬಿಕರು, ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ಶೋಕ ವ್ಯಕ್ತಪಡಿಸಿ ಮಾತನಾಡಿ, ಸಂಘವು ಇಬ್ಬರು ಪ್ರತಿಭಾನ್ವಿತ ಮಹಿಳೆಯರನ್ನು ಕಳೆದುಕೊಂಡಿದ್ದು, ಇದರಿಂದ ಸಂಘಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿ, ಕುಟುಂಬಿಕರ ಯಾವುದೇ ರೀತಿಯ ಸಮಸ್ಯೆಗಳಿಗೆ ಸಂಘವು ಸದಾ ಸ್ಪಂದಿಸುತ್ತದೆ ಎಂದು ನುಡಿದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ದಸರಾ ನವರಾತ್ರಿಯ ಪರ್ವಕಾಲದಲ್ಲಿ ಘಟಿಸಿದ ಈ ಅನಿರೀಕ್ಷಿತ ದುರಂತದಿಂದ ಬಂಟರ ಸಂಘವಷ್ಟೇ ಅಲ್ಲ ಸಮಸ್ತ ತುಳು-ಕನ್ನಡಿಗರು ಕಣ್ಣೀರು ಮಿಡಿದಿದ್ದಾರೆ. ಅನ್ಯೋನ್ಯ ಪ್ರೀತಿಯಿಂದ ಇಬ್ಬರೂ ಗೆಳೆತಿಯರು ದೇವರ ಪಾದ ಸೇರಿರುವುದಂತೂ ಖಂಡಿತಾ ಎಂದು ಹೇಳಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಾ ಶೆಟ್ಟಿ, ಸಂಘ ಪೊವಾಯಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಮಂಡಳಿಯ ನಂದಳಿಕೆ ನಾರಾಯಣ ಶೆಟ್ಟಿ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ಸಂಘದ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಸದಾಶಿವ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು