ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾಂದಿವಲಿ ಪೂರ್ವದ ಹೊಟೇಲ್ ಅವೆನ್ಯೂ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಕಲಾವಿದರಿಂದ ಶ್ರೀರಾಮ ಪಟ್ಟಾಭಿಷೇಕ-ವಾಲಿಮೋಕ್ಷ ಯಕ್ಷಗಾನ ತಾಳ ಮದ್ದಳೆಯು ಆ. 14ರಂದು ಸಂಜೆ ನಡೆಯಿತು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಯಕ್ಷಗಾನ ಕಲಾವಿದ, ಪ್ರಾಚಾರ್ಯ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು, ಮಹಾನಗರದಲ್ಲಿ ಯಕ್ಷಗಾನಕ್ಕೆ ಕಲಾಭಿಮಾನಿಗಳ ಕೊಡುಗೆ ಅಪಾರವಾಗಿದೆ. ಪಾರಂಪರಿಕ ಕಲೆಗೆ ಮಹಾನಗರದಲ್ಲಿ ದೊರೆಯುತ್ತಿರುವ ಸಹಕಾರ ಮೆಚ್ಚುವಂಥದ್ದು. ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯು ವರ್ಷಂಪ್ರತಿ ತಾಳಮದ್ದಳೆ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯಕ್ಷಗಾನ ಕಲಾವಿದರನ್ನು ಪೋಷಿಸುವ ಕಾಯಕದಲ್ಲಿ ತೊಡಗಿರುವುದು ಅಭಿನಂದನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯ ಮುಂಡಪ್ಪ
ಎಸ್. ಪಯ್ಯಡೆ, ಸಮಿತಿಯ ಗೌರವ ಕೋಶಾಧಿಕಾರಿ ಕೆ. ಪ್ರೇಮನಾಥ ಶೆಟ್ಟಿ, ಸಂಚಾಲಕ ಮನೋಹರ ಎನ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಎಂ. ಜಿ. ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯೆಯರು, ಯುವ ವಿಭಾಗದ ಸದಸ್ಯರು, ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಸರದ ಸಮಾಜ ಬಾಂಧವರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಉದ್ಯಮಿ ಬಾಬು ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.