Advertisement

ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡಾಕೂಟ ಪೂರ್ವಭಾವಿ ಸಭೆ

03:37 PM Jan 02, 2018 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಜ. 21ರಂದು  ಕಾಂದಿವಲಿ ಪಶ್ಚಿಮದ ರಘುಲೀಲ ಮಾಲ್‌ ಸಮೀಪದ ಪೊಯಿಸರ್‌ ಜಿಮಾVನ ನೇತಾಜಿ ಸುಭಾಶ್ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಜರಗಲಿರುವ ಸಂಘದ ವಾರ್ಷಿಕ ಕ್ರೀಡಾಕೂಟ-2018 ಇದರ ರೂಪುರೇಷೆಗಳ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯು ಡಿ. 30ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಕಾಶಿ ಸಿದ್ಧು ಶೆಟ್ಟಿ ಕಿರುಸಭಾಗೃಹದಲ್ಲಿ ಜರಗಿತು.

Advertisement

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರತೀ ವರ್ಷ ನಡೆಸಿಕೊಂಡು ಬರುತ್ತಿರುವ ಕ್ರೀಡಾಕೂಟವು ಬಂಟರ ಸಂಘದ ಸದಸ್ಯ ಪರಿವಾರದ ಸ್ನೇಹಕೂಟವಾಗಿದ್ದು, ಪ್ರತಿಯೊಬ್ಬ ಸದಸ್ಯರ ಸ್ನೇಹ ಸಂಬಂಧ ಹಾಗೂ ಸೌಹಾರ್ಧತೆಯನ್ನು ಬಲ ಗೊಳಿಸಲು ಪ್ರೇರಣೆ ನೀಡುತ್ತದೆ. ಕ್ರೀಡೆ ನಮ್ಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಬೇಕೇ ಹೊರತು, ಸ್ಪರ್ಧಾತ್ಮಕ ದೃಷ್ಟಿಯಿಂದ ಇದನ್ನು ನಾವು ನೋಡಬಾರದು. ಯಾವುದೇ ವಿಚಾರವಾಗಲಿ, ನಮ್ಮ ನಮ್ಮೊಳಗೆ ಸ್ಪರ್ಧೆ ಸಲ್ಲದು. ಕ್ರೀಡೆಯನ್ನು ಮನರಂಜನೆಯಾಗಿ ಬಳಸಿಕೊಳ್ಳೋಣ. ಪ್ರತಿಯೋರ್ವ ಸದಸ್ಯರು ಶಿಸ್ತು, ಸಂಯಮ, ಸ್ನೇಹ ಸಂಬಂಧವನ್ನು ಕಾಪಾಡಿ, ಕ್ರೀಡಾಕೂಟದ ಯಶಸ್ಸಿಗೆ ಕಾರಣರಾಗಬೇಕು ಎಂದು ವಿನಂತಿಸಿದರು.

ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಠಲ್‌ ಎಸ್‌. ಆಳ್ವ ಅವರು ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ಸದಸ್ಯರು ಹಾಗೂ ತಂಡಗಳು ತಮ್ಮ ಹೆಸರನ್ನು ಈ ಕೂಡಲೇ ಬಂಟರ ಸಂಘಕ್ಕೆ ತಲುಪಿಸಬೇಕು. ಈ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಆಧಾರ್‌ಕಾರ್ಡ್‌ ಗುರುತು ಪತ್ರವನ್ನು  ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇತರ ಯಾವುದೇ ಗುರುತು ಕಾರ್ಡ್‌ಗಳನ್ನು ಉಪಯೋಗಿಸುವಂತಿಲ್ಲ. 

ಪಂದ್ಯಾಟದ ಸರದಿಗಾಗಿ ಸಂಘದ ಮುಂದಿನ ಮಾಸಿಕ ಸಭೆಯಲ್ಲಿ ಲಕ್ಕಿಡ್ರಾ ಎತ್ತಲಾಗುವುದು. 

ಪ್ರತಿ ಗಂಟೆಗೊಂದು ಬಾರಿ ಸಂಘದ ಪ್ರಾದೇಶಿಕ ಸಮಿತಿಗಳಿಗೆ ಸ್ವಾಗತ ಕಕ್ಷೆಯ  ಜವಾಬ್ದಾರಿ ನೀಡಲಾಗಿದೆ. ಅದರಂತೆ ಜೋಗೇಶ್ವರಿ-ದಹಿಸರ್‌ ಬೆಳಗ್ಗೆ  8 ರಿಂದ 9ರ ವರೆಗೆ, ಅಂಧೇರಿ-ಬಾಂದ್ರಾ ಬೆಳಗ್ಗೆ 9 ರಿಂದ ಬೆಳಗ್ಗೆ 10 ರ ವರೆಗೆ, ಮೀರಾ-ಭಾಯಂದರ್‌ ಬೆಳಗ್ಗೆ 10ರಿಂದ ಪೂರ್ವಾಹ್ನ 11ರವರೆಗೆ, ಸಿಟಿ ರೀಜನ್‌ ಪೂರ್ವಾಹ್ನ 11 ರಿಂದ ಮಧ್ಯಾಹ್ನ 12 ರವರೆಗೆ, ನವಿಮುಂಬಯಿ ಸಮಿತಿ ಮಧ್ಯಾಹ್ನ 12ರಿಂದ ಮಧ್ಯಾಹ್ನ 1 ರವರೆಗೆ, ಡೊಂಬಿವಲಿ ಸಮಿತಿ ಮಧ್ಯಾಹ್ನ 1 ರಿಂದ ಅಪರಾಹ್ನ 2 ರವರೆಗೆ, ವಸಾಯಿ- ಡಹಾಣೂ ಸಮಿತಿ ಅಪರಾಹ್ನ 2 ರಿಂದ ಅಪರಾಹ್ನ 3ರವರೆಗೆ, ಕಲ್ಯಾಣ್‌-ಭಿವಂಡಿ ಅಪರಾಹ್ನ 3 ರಿಂದ ಅಪರಾಹ್ನ 4 ರವರೆಗೆ, ಕುರ್ಲಾ-ಭಾಂಡೂಪ್‌ ಅಪರಾಹ್ನ 4 ರಿಂದ ಸಂಜೆ 5 ರವರೆಗೆ ಸ್ವಾಗತ ಕಕ್ಷೆಯಲ್ಲಿದ್ದು ಸಹಕರಿಸಬೇಕು. ಸಂಘದ ಯುವ ವಿಭಾಗದವರು ಪ್ರವೇಶ ದ್ವಾರದಲ್ಲಿ ಅತಿಥಿಗಳು, ವಿಶೇಷ ಆಮಂತ್ರಿತರನ್ನು ಸ್ವಾಗತಿಸಲಿದ್ದಾರೆ. ಟೀ ಶರ್ಟ್‌ ಬಣ್ಣವು ಕಳೆದ ವರ್ಷದಂತೆ ಮುಂದುವರಿಯಲಿದೆ ಎಂದು ತಿಳಿಸಿದರು.

Advertisement

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ ಅವರು ಕ್ರೀಡಾಕೂಟದ ಮುಖ್ಯ ಪ್ರಾಯೋಜಕರಾದ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಹಾಗೂ ಕಾರ್ಯಾಧ್ಯಕ್ಷ ಡಾ| ಆರ್‌. ಕೆ. ಶೆಟ್ಟಿ ಅವರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. 

ಸಂಘದ ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ ಅವರು ಮಾತನಾಡಿ, ಕ್ರೀಡಾಕೂಟದ ಮುಖ್ಯಸ್ಥರಾಗಿರುವ ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ ಅವರ ನಿರ್ಣಯವೇ ಅಂತಿಮವಾಗಿದ್ದು, ಸದಸ್ಯರು ಇದನ್ನು ಗಮನಿಸುವಂತೆ ವಿನಂತಿಸಿದರು.

ಕ್ರೀಡಾಂಗಣದಲ್ಲಿ ನಿರ್ಣಾಕರ ಮುಖ್ಯ ಅಧಿಕಾರಿಯನ್ನಾಗಿ ವಿಜಯ್‌ ಶೆಟ್ಟಿ ಅವರನ್ನು ನೇಮಿಸಲಾಯಿತು. ಕಾರ್ಯಕ್ರಮದ ನಿರೂಪಕರನ್ನಾಗಿ ಬಂಟರವಾಣಿ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಾಹಿತ್ಯ ಮತ್ತು  ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಹರೀಶ್‌ ವಾಸು ಶೆಟ್ಟಿ, ಪತ್ರಿಕಾ ಪ್ರಚಾರಕರಾಗಿ ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ಅವರನ್ನು ನೇಮಿಸಲಾಯಿತು. ಸಂಘದ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ ಅವರು ಕೆಲವೊಂದು ಉಪಯುಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ ವಂದಿಸಿದರು. 

ಚಿತ್ರ -ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next