Advertisement

ಸೌಲಭ್ಯವಿಲ್ಲದ ಶಿಕ್ಷಣ ಸಂಸ್ಥೆ ಬಂದ್‌ ಮಾಡಿ

12:22 PM Dec 12, 2017 | Team Udayavani |

ಬೆಂಗಳೂರು: ಮೂಲ ಸೌಕರ್ಯ ಹಾಗೂ ಬೋಧಕರ ಕೊರತೆ ಎದುರಿಸುತ್ತಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ವರ್ಷದಿಂದ ಮಾನ್ಯತೆ ನೀಡದಂತೆ ರಾಜ್ಯಪಾಲ ವಿ.ಅರ್‌.ವಾಲಾ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಹೋಟೆಲೊಂದರಲ್ಲಿ ಸೋಮವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಹಾಗೂ ಸ್ವಾಯತ್ತ ತಾಂತ್ರಿಕ ಮಹಾವಿದ್ಯಾಲಯಗಳ ಅಧ್ಯಕ್ಷ, ಕಾರ್ಯಾಧ್ಯಕ್ಷ, ಆಡಳಿತ ಮಂಡಳಿ ಸದಸ್ಯರ  ಶೃಂಗಸಭೆ ಉದ್ಘಾಟಿಸಿ ಮತನಾಡಿದರು.

ಶಿಕ್ಷಣ ಸಂಸ್ಥೆಯಲ್ಲಿ ಎಲ್ಲ ರೀತಿಯ ಸೌಲಭ್ಯ ಇದ್ದಾಗ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಸರ್ಕಾರಿ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟು ಭರ್ತಿಯಾಗುವುದಿಲ್ಲ ಎಂಬ ಆರೋಪವೂ ಇದೆ. ಬೋಧಕರಿಲ್ಲದೇ ಶೈಕ್ಷಣಿಕ ಸಾಧನೆ ಅಸಾಧ್ಯ.

ಹೀಗಾಗಿ ಸೌಲಭ್ಯ ಚೆನ್ನಾಗಿಲ್ಲದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ವರ್ಷದಿಂದ ಮಾನ್ಯತೆ ನವೀಕರಿಸಬೇಡಿ ಎಂದು ವೇದಿಕೆಯಲ್ಲಿ ಕುಳಿತಿದ್ದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಸೂಚಿಸಿದರು.

ಸಂಸ್ಥೆ ಮುಖ್ಯಸ್ಥರಿಗೆ ಪಾಠ: ಹಣಗಳಿಸುವ ಉದ್ದೇಶದಿಂದ ಖಾಸಗಿ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬಾರದು. ಶಿಕ್ಷಣ ವ್ಯಾಪಾರದ ಸೊತ್ತಲ್ಲ. ರಾಷ್ಟ್ರದ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಗುಣ ತುಂಬುವ ಕೆಲಸ ಆಗಬೇಕು.

Advertisement

ಹಣ ಮಾಡುವ ಉದ್ದೇಶದಿಂದ ಆರಂಭವಾಗುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ಸೇವಾ ಮನೋಧರ್ಮ ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಂಸ್ಥೆಯ ಮುಖ್ಯಸ್ಥರು ಅರಿತಿರಬೇಕು ಎಂಬ ಸಲಹೆ ನೀಡಿದರು.

ಕೋಟ್ಯಾಂತರ ರೂಪಾಯಿ ವ್ಯಯಿಸಿ ವೈದ್ಯ ಪದವಿ ಪಡೆದವರಿಂದ ವೈದ್ಯಕೀಯ ಸೇವೆ ನಿರೀಕ್ಷೆ ಮಾಡಲು ಸಾಧ್ಯವೇ? ಹೀಗಾಗಿ ಶಿಕ್ಷಣ ಸಂಸ್ಥೆಗಳು ಹಣ ಮಾಡುವ ಸಂಸ್ಥೆಗಳಾಗದೇ ರಾಷ್ಟ್ರ ಅಭ್ಯುದಯದ ಕೇಂದ್ರವಾಗಬೇಕು. ರಾಷ್ಟ್ರದ ಹಿತ ಗಮನದಲ್ಲಿಟ್ಟುಕೊಂಡು ತಂತ್ರಜ್ಞರನ್ನು ಸೃಷ್ಠಿಸಬೇಕು. ಶಿಕ್ಷಣ ಸಂಸ್ಥೆಗಳು ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳುವಂತಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಚ್‌.ಎನ್‌. ಜಗನ್ನಾಥರೆಡ್ಡಿ, ಡಾ. ಸತೀಶ ಅಣ್ಣಿಗೇರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next