ದುಬಾೖ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 15 ವಿಕೆಟ್ ಉಡಾಯಿಸಿದ ಬಾರತದ ಜಸ್‌ಪ್ರೀತ್ ಬುಮ್ರಾ ನೂತನ ಐಸಿಸಿ ಏಕದಿನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಒಮ್ಮೆಲೇ 27 ಸ್ಥಾನಗಳ ನೆಗೆತ ಕಂಡು 4ನೇ ಸ್ಥಾನವನ್ನು ಆಲಂಕರಿಸಿದ್ದಾರೆ. ಇದು ಬುಮ್ರಾ ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್. ಇವರಿಗಿಂತ ಮೇಲಿರುವವರೆಂದರೆ ಜೋಶ್ ಹ್ಯಾಝಲ್‌ವುಡ್, ಇಮ್ರಾನ್ ತಾಹಿರ್ ಮತ್ತು ಮಿಚೆಲ್ ಸ್ಟಾರ್ಕ್.
ಕಳೆದ ಜೂನ್‌ನಲ್ಲಿ 24ನೇ ಸ್ಥಾನದಲ್ಲಿದ್ದುದು ಜಸ್‌ಪ್ರೀತ್ ಬುಮ್ರಾ ಅವರ ಈವರೆಗಿನ ಅತ್ಯುತ್ತಮ ರ್‍ಯಾಂಕಿಂಗ್ ಆಗಿತ್ತು.ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕೂಡ ಮೊದಲ ಬಾರಿಗೆ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು 10 ಸ್ಥಾನಗಳ ಜಿಗಿತ. ಈಗ 10ನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ 61ಕ್ಕೆ (2 ಸ್ಥಾನ ಪ್ರಗತಿ), ಕುಲದೀಪ್ ಯಾದವ್ 89ಕ್ಕೆ (21 ಸ್ಥಾನಗಳ ಏರಿಕೆ), ಯಜುವೇಂದ್ರ ಚಾಹಲ್ 99ಕ್ಕೆ (55 ಸ್ಥಾನ ನೆಗೆತ) ಏರಿದ್ದಾರೆ.
ಕೊಹ್ಲಿ ಅಂಕ ದಾಖಲೆ
ಈ ಸರಣಿಯಲ್ಲಿ 2 ಶತಕಗಳ ಸಹಿತ 330 ರನ್ ಬಾರಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನಿ ಡೇವಿಡ್ ವಾರ್ನರ್ ಮತ್ತು ಕೊಹ್ಲಿ ನಡುವಿನ ಅಂಕಗಳ ಅಂತರವೀಗ 12ರಿಂದ 26ಕ್ಕೆ ಏರಿದೆ. ಕೊಹ್ಲಿ 887 ಅಂಕಗಳನ್ನು ಹೊಂದಿದ್ದು, ಸರ್ವಾಧಿಕ ಅಂಕಗಳ ಭಾರತೀಯ ಬ್ಯಾಟ್ಸ್‌ಮನ್ ದಾಖಲೆಯನ್ನು ಸರಿದೂಗಿಸಿದ್ದಾರೆ. ಸಚಿನ್ ತೆಂಡುಲ್ಕರ್ 1998ರಲ್ಲಿ ಇಷ್ಟೇ ಅಂಕಗಳನ್ನು ಹೊಂದಿದ್ದರು.ಸರಣಿಯಲ್ಲಿ 302 ರನ್ ಬಾರಿಸಿ ದ್ವಿತೀಯ ಸ್ಥಾನ ಪಡೆದ ರೋಹಿತ್ ಶರ್ಮ, ಕೀಪರ್ ಮಹೇಂದ್ರ ಸಿಂಗ್ ಧೋನಿ ಮರಳಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್-10 ಬ್ಯಾಟ್ಸ್‌ಮನ್: 1. ವಿರಾಟ್ ಕೊಹ್ಲಿ (887), 2. ಡೇವಿಡ್ ವಾರ್ನರ್ (861), 3. ಎಬಿ ಡಿ ವಿಲಿಯರ್ (847), 4. ಜೋ ರೂಟ್ (799), 5. ಬಾಬರ್ ಆಜಂ (786), 6. ಕೇನ್ ವಿಲಿಯಮ್ಸನ್ (779), 7. ಕ್ವಿಂಟನ್ ಡಿ ಕಾಕ್ (769), 8. ಫಾ ಡು ಪ್ಲೆಸಿಸ್ (768), 9. ರೋಹಿತ್ ಶರ್ಮ (764), 10. ಮಹೇಂದ್ರ ಸಿಂಗ್ ಧೋನಿ (749).
Related Articles
ಟಾಪ್-10 ಬೌಲರ್: 1. ಜೋಶ್ ಹ್ಯಾಝಲ್‌ವುಡ್ (732), 2. ಇಮ್ರಾನ್ ತಾಹಿರ್ (718), 3. ಮಿಚೆಲ್ ಸ್ಟಾರ್ಕ್ (701), 4. ಜಸ್‌ಪ್ರೀತ್ ಬುಮ್ರಾ (687), 5. ಕಾಗಿಸೊ ರಬಾಡ (685), 6. ಟ್ರೆಂಟ್ ಬೌಲ್ಟ್ (665), 7. ಹಸನ್ ಅಲಿ (663), 8. ಸುನೀಲ್ ನಾರಾಯಣ್ (662), 9. ರಶೀದ್ ಖಾನ್ (647), 10. ಅಕ್ಷರ್ ಪಟೇಲ್ (645).