Advertisement

ಕೊರಲೆಗೂ ಬಂತು ಬಂಪರ್‌ ಬೆಲೆ

12:27 PM Apr 25, 2019 | pallavi |

ಹುಬ್ಬಳ್ಳಿ: ಒಣ ಭೂಮಿಯಲ್ಲಿ ಬೆಳೆಯುವ, ಅತ್ಯಲ್ಪ ದರಕ್ಕೆ ಮಾರಾಟ ಮಾಡುವ ಸಿರಿಧಾನ್ಯವೆಂದೇ ಪರಿಗಣಿಸಲ್ಪಟ್ಟ ಕೊರಲೆಗೆ ಇದೀಗ ಬಂಪರ್‌ ಬೆಲೆ ಬಂದಿದೆ. ಕಡಿಮೆ ವೆಚ್ಚದಲ್ಲಿ ಬೆಳೆದ ಕೊರಲೆ ಉತ್ತಮ ಫ‌ಸಲು ಬಂದಿದ್ದು, ಕೈ ತುಂಬ ಹಣ ತಂದುಕೊಡುವ ಬೆಳೆಯಾಗಿರುವುದು ರೈತರ ಸಂತಸ ಹೆಚ್ಚುವಂತೆ ಮಾಡಿದೆ.

Advertisement

ಸಿರಿಧಾನ್ಯಗಳಲ್ಲಿ ಒಂದಾಗಿರುವ ಕೊರಲೆ ಬೆಳೆ ಸಿರಿಧಾನ್ಯಗಳಲ್ಲೇ ನಿರ್ಲಕ್ಷಿತ ಹಾಗೂ ಕಡಿಮೆ ಬಳಕೆಯದ್ದಾಗಿತ್ತು. ಕೊರಲೆಯಲ್ಲಿನ ಪೋಷಕಾಂಶಗಳ ಮಹತ್ವದ ಮೇಲೆ ನಾಸಾ ಸಂಶೋಧನೆ ನಡೆಸಿರುವುದು ಇದರ ಮಹತ್ವ ಹೆಚ್ಚುವಂತೆ ಮಾಡಿದೆ. ಕೊರಲೆ ಬರ ನಿರೋಧಕ ತಳಿಯಾಗಿದ್ದು, ಮರದ ನೆರಳಿನಲ್ಲಿಯೂ ಬೆಳೆಯುತ್ತದೆ. ಕೊರಲೆ ಬಿತ್ತನೆ ಹಾಗೂ ಕೊರಲೆಗೆ ಬೆಲೆಯೂ ಅತ್ಯಂತ ಕಡಿಮೆ ಇತ್ತು. ಒಂದು ಕ್ವಿಂಟಲ್ ಕೊರಲೆ 2000-3000 ರೂ.ಗೆ ಮಾರಾಟವಾದರೆ ಹೆಚ್ಚು ಎನ್ನುವಂತಿತ್ತು. ಇದೀಗ ಕೊರಲೆ ಕ್ವಿಂಟಲ್ಗೆ 7000-7,200 ರೂ. ವರೆಗೆ ಮಾರಾಟವಾಗುತ್ತಿರುವುದು ರೈತರ ಸಂತಸ ಹೆಚ್ಚಿಸಿದೆ.

90 ದಿನಗಳ ಬೆಳೆ ಇದಾಗಿದೆ. ಅತ್ಯುತ್ತಮ ಪೋಷಕಾಂಶದ ಆಹಾರಧಾನ್ಯದ ಜತೆಗೆ ಜಾನುವಾರುಗಳಿಗೆ ಮೇವು ನೀಡುತ್ತದೆ. ಒಂದು ಕೆಜಿಗೆ 70ರಿಂದ 72 ರೂ.ವರೆಗೆ ಕೊರಲೆ ಮಾರಾಟವಾದರೆ, ಕೊರಲೆ ಸಂಸ್ಕರಿಸಿದರೆ, ಒಂದು ಕೆಜಿ ಕೊರಲೆ ಅಕ್ಕಿ 250-300 ರೂ.ಗೆ ಮಾರಾಟವಾಗುತ್ತಿದೆ. ಹಣ ತರುವ ಬೆಳೆಗಳ ಪಟ್ಟಿಯಲ್ಲಿ ಕೊರಲೆ ಸ್ಥಾನವೇ ಪಡೆದಿರಲಿಲ್ಲ. ಇದೀಗ ಕೊರಲೆ ಉತ್ತಮ ಲಾಭದಾಯಕ ಬೆಳೆಯಾಗಿ ರೈತರನ್ನು ಕೈ ಹಿಡಿಯತೊಡಗಿದೆ. ಅಮೆರಿಕದಲ್ಲಿ ಪಕ್ಷಿಗಳಿಗೆ ಕೊರಲೆ ಬಳಸಲಾಗತ್ತದೆ. ಕೊರಲೆ ಮೇಲೆ ನಾಸಾ ಮಹತ್ವದ ಸಂಶೋಧನೆ ನಡೆಸಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಸಹಜ ಸಮೃದ್ಧಿ ಬಳಗ ಸಿರಿಧಾನ್ಯ ಮೇಳ ಹಾಗೂ ಕೊರಲೆ ಬೆಳೆ ಜಾಗೃತಿ ಕಾರ್ಯ ಮಾಡಿವೆ.

ಲಾಭ ಹೇಗೆ?: ಹಾವೇರಿ ಜಿಲ್ಲೆಯ ಹನುಮನಹಳ್ಳಿಯಲ್ಲಿ ಆನಂದಗೌಡ ಇನ್ನಿತರ ರೈತರು ಎಕರೆಗೆ 10 ಕ್ವಿಂಟಲ್ನಂತೆ ಕೊರಲೆ ಬೆಳೆದಿದ್ದು, ಆಂಧ್ರಪ್ರದೇಶದಿಂದ ಉತ್ತಮ ಬೇಡಿಕೆ ಬರತೊಡಗಿದೆ. ಒಂದು ಎಕರೆ ಕೊರಲೆ ಬೆಳೆಯಲು ನಾಲ್ಕು ಕೆಜಿ ಬೀಜ ಸೇರಿದಂತೆ ಬಿತ್ತನೆಯಿಂದ ಕೊಯ್ಲುವರೆಗೆ ಸರಾಸರಿ 5-6 ಸಾವಿರ ರೂ. ಗರಿಷ್ಠವೆಂದರೆ 8 ಸಾವಿರ ರೂ. ವೆಚ್ಚ ಬರುತ್ತದೆ. ಎಕರೆಗೆ 8-10 ಕ್ವಿಂಟಲ್ ಫ‌ಸಲು ಬರುತ್ತದೆ. 7000 ರೂ.ಗೆ ಕ್ವಿಂಟಲ್ನಂತೆ ಮಾರಾಟ ಮಾಡಿದರೂ 70 ಸಾವಿರ ರೂ. ಆದಾಯ, ವೆಚ್ಚ ತೆಗೆದರೆ 60 ಸಾವಿರ ರೂ. ಉಳಿಯುತ್ತದೆ. ಇದಲ್ಲದೆ 10-15 ಸಾವಿರ ರೂ.ಮೌಲ್ಯದ ಮೇವು ದೊರೆಯುತ್ತದೆ. ಇದೇ ಒಂದು ಎಕರೆಯಲ್ಲಿ ಬಿಟಿ ಹತ್ತಿ ಬಿತ್ತಿದರೆ ಒಟ್ಟಾರೆ 20 ಸಾವಿರ ರೂ.ವರೆಗೆ ವೆಚ್ಚ ಬರುತ್ತಿದ್ದು, ಎಕರೆಗೆ ಸರಾಸರಿ 7-8 ಕ್ವಿಂಟಲ್ ಹತ್ತಿ ಬರುತ್ತದೆ. ಒಂದು ಕ್ವಿಂಟಲ್ 4-5 ಸಾವಿರ ರೂ.ಗೆ ಮಾರಾಟವಾಗುತ್ತದೆ. ವೆಚ್ಚ ತೆಗೆದರೆ ರೈತನಿಗೆ 20 ಸಾವಿರ ರೂ. ಸಹ ಉಳಿಯದು, ಭೂಮಿ ಫ‌ಲವತ್ತತೆಯೂ ಹಾಳಾಗಲಿದೆ ಎಂಬುದು ಹನುಮನಳ್ಳಿಯ ಕೊರಲೆ ಬೆಳೆಗಾರ ಮುತ್ತುರಾಜ ರಾಮಜಿ ಅನಿಸಿಕೆ.

ಕೊರಲೆಯಲ್ಲಿ ಏನಿದೆ?

ಏಷ್ಯಾ ಹಾಗೂ ಆಫ್ರಿಕಾದ ವಿವಿಧ ದೇಶಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಭಾರತ, ಮಾಲಿ, ನೈಜೇರಿಯಾ ಇನ್ನಿತರ ದೇಶಗಳಲ್ಲಿ ಬೆಳೆಯುತ್ತಿದ್ದು, ಶೇ.97ರಷ್ಟು ಸಿರಿಧಾನ್ಯಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಬೆಳೆಯಲಾಗುತ್ತದೆ. ಸಿರಿಧಾನ್ಯಗಳಲ್ಲಿ ಕೊರಲೆ (ಬ್ರೌನ್‌ ಟಾಪ್‌ ಮಿಲೆಟ್) ಕೂಡ ಒಂದಾಗಿದೆ. 2016ರಲ್ಲಿ ಜಾಗತಿಕವಾಗಿ ಒಟ್ಟು 28.4 ಮಿಲಿಯನ್‌ ಟನ್‌ನಷ್ಟು ವಿವಿಧ ಸಿರಿಧಾನ್ಯ ಬೆಳೆಯಲಾಗಿತ್ತು. ಹಾವೇರಿ, ಗದಗ, ಸಿರಾ, ಪಾವಡಗಡ, ಮಧುಗಿರಿ, ಮಂಡ್ಯ, ಆಂಧ್ರದ ಪೆನುಗೊಂಡ, ಹಿಂದುಪುರ, ರಾಯಲಸೀಮಾ, ತಮಿಳುನಾಡು ಇನ್ನಿತರ ಕಡೆಗಳಲ್ಲಿ ಕೊರಲೆ ಬೆಳೆಯಲಾಗುತ್ತದೆ. ಕೊರಲೆಯಲ್ಲಿ ಶೆ.11.2ರಷ್ಟು ಪ್ರೋಟಿನ್‌, ಶೇ.12.5ರಷ್ಟು ಫೈಬರ್‌, ಶೇ.4.2ರಷ್ಟು ಮಿನರಲ್ಸ್, ಶೇ.0.65ರಷ್ಟು ಐರನ್‌, ಶೇ.0.01ರಷ್ಟು ಕ್ಯಾಲ್ಸಿಯಂ ಇರುತ್ತದೆ. ಜೀರ್ಣಕ್ರಿಯೆ, ನರದೌರ್ಬಲ್ಯ ನಿವಾರಣೆಗೆ ಸಹಕಾರಿ.

ಕೊರಲೆ ಭವಿಷ್ಯದ ಬೆಳೆಯಾಗುವ ಲಕ್ಷಣ ಹೊಂದಿದೆ. ಹೆಚ್ಚುತ್ತಿರುವ ಬರ, ಮಳೆ ಕೊರತೆಯಿಂದ ರೈತರು ನಿಧಾನಕ್ಕೆ ಸಿರಿಧಾನ್ಯಗಳ ಕಡೆ ವಾಲುತ್ತಿದ್ದಾರೆ. ರಾಜ್ಯ ಸರ್ಕಾರ ಸಿರಿಧಾನ್ಯ ಮೇಳ ಇನ್ನಿತರ ಉತ್ತೇಜನ ಕ್ರಮ ಕೈಗೊಂಡಿದೆ. ಅದೇ ರೀತಿ ಆಂಧ್ರ ಸರ್ಕಾರ ಮಿಲೆಟ್ ಮಿಶನ್‌ ಮೂಲಕ ಮಹತ್ವದ ಹೆಜ್ಜೆ ಇರಿಸಿದೆ. ದಖVನ್‌ ಒಣ ಪ್ರದೇಶವೆಂದೇ ಪರಿಗಣಿಸಲ್ಪಡುವ ಕಲಬುರಗಿ, ರಾಯಚೂರು, ಕೊಪ್ಪಳ ಅಲ್ಲದೆ ಗದಗ, ಧಾರವಾಡದ ಕೆಲ ಭಾಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕೊರಲೆ ಬೆಳೆಯಲು ಉತ್ತಮ ಅವಕಾಶವಿದೆ.
•ಕೃಷ್ಣಪ್ರಸಾದ, ಸಹಜ ಸಮೃದ್ಧಿ ಬಳಗ ಸಂಸ್ಥಾಪಕ

Advertisement

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳದ ಇಂದಿನ ಸಂದರ್ಭದಲ್ಲಿ ಸಿರಿಧಾನ್ಯ ಬೆಳೆಗೆ ಮಹತ್ವ ಬರತೊಡಗಿದೆ. ಹಣದ ಬೆಳೆಯಲ್ಲ ಎಂದೇ ಪರಿಗಣಿಸಲ್ಪಟ್ಟ ಕೊರಲೆ ಇದೀಗ ಹಣ ತಂದು ಕೊಡುವ ಬೆಳೆಯಾಗಿ ಮಾರ್ಪಟ್ಟಿದೆ.
•ಆನಂದ ತೀರ್ಥಪ್ಯಾಟಿ, ಸುಸ್ಥಿರ ಕೃಷಿ ಚಳವಳಿಕಾರ

Advertisement

Udayavani is now on Telegram. Click here to join our channel and stay updated with the latest news.

Next