Advertisement

ಕಾಫಿನಾಡಿಗೆ ಸಿಕ್ಕಿತು ಬಂಪರ್‌ ಗಿಫ್ಟ್‌ !

08:35 AM Feb 09, 2019 | Team Udayavani |

ಚಿಕ್ಕಮಗಳೂರು: ಈ ಬಾರಿಯ ರಾಜ್ಯದ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ದೊರಕಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಹಲವು ವರ್ಷಗಳಿಂದ ನನಸಾಗದಿದ್ದ ಕೆಲವು ಬೇಡಿಕೆಗಳು ಸಹ ಈಡೇರಿವೆ.

Advertisement

ನಗರದ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು, ಕಳಸವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಿರುವುದು, ಕಡೂರು ತಾಲೂಕಿನ 19 ಕೆರೆಗಳಿಗೆ ಹೆಬ್ಬೆ ಜಲಪಾತದಿಂದ ನೀರು ತುಂಬಿಸುವುದು ಈ ಬಜೆಟ್‌ನಲ್ಲಿ ಜಿಲ್ಲೆಗೆ ದಕ್ಕಿದ ಪ್ರಮುಖ ಯೋಜನೆಗಳಾಗಿವೆ.

ನಗರದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬೇಡಿಕೆ ಹಲವು ವರ್ಷಗಳಿಂದ ಈಡೇರಿರಲಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಲು 50 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ.

ಮೂಡಿಗೆರೆ ತಾಲೂಕಿನ ಕಳಸ ತಾಲೂಕು ಕೇಂದ್ರದಿಂದ ಸಾಕಷ್ಟು ದೂರದಲ್ಲಿರುವುದರಿಂದ ಇದನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಹಲವು ದಶಕಗಳಿಂದಲೂ ಇತ್ತು. ಇದಕ್ಕಾಗಿ ಹಲವು ಹೋರಾಟಗಳೂ ನಡೆದಿದ್ದವು. ಈ ಹೋರಾಟದಲ್ಲಿಯೂ ಪಾಲ್ಗೊಂಡಿದ್ದ ಎಚ್.ಡಿ. ಕುಮಾರಸ್ವಾಮಿ, ಚುನಾವಣಾ ಪ್ರಚಾರಕ್ಕೆ ಬಂದಾಗ ತಮ್ಮ ಸರ್ಕಾರ ಆಡಳಿತಕ್ಕೆ ಬಂದಲ್ಲಿ ಕಳಸವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಿದ್ದಾರೆ.

ಸದಾಕಾಲ ಬರಗಾಲಕ್ಕೆ ತುತ್ತಾಗುವ ಕಡೂರು ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆಗೂ ಈ ಬಜೆಟ್‌ನಲ್ಲಿ ಮಂಜೂರಾತಿ ದೊರಕಿದ್ದು, ಹೆಬ್ಬೆ ಜಲಪಾತದಿಂದ ಮದಗದ ಕೆರೆ ಹಾಗೂ ಅಯ್ಯನಕೆರೆಗೆ ನೀರು ಹರಿಸಿ ಅಲ್ಲಿಂದ ತಾಲೂಕಿನ ವಿವಿಧ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇವುಗಳೊಂದಿಗೆ ಜಿಲ್ಲೆಗೆ ಬಾಲಕಿಯರ ಬಾಲ ಮಂದಿರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿ ಮಹಿಳೆಯರ ಕ್ರೀಡಾ ವಸತಿ ನಿಲಯ ಹಾಗೂ ಮಹಿಳೆಯರ ಸ್ತನ ರೇಖನ ಘಟಕ ಮಂಜೂರಾಗಿದೆ.

Advertisement

ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ನುಗ್ಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸುಮಾರು 520 ಕಿ.ಮೀ. ಗೆ ರೈಲ್ವೆ ಹಳಿ ಬೇಲಿ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ, ಈ ಪೈಕಿ ಕಾಡಾನೆ ದಾಳಿಯಿಂದ ನಿರಂತರ ತೊಂದರೆಗೆ ಈಡಾಗುತ್ತಿರುವ ಮೂಡಿಗೆರೆ ತಾಲೂಕಿಗೂ ಸಮಪಾಲು ದೊರೆಯಬಹುದು ಎಂಬ ನಿರೀಕ್ಷೆ ಜನರದ್ದು.

ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಯ ಹೆಸರೇ ಕೇಳಿರಲಿಲ್ಲ. ಈ ಬಾರಿ ಜಿಲ್ಲೆಗೆ ಹಲವು ಕೊಡುಗೆ ದೊರೆತಿದ್ದರೂ ಕೆಲವೊಂದು ಪ್ರಮುಖ ಬೇಡಿಕೆಗಳು ಈಗಲೂ ಹಾಗೆಯೇ ಉಳಿದಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕುಗಳ ಬಹುಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಇತ್ತಾದರೂ ಅವುಗಳಿಗೆ ಮಂಜೂರಾತಿ ದೊರೆತಿಲ್ಲ. ಕುಂಟುತ್ತಾ ಸಾಗಿರುವ ಕರಗಡ ಕುಡಿಯುವ ನೀರಿನ ಯೋಜನೆಗೆ ಅನುದಾನ ನೀಡಿಲ್ಲ. ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ ಈಗಲೂ ಬೇಡಿಕೆಯಾಗಿಯೇ ಮುಂದುವರೆದಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

••ಜಿಲ್ಲೆಯ ಬಹುಗ್ರಾಮ ಕುಡಿವ ನೀರಿನ ಯೋಜನೆ

••ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ

••ಕರಗಡ ಯೋಜನೆಗೂ ಮೀಸಲಿಟ್ಟಿಲ್ಲ ಅನುದಾನ

ಈಡೇರಿದ ಬೇಡಿಕೆಗಳು
ಮಹಿಳೆಯರ ಕ್ರೀಡಾ ವಸತಿ ನಿಲಯ ಸ್ಥಾಪನೆ
ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು 50 ಕೋಟಿ ರೂ. ಅನುದಾನ
ಹೆಬ್ಬೆ ಯೋಜನೆಗೆ 100 ಕೋಟಿ ರೂ. ಅನುದಾನ
ಜಿಲ್ಲೆಯಲ್ಲಿ ಬಾಲಕಿಯರಿಗಾಗಿ ಬಾಲಮಂದಿರ ಸ್ಥಾಪನೆ

ಈಡೇರದ ಬೇಡಿಕೆಗಳು
ಜಿಲ್ಲೆಯ ಬಹುಗ್ರಾಮ ಕುಡಿವ ನೀರಿನ ಯೋಜನೆ
ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
ಕರಗಡ ಯೋಜನೆಗೂ ಮೀಸಲಿಟ್ಟಿಲ್ಲ ಅನುದಾನ

ಲೋಕಾ ಚುನಾವಣೆಗಾಗಿ ಹೆಬ್ಬೆ ಯೋಜನೆಗೆ ಅನುದಾನ: ರವಿ
ಚಿಕ್ಕಮಗಳೂರು:
ಹೆಬ್ಬೆ ಹಳ್ಳದಿಂದ ಕಡೂರು ತಾಲೂಕಿನ 19 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕು. ಅದು ಸಿಗುವುದು ಕಷ್ಟ. ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭೆಗೆ ಸೇರುವುದರಿಂದ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಿಸಿದಂತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅಡೆಚಣೆಯನ್ನು ಮನಗಂಡು ನಾವು ಗೋಂದಿ ಅಣೆಕಟ್ಟೆಯಿಂದ 960 ಕೋಟಿ ರೂ. ವೆಚ್ಚದಲ್ಲಿ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನ ಬಯಲುಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲು ಮನವಿ ಮಾಡಿದ್ದೆವು ಎಂದರು.

ಇನ್ನು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಕೇವಲ 50 ಕೋಟಿ ರೂ.ಗಳನ್ನು ಸರ್ಕಾರ ಈ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ನಾವು ಕೇಳಿದ್ದು 400 ಕೋಟಿ ರೂ.ಗಳನ್ನು. ಬಜೆಟ್‌ನಲ್ಲಿ ಇದು ಮೊದಲ ಹಂತದ ಅನುದಾನ ಎಂದೂ ಸಹ ಹೇಳಿಲ್ಲ. 50 ಕೋಟಿ ವ್ಯಯಿಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ ಎಂದರು.

ಬಯಲು ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 350 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಒಂದು ರೀತಿ ಜನರ ಬೇಡಿಕೆಗೆ ಜಾಣ ಕಿವುಡನ್ನು ಮುಖ್ಯಮಂತ್ರಿಗಳು ಪ್ರದರ್ಶಿಸಿದ್ದಾರೆ. ಕಳಸ ಹೋಬಳಿಯನ್ನು ತಾಲೂಕು ಕೇಂದ್ರವಾಗಿಸುವ ಘೋಷಣೆ ಸ್ವಾಗತಾರ್ಹ. ಉಳಿದಂತೆ ಕೇಂದ್ರ ಸರ್ಕಾರದ ಮಾತೃವಂದನ ಕಾರ್ಯಕ್ರಮವನ್ನೇ ಮಾತೃಶ್ರೀ ಯೋಜನೆ ಎಂದು ಸರ್ಕಾರ ಮಾಡಿದೆ. ಬರಪರಿಸ್ಥಿತಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ದೂರದೃಷ್ಟಿ ಇಲ್ಲ ಎಂದು ತಿಳಿಸಿದ್ದಾರೆ.

ಇದು ಒಂದು ರೀತಿಯಲ್ಲಿ ಚುನಾವಣಾ ಪ್ರಣಾಳಿಕೆಯಂತಿದೆ. ಹಣ ಎಲ್ಲಿದೆ ಎಂಬುದನ್ನು ತೋರಿಸದೆ ಮುಖ್ಯಮಂತ್ರಿಗಳು 2.34 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅವರು ಬಜೆಟ್ ಮಂಡಿಸಿರುವುದನ್ನು ನೋಡಿದರೆ ಅವರಿಗೇ ಸರ್ಕಾರ ಉಳಿಯುತ್ತದೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎನಿಸುತ್ತದೆ. ಕಳಸವನ್ನು ಪ್ರತ್ಯೇಕ ತಾಲೂಕು ಕೇಂದ್ರವಾಗಿಸಿರುವುದು ಸ್ವಾಗತಾರ್ಹ ವಿಚಾರವಾದರೂ, ಹಲವು ಬೇಡಿಕೆಗಳು ಹಾಗೆಯೇ ಉಳಿದಿರುವುದು ನಿರಾಸೆ ಮೂಡಿಸಿದೆ
•ಡಿ.ಎನ್‌.ಜೀವರಾಜ್‌, ಜಿಲ್ಲಾ ಬಿಜೆಪಿ ಅಧ್ಯಕ್ಷರು

ಪ್ರಸ್ತುತ ಸಾಲಿನ ಬಜೆಟ್ ಯಾರ ಮೇಲೂ ಹೊರೆ ಹಾಕದೆ, ಯಾರನ್ನೂ ನಿರಾಸೆಗೊಳಿಸದೆ, ಎಲ್ಲ ಕ್ಷೇತ್ರ, ಸಮುದಾಯಗಳನ್ನು ಸಂತೈಸುವ ಪ್ರಯತ್ನ ಮಾಡಲಾಗಿದೆ. ಕಳಸ ತಾಲೂಕಾಗಿ ಘೋಷಿಸಿರುವುದು, ಜಿಲ್ಲಾಸ್ಪತ್ರೆ ಮೇಲ್ದರ್ಜೆ ಗೇರಿಸುವುದು ಸ್ವಾಗತಾರ್ಹ ಸಂಗತಿ. ಕಾರ್ಮಿಕ ಸೌರಭ ಯೋಜನೆ ಜಾರಿ ಮಾಡಿ ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ಅಂಗನವಾಗಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಿಸಿದ್ದಾರೆ. ಆದರೆ ಕೇವಲ 500 ಮತ್ತು 250 ರೂ. ಹೆಚ್ಚಳ ಮಾಡಿರುವುದು ಸರಿಯಲ್ಲ
•ಬಿ.ಅಮ್ಜದ್‌, ಸಿಪಿಐ ಮುಖಂಡರು

ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವ ಮೂಲಕ ಸಮತೋಲಿತ ಬಜೆಟ್ ಮಂಡಿಸಿದ್ದಾರೆ. ಕಳಸವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವ ಮೂಲಕ ಕಳೆದ ಹಲವು ವರ್ಷಗಳಿಂದ ಬಾಕಿ ಇದ್ದ ಬೇಡಿಕೆ ಈಡೇರಿಸಿದ್ದಾರೆ. ನಗರದ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಅನುದಾನ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಅನುದಾನವಿಡುವ ನಿರೀಕ್ಷೆ ಇತ್ತು. ಬಹುಶಃ ಮುಂದೆ ಪುನಃ ಹೆಚ್ಚುವರಿ ಅನುದಾನ ಕೊಡಬಹುದು. ಬಾಲಕಿಯರ ಬಾಲಮಂದಿರ ಮಂಜೂರಾತಿ ಸ್ವಾಗತಾರ್ಹ ವಿಚಾರ‌
•ಡಾ| ಡಿ.ಎಲ್‌.ವಿಜಯ್‌ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು.

ಈ ಸಲದ ಬಜೆಟ್‌ನಲ್ಲಿ ಅತಿ ಹೆಚ್ಚು ನಿರೀಕ್ಷೆ ಹೊಂದಿದ್ದ ಚಿಕ್ಕಮಗಳೂರು ಜನತೆಗೆ ಈ ಸಲವೂ ನಿರಾಶೆ ಮೂಡಿದೆ. ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದ್ದ ಸರ್ಕಾರಿ ಮೆಡಿಕಲ್‌ ಕಾಲೇಜ್‌ ಮತ್ತು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜ್‌, ಹಾಲಿನಡೈರಿ, ಹಾಗೂ ಸಣ್ಣ ಕೈಗಾರಿಕೆ ಬೇಡಿಕೆ ಈಡೇರಿಲ್ಲ. ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವುದು, ಬಾಲಕಿಯರ ಬಾಲಮಂದಿರ, ಹಾಗೂ ಸ್ತನ ಕ್ಯಾನ್ಸರ್‌ ತಪಾಸಣಾ ಘಟಕ, ಕಳಸ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಆದರೆ ಬರೀ ಘೋಷಣೆ ಮಾಡುವುದೇ ಸಾಧನೆಯಲ್ಲ. ಕಳೆದ ಬಾರಿ ತಾಲೂಕು ಕೇಂದ್ರ ಘೋಷಣೆ ಮಾಡಿದ ಅಜ್ಜಂಪುರಕ್ಕೆ ಇದುವರೆಗೆ ಯಾವುದೇ ಸೂಕ್ತ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಈ ಬಾರಿ ಯೋಜನೆ ವಿಫಲವಾಗಲು ಬಿಡಬಾರದು
•ಅನಿಲ್‌ ಆನಂದ್‌, ಸಾರ್ವಜನಿಕರು

ಬಜೆಟ್‌ನಲ್ಲಿ ಜಿಲ್ಲೆಗೆ ಕೆಲವೊಂದು ಕೊಡುಗೆ ಗಳನ್ನು ನೀಡಲಾ ಗಿದೆ. ಆದರೆ ಅವುಗಳು ಕೇವಲ ಘೋಷಣೆಯಾಗಿಯೇ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.
•ಗಿರೀಶ್‌, ಸಾರ್ವಜನಿಕರು.

ಎಸ್‌.ಕೆ.ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next