Advertisement

ಮೀನುಗಾರರಿಗೆ ಬಂಪರ್‌ ಗಳಿಕೆ ನೀಡುವ ಗಿಫ್ಟ್ ಫಿಶ್‌

11:25 AM Nov 19, 2017 | |

ಬೆಂಗಳೂರು: ರಾಜ್ಯದ ಮೀನುಗಾರರಿಗೆ ಶೀಘ್ರದಲ್ಲೇ ಹೆಬ್ಟಾಳದ ಒಳನಾಡು ಮೀನುಗಾರಿಕೆ ಘಟಕ‌ “ಗಿಫ್ಟ್’ ನೀಡಲಿದೆ. ಈ “ಗಿಫ್ಟ್’ನಿಂದ ಮೀನುಗಾರರ ಆದಾಯ ಕನಿಷ್ಠ ಮೂರುಪಟ್ಟು ಹೆಚ್ಚಳವಾಗಲಿದೆ!

Advertisement

ಹೌದು, ಹೆಬ್ಟಾಳ ಮುಖ್ಯ ಸಂಶೋಧನಾ ಕೇಂದ್ರದ ಒಳನಾಡು ಮೀನುಗಾರಿಕೆ ಘಟಕವು ರಾಜ್ಯದಲ್ಲಿ ಮೊಟ್ಟಮೊದಲಬಾರಿಗೆ “ತಳೀಯವಾಗಿ ಸುಧಾರಿಸಿ ಬೆಳೆಸಿದ ತಿಲಾಪಿಯ’ (ಜೆನೆಟಿಕಲಿ ಇಂಪ್ರೂವ್‌ ಫಾಮ್ಡ್ ತಿಲಾಪಿಯಾ/ ಟೈಗರ್‌ ಜಿಲೇಬಿ) ಉತ್ಪಾದನಾ ಉಪಕೇಂದ್ರ ಆರಂಭಿಸಲು ನಿರ್ಧರಿಸಿದೆ. ಈ ಸಂಬಂಧ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅನುಮೋದನೆಯೂ ದೊರಕಿದ್ದು, ಮೂರ್‍ನಾಲ್ಕು ತಿಂಗಳಲ್ಲಿ ಈ ಮೀನುಗಳ ಉತ್ಪಾದನೆ ಶುರುವಾಗಲಿದೆ.

ಹೆಸರೇ ಸೂಚಿಸುವಂತೆ ಇದು ಮೀನುಗಾರರ ಪಾಲಿಗೆ “ಗಿಫ್ಟ್’ ಆಗಲಿದೆ. ಯಾಕೆಂದರೆ, ಪ್ರಸ್ತುತ ಚದರ ಮೀಟರ್‌ಗೊಂದು ಮೀನು ಮರಿಗಳನ್ನು ನೀರಲ್ಲಿ ಬಿಡಲಾಗುತ್ತಿದೆ. ತಿಲಾಪಿಯ ಜಾತಿಯಾದರೆ, ಇಷ್ಟೇ ಜಾಗದಲ್ಲಿ ಐದು ಮರಿಗಳನ್ನು ಬಿಡಬಹುದು. ಅಂದರೆ, ಮೀನುಮರಿಗಳ ಸಂಖ್ಯೆ ಐದುಪಟ್ಟು ಆಗುತ್ತದೆ. ಜತೆಗೆ ಮೂರ್‍ನಾಲ್ಕು ತಿಂಗಳಲ್ಲೇ ಇಳುವರಿ ಬರುತ್ತದೆ.

ಇವುಗಳ ದರ ಕೆಜಿಗೆ ಕನಿಷ್ಠ 100-120 ರೂ. ತೆಗೆದುಕೊಂಡರೂ ಆದಾಯ ಮೂರುಪಟ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಬರುವ ಏಪ್ರಿಲ್‌ ಹೊತ್ತಿಗೆ ರೈತರ ಹೊಂಡಗಳಲ್ಲಿ ಈ ಮೀನುಗಳ ಸಾಕಾಣಿಕೆ ಶುರುವಾಗಲಿದೆ ಎಂದು ಒಳನಾಡು ಮೀನುಗಾರಿಕೆ ಘಟಕದ ಪ್ರಾಧ್ಯಾಪಕ ಡಾ.ಬಿ.ವಿ. ಕೃಷ್ಣಮೂರ್ತಿ “ಉದಯವಾಣಿ’ಗೆ ಮಾಹಿತಿ ನೀಡಿದರು. 

ಆದಾಯ ಮೂರುಪಟ್ಟು ಹೆಚ್ಚಲಿದೆ?: ಸದ್ಯ ರಾಜ್ಯದಲ್ಲಿ ಗೆಂಡೆ ಸೇರಿದಂತೆ ಹಲವು ಪ್ರಕಾರದ ಮೀನುಗಳ ಸಾಕಾಣಿಕೆ ಮಾಡಲಾಗುತ್ತಿದೆ. ಅಲ್ಲಲ್ಲಿ ತಿಲಾಪಿಯ ಮೀನುಗಳ ಸಾಕಾಣಿಕೆ ಕಾಣಬಹುದು. ಆದರೆ, ಅವುಗಳನ್ನು ಆಂಧ್ರಪ್ರದೇಶದಿಂದ ತರಲಾಗುತ್ತಿದೆ. ಇದಕ್ಕಾಗಿ ಮೀನುಗಾರಿಕೆ ಇಲಾಖೆ ಅನುಮತಿ ಒಳಗೊಂಡಂತೆ ಹತ್ತಾರು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಹಾಗಾಗಿ, ಈ ತಲೆನೋವು ಬೇಡ ಎಂದು ಸಾಕಾಣಿಕೆಗೆ ಹಿಂದೇಟು ಹಾಕುತ್ತಾರೆ.

Advertisement

ಈಗ ರಾಜ್ಯದಲ್ಲೇ ಉತ್ಪಾದನೆ ಮಾಡಬಹುದು. 200 ಚದರ ಮೀಟರ್‌ ವ್ಯಾಪ್ತಿಯ ಒಂದು ಹೊಂಡದಲ್ಲಿ ಈಗ 200ರಿಂದ 300 ಮೀನು ಮರಿಗಳನ್ನು ಬಿಡಬಹುದು. ಅದೇ ಹೊಂಡದಲ್ಲಿ ತಿಲಾಪಿಯ ಜಾತಿ ಸಾವಿರ ಮರಿಗಳನ್ನು ಬಿಡಬಹುದು. ಅದೇನೇ ಇರಲಿ, ರೈತರ ಆದಾಯ ಕನಿಷ್ಠ ಮೂರುಪಟ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ ಎಂದು ಡಾ.ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಅನುಕೂಲ ಏನು?: ಶುಷ್ಕ ಪ್ರದೇಶ, ಅಲ್ಪಕಾಲಿಕ, ಆಳವಿಲ್ಲದ ಮತ್ತು ಕಡಿಮೆ ಗುಣಮಟ್ಟದ ಜಲಪ್ರದೇಶಗಳಾದ ಕೃಷಿಹೊಂಡ, ಗೋಕಟ್ಟೆ ಮತ್ತಿತರ ಕಡೆಗಳಲ್ಲಿ ಬೆಳೆಸಬಹುದು. ಅಕ್ವಾಫೋನಿಕ್ಸ್‌ಗೆ ಹೇಳಿಮಾಡಿಸಿದ ಮೀನು. ಬಹುಬೇಗ ಪ್ರಬುದ್ಧಾವಸ್ಥೆಗೆ ತಲುಪಿ, ಹೆಚ್ಚಿನ ಸಂತಾನ ಶಕ್ತಿಯಿಂದ ವರ್ಷದಲ್ಲಿ ಹಲವುಬಾರಿ ಸಂತಾನೋತ್ಪತ್ತಿ ಮಾಡುತ್ತವೆ. ಅಷ್ಟೇ ಅಲ್ಲ, ಇದರ ಮರಿಗಳು ಬೇಗ ಆಹಾರ ಸೇವನೆ ಆರಂಭಿಸುತ್ತವೆ.

ಇದರ ಬಿಳಿಮಾಂಸವು ಕಡಿಮೆ ಕೊಬ್ಬು ಹೊಂದಿದ್ದು, ಫಿಲೆಟ್‌ಗಳನ್ನು ಮಾಡಲು ಸೂಕ್ತವಾಗಿರುವುದರಿಂದ ಮೌಲ್ಯವರ್ಧನೆಗೆ ಉತ್ತಮ. ಸ್ಥಳೀಯವಾಗಿ ಮಾತ್ರವಲ್ಲ; ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಇದೆ. ಆದರೆ, ಈ ತಿಲಾಪಿಯ ಜತೆ ಇನ್ನಿತರ ಮೀನುಗಳನ್ನು ಬೆಳೆಯಲು ಅವಕಾಶ ಇಲ್ಲ. ಯಾಕೆಂದರೆ, ಈ ಮೀನುಗಳು ಇತರ ಜಾತಿಯ ಮರಿಗಳನ್ನು ತಿಂದುಹಾಕುತ್ತದೆ ಎಂದು ಡಾ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next