Advertisement

ಬಾಗಲಕೋಟೆ ಜಿಲ್ಲೆಗೆ ಬಂಪರ್‌

11:19 AM Oct 13, 2019 | Team Udayavani |

ಬಾಗಲಕೋಟೆ: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಮುಳುಗಡೆ ಜಿಲ್ಲೆ ಬಾಗಲಕೋಟೆ ನಾಯಕರಿಗೆ ಮಹತ್ವದ ಸ್ಥಾನಗಳು ಲಭಿಸಿವೆ. ರಾಜ್ಯದ ಉಪ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಸ್ಥಾನಗಳೂ ಬಾಗಲಕೋಟೆಗೆ ಲಭಿಸಿದ್ದು, ಜಿಲ್ಲೆ ರಾಜಕೀಯ ವಲಯದಲ್ಲಿ ಮತ್ತಷ್ಟು ಗಮನ ಸೆಳೆಯುವಂತಾಗಿದೆ.

Advertisement

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡರಲ್ಲೂ ಜಿಲ್ಲೆಗೆ ಅಗ್ರ ಸ್ಥಾನ ದೊರೆತಿವೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಸತತ ನಾಲ್ಕು ಬಾರಿ ಗೆದ್ದಿರುವ ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್‌.ಆರ್‌. ಪಾಟೀಲ, 2ನೇ ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅವರು ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಪರಿಷತ್‌ನ ಸಭಾಧ್ಯಕ್ಷ ಸ್ಥಾನ ದೊರೆಯುತ್ತದೆಂಬ ಆಶಾಭಾವನೆ ಅವರ ಬೆಂಬಲಿಗರಲ್ಲಿತ್ತು. ತಡವಾದರೂ ವಿರೋಧ ಪಕ್ಷದ ನಾಯಕ ಸ್ಥಾನ ಪುನಃ ಅವರಿಗೇ ಒಲಿದಿದ್ದು, ಅವರ ಬೆಂಬಲಿಗರಲ್ಲಿ ಹರ್ಷ ತಂದಿದೆ.

ಇತಿಹಾಸದಲ್ಲೇ ಮೊದಲು: ಸರ್ಕಾರದ ಮುಖ್ಯಮಂತ್ರಿಗಳಿಗೆ ಇರುವಷ್ಟೇ ಗೌರವ, ಸ್ಥಾನಮಾನ ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೂ ಇದೆ. ಈ ಸ್ಥಾನ ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒಲಿದಿದೆ. ಆ ಮೂಲಕ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಸ್ಥಾನಗಳೆರಡೂ ಈ ಬಾರಿ ಒಟ್ಟಿಗೆ ಜಿಲ್ಲೆಯ ನಾಯಕರಿಗೇ ಒಲಿದಿರುವುದು ವಿಶೇಷ.

ಜಿಲ್ಲೆಯ ರಾಜಕೀಯ ಇತಿಹಾಸ ಮೆಲುಕು ಹಾಕಿದರೆ ಎಸ್‌. ನಿಜಲಿಂಗಪ್ಪ, ದಿ| ವೀರೇಂದ್ರ ಪಾಟೀಲ, ಪ್ರಸ್ತುತ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದರೆ, ದಿ. ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ, ರಾಜಕೀಯ ನೇಪಥ್ಯಕ್ಕೆ ಸರಿಸಿದ ಖ್ಯಾತಿಯೂ ಜಿಲ್ಲೆಗಿದೆ. ಬಿ.ಡಿ. ಜತ್ತಿ, ಎಸ್‌.ಆರ್‌. ಕಂಠಿ ಅವರಂತಹ ಧೀಮಂತ ನಾಯಕರನ್ನು ರಾಜ್ಯ-ರಾಷ್ಟ್ರದ ರಾಜಕಾರಣಕ್ಕೆ ನೀಡಿದ ಕೊಡುಗೆಯೂ ಜಿಲ್ಲೆಗಿದೆ.

ಡಿಸಿಎಂ ಹುದ್ದೆಯೂ ಜಿಲ್ಲೆಗೆ: ಜಿಲ್ಲೆಯ ಹಲವು ರಾಜಕೀಯ ನಾಯಕರು ಸಚಿವರು, ಮುಖ್ಯಮಂತ್ರಿಗಳಾಗಿದ್ದಾರೆ. ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಸ್ಥಾನವೂ ಜಿಲ್ಲೆಗೆ ಲಭಿಸಿದೆ. ಅದರಲ್ಲೂ ದಲಿತ ನಾಯಕರಾಗಿರುವ ಗೋವಿಂದ ಕಾರಜೋಳರಿಗೆ ಈ ಸ್ಥಾನ ದೊರೆತಿದ್ದು, ಲೋಕೋಪಯೋಗಿ, ಸಮಾಜ ಕಲ್ಯಾಣದಂತಹ ಪ್ರಮುಖ ಹುದ್ದೆಗಳನ್ನೂ ಅವರಿಗೇ ನೀಡಲಾಗಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಬಾಗಲಕೋಟೆ ಜಿಲ್ಲೆ ಗಮನ ಸೆಳೆಯುತ್ತಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ಪ್ರೇರಕವಾಗಲಿ ಎಂಬುದು ಹಲವರ ಒತ್ತಾಸೆ ಕೂಡ.

Advertisement

ಸಿದ್ದರಾಮಯ್ಯ ರಾಜ್ಯದ ಜಾತ್ಯತೀತ ನಾಯಕರು. ಎಲ್ಲ ವರ್ಗದ ಜನರೂ ಅವರನ್ನು ಗೌರವಿಸುವ ಜತೆಗೆ ಪ್ರೀತಿಸುತ್ತಾರೆ. ಇಂತಹ ನಾಯಕರು ನಮ್ಮ ಬಾದಾಮಿ ಕ್ಷೇತ್ರದ ಶಾಸಕರಾಗಿರುವುದು ನಮಗೆಲ್ಲ ಹೆಮ್ಮೆ. ಇದೀಗ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದು, ಪಕ್ಷಕ್ಕೆ ಶಕ್ತಿ ತುಂಬುವ ಜತೆಗೆ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನತೆಗೆ ತಲುಪಿಸುವಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಾರೆ. ಪ್ರವಾಹ ಕುರಿತು ಅವರು ಸದನದಲ್ಲಿ ಗಮನ ಸೆಳೆದ ಪರಿಯೇ ಇದಕ್ಕೆ ಸಾಕ್ಷಿ. ಹೊಳೆಬಸು ಷ. ಶೆಟ್ಟರ, ಕಾಂಗ್ರೆಸ್‌ ಮುಖಂಡ, ಗುಳೇದಗುಡ್ಡ.

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next