Advertisement

ಬಾದಾಮಿ-ಜಮಖಂಡಿಗೆ ಬಂಪರ್‌; ಉಳಿದ ಕ್ಷೇತ್ರಕ್ಕೆ?

09:38 AM Jul 01, 2019 | Suhan S |

ಬಾಗಲಕೋಟೆ: ರಾಜ್ಯದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಒಂದು ವರ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ಹರಿದು ಬಂದಿದೆ. ಬಾದಾಮಿ, ಜಮಖಂಡಿ ಹೊರತುಪಡಿಸಿದರೆ, ಉಳಿದ ಕ್ಷೇತ್ರಕ್ಕೆ ನಿರೀಕ್ಷಿತ ಅನುದಾನ ಬಂದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

Advertisement

ನಿಜ, ಬಾದಾಮಿ ಕ್ಷೇತ್ರಕ್ಕೆ ಈ ವರೆಗೆ 965 ಕೋಟಿ ಅನುದಾನ ಬಂದಿದೆ. ಬಾದಾಮಿ ಕ್ಷೇತ್ರದಲ್ಲಿ 116 ಗ್ರಾಮಗಳು, ಮೂರು ಪಟ್ಟಣಗಳಿದ್ದು, ಯಾವ ಪಟ್ಟಣ, ಹಳ್ಳಿಗೆ ಎಷ್ಟು ಅನುದಾನ ತರಲಾಗಿದೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಇದು ಉಳಿದ ಕ್ಷೇತ್ರಕ್ಕೆ ಹೋಲಿಸಿದರೆ, ಒಂದು ವರ್ಷದಲ್ಲಿ ಜಿಲ್ಲೆಗೆ ಬಂದ ಅನುದಾನದಲ್ಲಿ ಮೊದಲ ಸ್ಥಾನದಲ್ಲಿರುವ ಕ್ಷೇತ್ರ ಎಂಬ ಖ್ಯಾತಿಗೂ ಬಾದಾಮಿ ಒಳಗಾಗಿದೆ.

ಸಮಗ್ರತೆಗೆ ಆದ್ಯತೆ: ಬಾದಾಮಿ, ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣ ಸಹಿತ ಕ್ಷೇತ್ರದ 119 ಗ್ರಾಮಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ ಸಹಿತ ವಿವಿಧ ಮೂಲಭೂತ ಸೌಲಭ್ಯಕ್ಕಾಗಿ ಈ ವರೆಗೆ ಒಟ್ಟು 21039.20 (210.39 ಕೋಟಿ) ಲಕ್ಷ ಅನುದಾನ ನೀಡಲಾಗಿದೆ. ನಂದಿಕೇಶ್ವರ, ಕಟಗೇರಿ ಸಹಿತ ದೊಡ್ಡ ಗ್ರಾಮಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಿದ್ದರೆ, ಸಣ್ಣ-ಪುಟ್ಟ ಹಳ್ಳಿಗಳಿಗೂ ಕನಿಷ್ಠ 10 ಲಕ್ಷ ವರೆಗೆ ಅನುದಾನ ನೀಡಲಾಗಿದೆ.

ಕಳೆದ 24 ವರ್ಷಗಳಿಂದ ಕಾಲುವೆ ನಿರ್ಮಾಣಗೊಂಡರೂ ನೀರಾವರಿ ಕಾಣದ ಕೆರೂರ ಭಾಗದ ಭೂಮಿಗೆ ನೀರಾವರಿ ಒದಗಿಸಲು 300 ಕೋಟಿ ವೆಚ್ಚದ ಕೆರೂರ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಈ ಯೋಜನೆಗೆ ಈಗಾಗಲೇ ಬಜೆಟ್‌ನಲ್ಲಿ ಅನುಮೋದನೆ ನೀಡಿದ್ದು, ಕೆಬಿಜೆಎನ್‌ಎಲ್ದಿಂದ ವಿಸೃತ ವರದಿ ಸಿದ್ಧಪಡಿಸಿ, ಯೋಜನೆ ಜಾರಿಗೆ ತಯಾರಿ ನಡೆದಿದೆ. ಇದರಿಂದ 26 ಹಳ್ಳಿಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ.

ಅಲ್ಲದೇ ಬಾದಾಮಿ ಮತ್ತು ಕೆರೂರ ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಆಲಮಟ್ಟಿ ಜಲಾಶಯದ ಹಿನ್ನೀರು ತರಲು 220 ಕೋಟಿ ಮೊತ್ತದ ಯೋಜನೆಯೂ ಮಂಜೂರಾಗಿದೆ. ಕೆರೂರ, ಬಾದಾಮಿ ಪಟ್ಟಣದ ಜತೆಗೆ ಮಾರ್ಗ ಮಧ್ಯೆ ಬರುವ 19 ಹಳ್ಳಿಗಳಿಗೂ ಶಾಶ್ವತ ಕುಡಿಯುವ ನೀರು ಒದಗಿಸಲು ಈ ಯೋಜನೆ ಸಹಕಾರಿಯಾಗಲಿದೆ.

Advertisement

ಅಲ್ಲದೇ ಗುಳೇದಗುಡ್ಡಕ್ಕೆ ಸರ್ಕಾರಿ ಪದವಿ ಕಾಲೇಜು, ಬಾದಾಮಿಗೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಕೆರೂರಿಗೆ ಪ್ರೌಢಶಾಲೆ ಮಂಜೂರಾಗಿವೆ. ಬಾದಾಮಿ ಪಟ್ಟಣದಲ್ಲಿರುವ ಪೊಲೀಸ್‌ ವಸತಿ ಗೃಹ, ಇಕ್ಕಟ್ಟು ಮತ್ತು ಹಳೆಯದಾಗಿದ್ದು, ಹೊಸದಾಗಿ ಪೊಲೀಸ್‌ ವಸತಿ ಗೃಹ ನಿರ್ಮಾಣಕ್ಕೆ 50 ಕೋಟಿಗಳ ಪ್ರಸ್ತಾವನೆ ಹೋಗಿದೆ. ಕ್ಷೇತ್ರದ ಅಷ್ಟೂ ಕೆರೆಗಳಿಗೆ ನೀರು ತುಂಬಿಸಲು 8 ಪ್ಯಾಕೇಜ್‌ನ ಪ್ರಸ್ತಾವನೆ ಸಿದ್ಧಪಡಿಸಿ, ಸಣ್ಣ ನೀರಾವರಿ ಇಲಾಖೆಗೆ ಕಳುಹಿಸಲಾಗಿದೆ. ಒಂದು ವರ್ಷದಲ್ಲಿ ಬಾದಾಮಿ ಕ್ಷೇತ್ರಕ್ಕೆ 8200 ಆಶ್ರಯ ಮನೆಗಳು ಮಂಜೂರಾಗಿವೆ.

ಜಮಖಂಡಿಗೆ 2ನೇ ಸ್ಥಾನ: ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಪಡೆಯುವಲ್ಲಿ ಜಮಖಂಡಿ ಕ್ಷೇತ್ರ 2ನೇ ಸ್ಥಾನದಲ್ಲಿದೆ. ಒಂದು ವರ್ಷದಲ್ಲಿ ಸುಮಾರು 150ಕ್ಕೂ ಹೆಚ್ಚು ಕೋಟಿ ಅನುದಾನ ಬಂದಿದೆ ಎನ್ನುತ್ತಾರೆ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ. ಶಾಸಕರ ಅನುದಾನ 1.15 ಕೋಟಿ ಬಂದಿದೆ. 20 ಕೋಟಿ ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 90 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಮಂಜೂರಾಗಿದೆ. ಕಳೆದ ವರ್ಷ ಮರೇಗುದ್ದಿ-ಗಲಗಲಿ ಏತ ನೀರಾವರಿ ಯೋಜನೆ 275 ಕೋಟಿ, ಹುನ್ನೂರ-ಮುತ್ತೂರ ಏತ ನೀರಾವರಿ 75 ಕೋಟಿ ಮಂಜೂರಾಗಿದ್ದು, ಈ ಕಾಮಗಾರಿಗಳನ್ನು ಆರಂಭಿಸಲಾಗಿದೆ.

7 ಕೋಟಿ ರೂ. ವೆಚ್ಚದ ಪಾಲಿಟೆಕ್ನಿಕ್‌ ಕಾಲೇಜ್‌, ಕೊಣ್ಣೂರಿಗೆ ಡಾ|ಬಿ.ಆರ್‌. ಅಂಬೇಡ್ಕರ ವಸತಿ ನಿಲಯ ಮಂಜೂರಾಗಿದೆ. ಜಮಖಂಡಿಗೆ ಡಿಜಿಟಲ್ ಗ್ರಂಥಾಲಯ 1.50 ಕೋಟಿ ಮಂಜೂರಾಗಿವೆ. ಹೊಸದಾಗಿ ಸಾವಳಗಿಯಲ್ಲಿ 4 ಕೋಟಿ ವೆಚ್ಚದ ಬಸ್‌ ನಿಲ್ದಾಣ, ಜಮಖಂಡಿ ಬಸ್‌ ನಿಲ್ದಾಣ ಮತ್ತು ಡೀಪೋಕ್ಕೆ 4 ಕೋಟಿ, ಅಲ್ಪ ಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 5 ಕೋಟಿ, ಅಲ್ಪ ಸಂಖ್ಯಾತರ ವಿವಿಧ ಸಮುದಾಯ ಭವನಕ್ಕೆ 3 ಕೋಟಿ, ಓಬಿಸಿ ಸಮುದಾಯ ಭವನಗಳಿಗೆ 3 ಕೋಟಿ, ವಿಜಯಪುರ ರಸ್ತೆಯಿಂದ ಮೈಗೂರ ರಸ್ತೆ (ಕಾಲುವೆ ಮೂಲಕ) ಬೈಪಾಸ್‌ ರಸ್ತೆಗೆ 5.50 ಕೋಟಿ, ದೇಸಾಯಿ ವೃತ್ತದಿಂದ ಹುನ್ನೂರ ರಸ್ತೆ ಅಗಲೀಕರಣಕ್ಕೆ 7.50 ಕೋಟಿ ಸೇರಿದಂತೆ ಸುಮಾರು 200 ಕೋಟಿ ಮೊತ್ತದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿವೆ ಎನ್ನುತ್ತಾರೆ ಶಾಸಕ ಆನಂದ ನ್ಯಾಮಗೌಡ.

ಮುಳುಗಡೆ ಕ್ಷೇತ್ರ ಬೀಳಗಿ: ಜಿಲ್ಲೆಯ ಅಷ್ಟೂ ಕ್ಷೇತ್ರಗಳಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಅತಿಹೆಚ್ಚು ಬಾಧಿತಗೊಂಡ ತಾಲೂಕು ಬೀಳಗಿ. ಈ ಕ್ಷೇತ್ರದಲ್ಲಿ ಬಾಗಲಕೋಟೆ, ಬೀಳಗಿ ಹಾಗೂ ಬಾದಾಮಿ ತಾಲೂಕಿನ ಹಳ್ಳಿಗಳು ಒಳಗೊಂಡಿವೆ. ಅಲ್ಲದೇ ಜಿಲ್ಲೆಯ ಅತಿದೊಡ್ಡ ಕ್ಷೇತ್ರ ಎಂಬ ಖ್ಯಾತಿಯೂ ಈ ಕ್ಷೇತ್ರಕ್ಕಿದ್ದು, ಅನುದಾನ ಹಂಚಿಕೆಯಲ್ಲಿ ಒಂದಷ್ಟು ಹೆಚ್ಚಿನ ಆದ್ಯತೆ ದೊರೆಯುತ್ತದೆ.

ಬೀಳಗಿ ತಾಲೂಕಿನ ಬಾಡಗಂಡಿ ಬಳಿ 220 ಕೆ.ವಿ ವಿದ್ಯುತ್‌ ವಿತರಣೆ ಕೇಂದ್ರ, ಸುನಗ ಮತ್ತು ಶಾರದಾಳ ಹಾಗೂ ಕಾಡರಕೊಪ್ಪ ಬಳಿ ಎರಡು 310 ಕೆ.ವಿ ವಿದ್ಯುತ್‌ ವಿತರಣೆ ಕೇಂದ್ರ ಮಂಜೂರಾಗಿವೆ. ಇವುಗಳಿಗೆ ಅಂದಾಜು 150ಕ್ಕೂ ಹೆಚ್ಚು ಕೋಟಿ ಅನುದಾನ ದೊರೆಯಲಿದೆ. ಇನ್ನು ಲೋಕೋಪಯೋಗಿ ಹಾಗೂ ಆರ್‌ಡಿಪಿಆರ್‌ ಇಲಾಖೆಯಿಂದ ಒಟ್ಟು 40 ಕೋಟಿಯಷ್ಟು ರಸ್ತೆ ಕಾಮಗಾರಿಗಳು, 600 ಆಶ್ರಯ ಮನೆಗಳು, ಹೆರಕಲ್ ಏತ ನೀರಾವರಿ ಮುಂದುವರೆದ ಕಾಮಗಾರಿಗೆ 200 ಕೋಟಿ, ಗಲಗಲಿ ಸೇತುವೆ ಸಹಿತ ಬ್ಯಾರೇಜ್‌ಗೆ 34 ಕೋಟಿ ಅನುದಾನ ಬೀಳಗಿ ಕ್ಷೇತ್ರಕ್ಕೆ ಲಭ್ಯವಾಗಿದೆ.

ಕೆಬಿಜೆಎನ್‌ಎಲ್ದಿಂದ ಕ್ಷೇತ್ರದ 14 ಕೆರೆಗಳಿಗೆ ನೀರು ತುಂಬಿಸಲು 30 ಕೋಟಿ ಅನುದಾನಕ್ಕೆ ಒಪ್ಪಿಗೆ ಸಿಕ್ಕಿದ್ದು, ವಾರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎನ್ನುತ್ತಾರೆ ಕ್ಷೇತ್ರದ ಶಾಸಕ ಮುರಗೇಶ ನಿರಾಣಿ.

ಸಣ್ಣ ನೀರಾವರಿ ಇಲಾಖೆಯಿಂದ 2 ಕೋಟಿ ಮೊತ್ತದ ವಿವಿಧ ಕಾಮಗಾರಿ, ಕ್ಷೇತ್ರದ ವಿವಿಧ ಗ್ರಾಮಗಳ ಎಸ್‌.ಸಿ, ಎಸ್‌.ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 5 ಕೋಟಿ, ಕಲಾದಗಿ-ಸಂಶಿ ಮಧ್ಯೆ (ಹಿನ್ನೀರು ಬಂದಾಗ ಸುತ್ತುವರಿ ಪ್ರಯಾಣಿಸುವುದನ್ನು ತಪ್ಪಿಸಲು) ಇರುವ ಸೇತುವೆ ಎತ್ತರಿಸಲು 5 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಒಟ್ಟಾರೆ ಒಂದು ವರ್ಷದಲ್ಲಿ ಬೀಳಗಿ ಕ್ಷೇತ್ರಕ್ಕೆ ಮುಂದುವರಿದ ಕಾಮಗಾರಿ ಸಹಿತ ಒಟ್ಟು 360ರಿಂದ 400 ಕೋಟಿ ಅನುದಾನ ಬಂದಿದೆ. ಆದರೆ, ಶಿಕ್ಷಣ ಇಲಾಖೆಯಿಂದ ಒಂದು ರೂಪಾಯಿ ಕೂಡ ಬಂದಿಲ್ಲ. ಇದು ಬಹಳ ಬೇಸರ ತರಿಸಿದೆ. ಹೊಸ ಪ್ರೌಢ ಶಾಲೆ, ಸರ್ಕಾರಿ ಶಾಲೆ ಕಟ್ಟಡ ದುರಸ್ತಿ ಹೀಗೆ ಹಲವು ಕೆಲಸಕ್ಕೆ ಅನುದಾನ ಕೇಳಿದರೂ, ಶಿಕ್ಷಣ ಇಲಾಖೆಯಿಂದ ಅನುದಾನ ಬರದಿರುವುದು ಬೇಸರವಿದೆ ಎಂದು ಶಾಸಕ ಮುರಗೇಶ ಹೇಳಿದರು.

ಹಾಲಿ-ಮಾಜಿಗಳ ಮಧ್ಯೆ ಮುಧೋಳ: ಮುಧೋಳ ಮೀಸಲು ಕ್ಷೇತ್ರಕ್ಕೆ ಬಿಜೆಪಿಯ ಶಾಸಕ ಗೋವಿಂದ ಕಾರಜೋಳ ಮತ್ತು ಕಾಂಗ್ರೆಸ್‌ನ ಸಚಿವ ಆರ್‌.ಬಿ. ತಿಮ್ಮಾಪುರ, ಅಭಿವೃದ್ಧಿ ಅನುದಾನದ ಕ್ರೆಡಿಟ್ ಪಡೆಯಲು ಪೈಪೋಟಿ ನಡೆಸಿದ್ದಾರೆ. ಪೈಪೋಟಿ ಏನೇ ಇದ್ದರೂ ಸಧ್ಯ ಕ್ಷೇತ್ರಕ್ಕೆ ಕಾರಜೋಳರೇ ಶಾಸಕರಾಗಿದ್ದು, ಅವರ ಅವಧಿಯಲ್ಲಿ ನಡೆದ ಕಾಮಗಾರಿಗಳೇ ಎನ್ನಬೇಕು ಎಂದು ಬಿಜೆಪಿಗರು ಹೇಳುತ್ತಾರೆ.

ಮುಧೋಳ ಬೈಪಾಸ್‌ ನಿರ್ಮಾಣಕ್ಕೆ 55 ಕೋಟಿ ಯೋಜನೆ ಮಂಜೂರಾಗಿದ್ದು, ಇದರ ಹೊರತಾಗಿ ಸರ್ಕಾರದ ವಿವಿಧ ಇಲಾಖೆಗಳಡಿ ಸಾಮಾನ್ಯ ಯೋಜನೆಯಡಿ ಸುಮಾರು 65 ಕೋಟಿಯಷ್ಟು ಅನುದಾನ ಕ್ಷೇತ್ರಕ್ಕೆ ಬಂದಿದೆ.

ಅಲ್ಲದೇ ಚಿಚಖಂಡಿ ಬಳಿ ಹೊಸದಾಗಿ ಬ್ಯಾರೇಜ್‌ ನಿರ್ಮಾಣಕ್ಕೆ 9 ಕೋಟಿ, ಆಲಮಟ್ಟಿ ಜಲಾಶಯದ ಹಿನ್ನೀರನ್ನು ಮುಧೋಳ ಪಟ್ಟಣಕ್ಕೆ ಪೂರೈಸಲು 9 ಕೋಟಿ (ನಗರೋತ್ಥಾನದಡಿ 21 ಕೋಟಿ ಬಂದಿದೆ), ಮುಧೋಳ ಪಟ್ಟಣದ ಕುಡಿಯುವ ನೀರು ಪೂರೈಕೆಯ ಯೋಜನೆ ಆಧುನೀಕರಣಗೊಳಿಸಲು 210 ಕೋಟಿ ಮೊತ್ತದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರನ್ನಬೆಳಗಲಿಯ ಕೆರೆ ಅಭಿವೃದ್ಧಿಗೆ 13 ಕೋಟಿ ವಿಶೇಷ ಅನುದಾನಕ್ಕಾಗಿಯೂ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾಗಿ ಶಾಸಕ ಕಾರಜೋಳ ಹೇಳಿದ್ದಾರೆ. ಒಟ್ಟಾರೆ, ಮುಧೋಳ ಕ್ಷೇತ್ರ, ಒಂದು ವರ್ಷದಲ್ಲಿ ಅನುದಾನ ಪಡೆಯುವಲ್ಲಿ 3ನೇ ಸ್ಥಾನದಲ್ಲಿದೆ.

ತೇರದಾಳಕ್ಕೆ 50 ಕೋಟಿ: ಒಂದು ವರ್ಷದಲ್ಲಿ ತೇರದಾಳ ಸುಮಾರು 50 ಕೋಟಿಯಷ್ಟು ಅಭಿವೃದ್ಧಿ ಕಾರ್ಯ ನಡೆದಿವೆ ಎಂದು ಸ್ಥಳೀಯ ಶಾಸಕರು ಹೇಳುತ್ತಾರೆ. 1.50 ಕೋಟಿ ಶಾಸಕರ ಅನುದಾನ, ಸರ್ಕಾರದ ವಿವಿಧ ಇಲಾಖೆಗಳ ಸುಮಾರು 50 ಕೋಟಿ ಸಾಮಾನ್ಯ ಅನುದಾನ ಬಿಟ್ಟರೆ, ಕ್ಷೇತ್ರಕ್ಕೆ ವಿಶೇಷ ಅನುದಾನ, ಸಮ್ಮಿಶ್ರ ಸರ್ಕಾರ ಕೊಟ್ಟಿಲ್ಲ ಎಂಬುದು ಇಲ್ಲಿನ ಅಸಮಾಧಾನ.

ಸಸಾಲಟ್ಟಿ ಏತ ನೀರಾವರಿ ಯೋಜನೆ, ಹೊಸದಾಗಿ ರಬಕವಿ-ಬನಹಟ್ಟಿ ಹಾಗೂ ತೇರದಾಳ ತಾಲೂಕು ಅಸ್ತಿತ್ವಕ್ಕೆ ಬಂದಿದ್ದು, ಒಂದೇ ಸೂರಿನಡಿ ಎಲ್ಲ ಇಲಾಖೆಗಳು ದೊರೆಯಲು ತಾಲೂಕು ಆಡಳಿತ ಭವನ ನಿರ್ಮಾಣ, ಮಹಾಲಿಂಗಪುರ-ರಬಕವಿ ಹಾಗೂ ರಬಕವಿ-ತೇರದಾಳ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವುದು ಸೇರಿದಂತೆ ಹಲವು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಅವುಗಳಿಗೆ ಸರ್ಕಾರ ಒಪ್ಪಿಗೆ ನೀಡದೇ ವಿಳಂಬ ಮಾಡುತ್ತಿದೆ ಎನ್ನಲಾಗಿದೆ.

ಅಲ್ಲದೇ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯಡಿ ಹೊಸ ವಸತಿ ನಿಲಯಗಳ ಮಂಜೂರಾತಿಗೂ ಇಲ್ಲಿನ ಶಾಸಕ ಸಿದ್ದು ಸವದಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹುನಗುಂದಕ್ಕೆ ಅಂದಾಜು 80 ಕೋಟಿ: ಹುನಗುಂದ ವಿಧಾನಸಭೆ ಕ್ಷೇತ್ರಕ್ಕೆ ಒಂದು ವರ್ಷದಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 80 ಕೋಟಿಯಷ್ಟು ಅನುದಾನ ಬಂದಿದೆ ಎನ್ನುತ್ತಾರೆ ಇಲ್ಲಿನ ಶಾಸಕ ದೊಡ್ಡನಗೌಡ ಪಾಟೀಲ. ಕ್ಷೇತ್ರದ ವಿವಿಧ ಸಮಸ್ಯೆ ಪರಿಹಾರ ಹಾಗೂ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆಯಾದರೂ, ಅವುಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ.

ಶಾಸಕ ಅನುದಾನ 1.50 ಕೋಟಿ ಬಂದಿದ್ದು, ಬರ ನಿರ್ವಹಣೆಗಾಗಿ 50 ಲಕ್ಷ ಅನುದಾನ ಟಿಟಿಎಫ್‌ ಯೋಜನೆಯಡಿ ಬಂದಿದೆ. ಇನ್ನು ಕ್ಷೇತ್ರದ ವಿವಿಧೆಡೆ ಹೊಸ ವಸತಿ ನಿಲಯ, ರಸ್ತೆಗಳ ಅಭಿವೃದ್ಧಿ, ಕೂಡಲಸಂಗಮದ ಐಕ್ಯ ಮಂಟಪ ದುರಸ್ತಿ ಹೀಗೆ ಹಲವು ಕಾಮಗಾರಿಗಳ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿವೆ.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next