ಹೊಸದಿಲ್ಲಿ: ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ (DY Chandrachud) ಅವರು ನಿವೃತ್ತಿಯಾಗಿದ್ದಾರೆ. ತನ್ನ ಅಂತಿಮ ತೀರ್ಪಿನಲ್ಲಿ ಅವರು ನಾಗರಿಕರ ಧ್ವನಿಯನ್ನು ಬೆದರಿಕೆಗಳ ಮೂಲಕ ಹತ್ತಿಕ್ಕಬಾರದು ಮತ್ತು ಕಾನೂನು ಅನ್ವಯಿಸುವ ಸಮಾಜದಲ್ಲಿ ಬುಲ್ಡೋಜರ್ ನ್ಯಾಯ (Bulldozer justice) ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾಗರಿಕರ ಮನೆಯ ಸುರಕ್ಷತೆ ಮತ್ತು ಭದ್ರತೆ ರಕ್ಷಣೆಗೆ ಅರ್ಹವಾದ ಮೂಲಭೂತ ಹಕ್ಕುಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ಆಪಾದಿತ ಅಕ್ರಮ ಅತಿಕ್ರಮಣಗಳು ಅಥವಾ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಕಾರ್ಯವಿಧಾನದ ಸುರಕ್ಷತೆಗಳನ್ನು ಅನುಸರಿಸಲು ಮತ್ತು ಸರಿಯಾದ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ಬದ್ಧವಾಗಿರಬೇಕು ಎಂದು ಹೇಳಿದರು.
ಬುಲ್ಡೋಜರ್ ಮೂಲಕ ನ್ಯಾಯ ನೀಡುವಿಕೆ ಯಾವುದೇ ನಾಗರಿಕ ವ್ಯವಸ್ಥೆ ಮತ್ತು ನ್ಯಾಯಶಾಸ್ತ್ರದಲ್ಲಿ ಇರದ ವಿಚಾರ. ರಾಜ್ಯದ ಯಾವುದೇ ವಿಭಾಗ ಅಥವಾ ಅಧಿಕಾರಿಯಿಂದ ಕಾನೂನುಬಾಹಿರ ನಡವಳಿಕೆಯನ್ನು ಅನುಮತಿಸಿದರೆ, ನಾಗರಿಕರ ಆಸ್ತಿಗಳನ್ನು ನೆಲಸಮ ಮಾಡುವುದು ಬಾಹ್ಯ ಕಾರಣಕ್ಕಾಗಿ ಆಯ್ದ ಪ್ರತೀಕಾರವಾಗಿ ನಡೆಯುತ್ತದೆ ಎಂಬ ಗಂಭೀರ ಅಪಾಯವಿದೆ ಎಂದು ಚಂದ್ರಚೂಡ್ ಹೇಳಿದರು.
ಉತ್ತರ ಪ್ರದೇಶದ ಮಹಾರಾಜಗಂಜ್ ನಲ್ಲಿ 2019ರಲ್ಲಿ ಮನೆಯೊಂದನ್ನು ನೆಲಸಮ ಮಾಡಿ ಪ್ರಕರಣದ ವಿಚಾರಣೆ ನಡೆಸಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮನೆಗಳನ್ನು ಮತ್ತು ಆಸ್ತಿಗಳನ್ನು ನೆಲಸಮ ಮಾಡುವ ಬೆದರಿಕೆಯೊಡ್ಡಿ ನಾಗರಿಕರ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಮನುಷ್ಯನ ಅತ್ಯಂತ ಸುರಕ್ಷತೆ ಆತನ ಮನೆಯಾಗಿರುತ್ತದೆ ಎಂದರು.