Advertisement

Nanjanagud: ಎತ್ತಿನ ಮೈ ಮೇಲೆ ನಟ ದರ್ಶನ್‌ ಖೈದಿ ಸಂಖ್ಯೆ

04:06 PM Oct 21, 2024 | Team Udayavani |

ನಂಜನಗೂಡು: ಎತ್ತಿನಗಾಡಿ ಓಟದ ಸ್ಪರ್ಧೆ ನಮ್ಮ ಗ್ರಾಮೀಣ ಕ್ರೀಡೆ. ಹಿಂದೆ ಸಂಕ್ರಾಂತಿಯ ನಂತರದ ದಿನಗಳಲ್ಲಿ ಎತ್ತುಗಳಿಗೆ ಶೃಂಗಾರ ಮಾಡಿ ಓಟ ಸ್ಪರ್ಧೆ ಆಯೋಜಿಸಲಾಗುತ್ತಿತ್ತು. ಆದರೆ, ಈಗ ಕಣ್ಮರೆ ಆಗುತ್ತಿರುವುದಕ್ಕೆ ಎಂದು ಶಾಸಕ ದರ್ಶನ್‌ ಧ್ರುವನಾರಾಯಣ ವಿಷಾದ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹೆಡತಲೆ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಕಿಚ್ಚ ಬಾಯ್ಸ ತಂಡ ಆಯೋಜಿಸಿದ್ದ ತಾಲೂಕು ಮಟ್ಟದ ಜೋಡಿ ಕರುಗಳ ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮಣ್ಣಿನ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದಕ್ಕೆ ಕಾರಣ, ಇಂದಿನ ಯುವಜನರಿಗೆ ಆಸಕ್ತಿ ಇಲ್ಲದೆ ಇರುವುದು. ಗ್ರಾಮೀಣ ಕ್ರೀಡೆಗಳನ್ನು ಇಂದಿನ ಯುವಕರಿಗೆ ಪರಿಚಯ ಮಾಡುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಎತ್ತಿನ ಗಾಡಿ ಓಟದ ಸ್ಪರ್ಧೆ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಮಳೆಗಾಲದಲ್ಲಿ ಶ್ರಮಪಟ್ಟು ಇಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಪ್ರಯತ್ನವನ್ನು ಯುವಕರು ಮಾಡುತ್ತಿರುವುದು ಶ್ಲಾಘನಿಯ ವಿಷಯವಾಗಿದೆ. ಇಂತಹ ಮತ್ತಷ್ಟು ಕಾರ್ಯಕ್ರಮಗಳು ನಮ್ಮ ಕ್ಷೇತ್ರದಲ್ಲಿ ನಡೆಯಬೇಕು. ಇದಕ್ಕೆ ನನ್ನ ಸಹಕಾರ ಇರಲಿದೆ ಎಂದು ವಿವರಿಸಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಎತ್ತಿನ ಗಾಡಿ ಓಟದ ಸ್ಪರ್ಧೆಗಳು ಈ ಹಿಂದೆ ಸಂಕ್ರಾಂತಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚು ನಡೆಯುತ್ತಿದ್ದವು. ಆನಂತರದಲ್ಲಿ ಟಯರ್‌ ಗಾಡಿಗಳು ಹೆಚ್ಚು ಮುಂಚೂಣಿಗೆ ಬಂದವು. ಮಂಡ್ಯ ಜಿಲ್ಲೆಯಲ್ಲಿ ಟಯರ್‌ ಗಾಡಿಗಳ ಓಟದ ಸ್ಪರ್ಧೆ ಚಾಲ್ತಿಯಲ್ಲಿದೆ. ದಕ್ಷಿಣ ಕನ್ನಡದಲ್ಲಿ ಕೋಣಗಳ ಓಟದ ಸ್ಪರ್ಧೆ ಪ್ರಚಲಿತವಾಗಿದೆ. ನಮ್ಮ ತಾಲೂಕಿನಲ್ಲಿಯೂ ಹಲವಾರು ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಓಟದ ಸ್ಪರ್ಧೆಯಲ್ಲಿ ಕೊಲೆ ಆರೋಪ ಹೊತ್ತು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ ಅವರ ಕೈದಿ ಸಂಖ್ಯೆ 6106 ಹಾಗೂ 511 ಎತ್ತುಗಳ ಮೈ ಮೆಲೆ ರಾರಾಜಿಸಿತು. ಒಟದ ಸ್ಪರ್ಧೆಯಲ್ಲಿ ಒಟ್ಟು 35 ಜೊತೆ ಎತ್ತುಗಳು ಸ್ಪರ್ಧೆ ಮಾಡುತ್ತಿದ್ದು, ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ., ತೃತೀಯ ಬಹುಮಾನ 7 ಸಾವಿರ ರೂ. ನಿಗದಿಪಡಿಸಲಾಗಿದೆ.

Advertisement

ಕಾರ್ಯಕ್ರಮದಲ್ಲಿ ದೊರೆಸ್ವಾಮಿ ನಾಯಕ, ಮಾದನಾಯ್ಕ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ದೇಬೂರ್‌ ಅಶೋಕ್‌, ಮಹದೇವ ನಾಯಕ, ಪುಟ್ಟರಾಜು, ಶಿವಕುಮಾರ್‌, ರಾಜು, ಅನಿಲ್‌, ಗುಂಡ, ಗ್ರಾಮದ ಯಜಮಾನರು, ಕಿಚ್ಚ ಬಾಯ್ಸ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next