ಅಫಜಲಪುರ: “ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದಿದ್ದೇವೆ. ಕರ್ನಾಟಕ ಪ್ರವೇಶಕ್ಕೆ ನಮಗೆ ಅವಕಾಶ ನೀಡಿ’ ಎಂದು ಬಳೂರ್ಗಿ ಚೆಕ್‌ಪೋಸ್ಟ್ ಸಿಬ್ಬಂದಿಗಳ ಜತೆ ಮಹಾರಾಷ್ಟ್ರ ಪ್ರಯಾಣಿಕರು ಗಲಾಟೆ ಮಾಡಿರುವ ಪ್ರಸಂಗ ಸೋಮವಾರ ನಡೆದಿದೆ.
ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದಿದ್ದರೂ ಜಿಲ್ಲೆಗೆ ಪ್ರವೇಶ ನೀಡುವಂತೆ “ಮಹಾ ಜನರು’ ಚೆಕ್ ಪೋಸ್ಟ್ ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಾರೆ. ಅಲ್ಲದೇ ಸಿಬ್ಬಂದಿ ಮೇಲೆ ಮುಗಿಬಿದ್ದು ವಾದ-ವಿವಾದ ಮಾಡಿ ಕೊನೆಗೆ ಬ್ಯಾರಿಕೇಡ್ ಕಿತ್ತುಹಾಕಿ ತಾಲೂಕಿನ ಒಳಗೆ ಪ್ರವೇಶಿಸಿದ್ದಾರೆ.
ಕೊರೊನಾ ಮೂರನೇ ಅಲೆ ಶುರುವಾಗಿದ್ದರಿಂದ ಸರ್ಕಾರ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ನೇಮಿಸಿ ಗಡಿಭಾಗದಲ್ಲಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಿದೆ. ತಾಲೂಕಿನ ಬಳೂರ್ಗಿ ಚೆಕ್‌ಪೋಸ್ತ್ ನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಫೂಲ್ ಐ ಅಲರ್ಟ್‌ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಪ್ರತಿನಿತ್ಯ ಚೆಕ್‌ಪೋಸ್ಟ್ ಸಿಬ್ಬಂದಿ ಜತೆ ಗಲಾಟೆ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಗಳು ಪ್ರತಿನಿತ್ಯ ಹೆಚ್ಚುತ್ತಿರುವಾಗ ಗಡಿಭಾಗದಲ್ಲಿ ಈ ರೀತಿ ಪ್ರಯಾಣಿಕರು ಬೇಜವಾಬ್ದಾರಿತನದಿಂದ ವರ್ತಿಸುವುದರಿಂದ ಈ ಭಾಗದ ಜನರಿಗೆ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
28 ವಿದ್ಯಾರ್ಥಿಗಳಿಗೆ ಸೇರಿದಂತೆ ಒಟ್ಟು ತಾಲೂಕಿನಲ್ಲಿ 79 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲೇ 600ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಿರುವಾಗ ಜಿಲ್ಲಾಡಳಿತ ಈ ವೇಗವನ್ನು ನಿಯಂತ್ರಿಸಲು ಚೆಕ್‌ಪೋಸ್ಟ್‌ಗಳಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಪಾಸಿಟಿವ್ ಪ್ರಕರಣಗಳು ತಗ್ಗಿಸಬಹುದು ಎಂದು ಚೆಕ್ ಪೋಸ್ಟ್ ಸಿಬ್ಬಂದಿಗೆ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ಯಾವುದೇ ಕಾರಣಕ್ಕೂ ಸಹ ಜಿಲ್ಲೆ ಒಳಗೆ ಪ್ರವೇಶ ನೀಡಬೇಡಿ ಎಂದು ಸೂಚಿಸಿದ್ದಾರೆ. ಆದರೆ ಸಿಬ್ಬಂದಿಗಳು ಎಷ್ಟೇ ಹರಸಾಹಸ ಪಟ್ಟರೂ ಸಹ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಗಲಾಟೆ ಗದ್ದಲ ಮಾಡಿ ಪ್ರವೇಶ ಪಡೆಯುತ್ತಿದ್ದಾರೆ. ಇದರ ಜತೆಗೆ ತಾಲೂಕಿನ ಒಳಗೆ ಪ್ರವೇಶಕ್ಕೆ ಇರುವ ಜಮೀನುಗಳ ರಸ್ತೆಯ ಮೂಲಕ ಅಡ್ಡದಾರಿ ಹಿಡಿದು ಪ್ರಯಾಣಿಕರು ಬರುತ್ತಿರುವುದರಿಂದ ಜನರಿಗೆ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಇನ್ನಷ್ಟು ಜಾಗೃತರಾಗಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.