ತೀರ್ಥಹಳ್ಳಿ: ನೂರಾರು ಜನ ತಮ್ಮ ಕೆಲಸ ಬಿಟ್ಟು ರಸ್ತೆ ತಡೆ ಮಾಡಿದ್ದಾರೆ. ಕಳೆದ ಸಲ ನಮ್ಮ ಸರ್ಕಾರ ಇದ್ದಾಗ ರಸ್ತೆ ಚೆನ್ನಾಗಿಯೇ ಇತ್ತು. ಇಲ್ಲಿನ ಒಂದು ಮರಳು ಕ್ವಾರೆಯಲ್ಲಿ ಕಳೆದ ವರ್ಷ ಅಪ್ಪರ್ ತುಂಗಾ ಪ್ರಾಜೆಕ್ಟ್ ಗಾಗಿ ಅದನ್ನು ವಹಿಸಿಕೊಂಡು ನಡೆಸುವವರು ಮರಳು ಹಾಕಿಕೊಂಡು ರಸ್ತೆ ಹೊಂಡ ಗುಂಡಿ ಬಿದ್ದಿದೆ. ಅದನ್ನು ಇಂಜಿನಿಯರ್ ಬಳಿ ಮಾತನಾಡಿ ಸರಿಪಡಿಸಲು ಹೇಳಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಬುಕ್ಲಾಪುರ ಹೊರಬೈಲು ಮಾರ್ಗದ ರಸ್ತೆ ಹಾಳಾದ ಕಾರಣ ಸ್ಥಳೀಯರು ರಸ್ತೆ ತಡೆ ಮಾಡಿದ್ದರು. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸ್ಥಳೀಯರ ಜೊತೆಗೆ ಚರ್ಚಿಸಿ ರಸ್ತೆ ಸರಿಪಡಿಸುವ ಭರವಸೆ ನೀಡಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ಬಾರಿ ಮರಳು ಕ್ವಾರೆ ಶುರುವಾಗುವ ಒಳಗೆ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಮರಳು ಹೊಡಿಯಲು ಬಿಡುವುದಿಲ್ಲ. ಜನರ ಜೊತೆಗೆ ನಾನು ಸಹ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಹಣ ಬರುತ್ತಿತ್ತು.ಈ ಸರ್ಕಾರ ಗ್ಯಾರೆಂಟಿ ಹಣ ಕೊಡುವ ಮೂಲಕ ಅಭಿವೃದ್ಧಿಗೆ ಹಣ ಇಲ್ಲದಂತೆ ಆಗಿದೆ ಎಂದರು.
ಸ್ಥಳೀಯರು ಎಷ್ಟು ಕೇಳುತ್ತಾರೋ ಅವರಿಗೆ ಅಷ್ಟು ಮರಳು ನೀಡಿ ಉಳಿದದ್ದನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಸ್ಥಳೀಯರು ಬಂದೋ ಬಸ್ತ್ ಮಾಡಬೇಕು. ನಮಗೆ ಮನೆ ಕಟ್ಟಲು ಮರಳು ನೀಡಿ ತೆಗೆದುಕೊಂಡು ಹೋಗಿ ಎಂದು ಸ್ಥಳೀಯರು ಹೇಳಬೇಕು ಎಂದು ಹೇಳಿದರು.