Advertisement

ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿ

07:11 PM Apr 29, 2021 | Team Udayavani |

ಗಜೇಂದ್ರಗಡ: ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆಯಲ್ಲಿನ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ನಿವಾಸಿಗಳು ಪುರಸಭೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪಟ್ಟಣದ 18 ಮತ್ತು 21ನೇ ವಾರ್ಡ್‌ಗೆ ಹೊಂದಿಕೊಂಡ ಸಾರ್ವಜನಿಕ ಬಯಲು ಶೌಚಾಲಯವನ್ನು ಪುರಸಭೆಯವರು ಏಕಾಏಕಿ ತೆರವುಗೊಳಿಸಿದ್ದಾರೆ.

Advertisement

ಇದೇ ಶೌಚಾಲಯವನ್ನು ಸುತ್ತಲಿನ ನಾಲ್ಕು ವಾರ್ಡ್‌ನ ಮಹಿಳೆಯರು ಅವಲಂಬಿಸಿದ್ದಾರೆ. ಇಲ್ಲಿನ ನಿವಾಸಿಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗದ ಕೊರತೆಯಿದೆ ಎಂದರು. ಮಹಿಳೆಯರ ಮಾನ ಕಾಪಾಡಬೇಕಾದ ಆಡಳಿತವೇ ಇಂತಹ ಕೆಲಸ ಮಾಡಿರುವುದು ಸಮಂಜಸವಲ್ಲ. ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆ ನಿವಾಸಿಗಳಿಗೆ ತೊಂದರೆಯಾದರೂ ಪುರಸಭೆ ಆಡಳಿತ ಸ್ಪಂದಿಸುತ್ತಿಲ್ಲ. ಕೂಡಲೇ ತೆರವುಗೊಳಿಸಿದ ಗೋಡೆ ಪುನಃ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಆಗಮಿಸಿ, ಮಹಿಳೆಯರ ಅಹವಾಲು ಆಲಿಸಿ ಮಾತನಾಡಿದರು.

ಕಾನೂನಿನಲ್ಲಿ ಬಯಲು ಶೌಚ ನಿಷೇಧಿಸಲಾಗಿದೆ. ಹಾಗಿದ್ದಾಗ್ಯೂ ಇಷ್ಟು ವರ್ಷ ಜಾರಿಯಲ್ಲಿರುವುದು ಕಾನೂನು ಬಾಹೀರ ಕೃತ್ಯವಾಗಿದೆ. ವೈಯಕ್ತಿಕ ಶೌಚ ನಿರ್ಮಾಣಕ್ಕೆ ಮುಂದಾಗಿ, ಇಲ್ಲವಾದರೆ ಸಾರ್ವಜನಿಕ ಸುಲಭ ಶೌಚಾಲಯ ಬಳಕೆ ಮಾಡಿಕೊಳ್ಳಿ ಎಂದರು. ಇದಕ್ಕೊಪ್ಪದ ಪ್ರತಿಭಟನಾಕಾರರು ತೆರವುಗೊಳಿಸಿದ ಗೋಡೆ ನಿರ್ಮಿಸಬೇಕು. ಇಲ್ಲವೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟುಹಿಡಿದರು. ನಂತರ ಆಡಳಿತ ಮಂಡಳಿ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next