ಕುಂದಾಪುರ: ಉಡುಪಿ ಜಿಲ್ಲೆಯ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿ ಹರಿಸಲು ಪಕ್ಷ ಭೇದ ಮರೆತು ಕಾರ್ಮಿಕ- ಮಾಲಕರ ಹದಿಮೂರು ಸಂಘಟನೆಗಳಿಂದ ರವಿವಾರ ಉಡುಪಿಯಲ್ಲಿರುವ ಸಂಘದ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮರಳುಗಾರಿಕೆ ಆರಂಭಿಸುವ ಕುರಿತಂತೆ ಜಿಲ್ಲಾಡಳಿತ ಇನ್ನೂ ಕೂಡ ಸರಳೀಕರಣ ಮಾಡದ ಕುರಿತಂತೆ, ಮತ್ತೆ ಬೃಹತ್ ಹೋರಾಟಕ್ಕೆ ಸಿದ್ಧವಾಗುವಂತೆ ಕರೆ ನೀಡಲಾಯಿತು.
ಕಳೆದ 4 ವರ್ಷಗಳಿಂದ ಮರಳು ಸಮಸ್ಯೆಯಿದೆ. ಬೇರೆ ಬೇರೆ ಸಂಘಟನೆ ಗಳು ಸ್ವತಂತ್ರವಾಗಿ ಹೋರಾಟಗಳನ್ನು ನಡೆಸಿ ಮನವಿಗಳನ್ನು ನೀಡಿವೆ. ಆದರೆ ಜಿಲ್ಲಾಡಳಿತ ಹುಸಿ ಭರವಸೆಗಳನ್ನು ನೀಡಿ ಸಮಸ್ಯೆಗಳನ್ನು ಬಗಿಹರಿಸಿಲ್ಲ. ಇತ್ತೀಚೆಗೆ ಸಮಸ್ಯೆ ತೀವ್ರವಾಗಿ ಬಿಗಡಾಯಿಸುತ್ತಿದ್ದರೂ ಇನ್ನೂ ಕೂಡ ಆಗಸ್ಟ್ ತಿಂಗಳಲ್ಲಿ ಜನರಿಗೆ ಮರಳು ದೊರಕಿಸುವ ಬಗ್ಗೆ ಯಾವುದೇ ಕ್ರಮಕೈಗೊಳ್ಳುವ ಕುರಿತು ಚಿಂತಿಸಿಲ್ಲ. ಇದರಿಂದಾಗಿ ಈ ವರ್ಷವೂ ಜಿಲ್ಲೆಯ ಜನರಿಗೆ ಮತ್ತಷ್ಟು ಸಮಸ್ಯೆಗಳು ಬರುವುದು ಖಚಿತವಾಗಿದೆ. ಇನ್ನೊಂದೆಡೆ ಕೆಂಪು ಕಲ್ಲು ಹಾಗೂ ಶಿಲೆಕಲ್ಲು ಗಣಿಗಾರಿಕೆಗೆ ತಡೆಯೊಡ್ಡುತ್ತಿರುವುದು ಕಾರ್ಮಿಕರು ಇನ್ನಷ್ಟು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕತೆ ಕುಸಿಯುವ ಸಾಧ್ಯತೆಗಳಿವೆ. ಕಾರ್ಮಿಕರು ಕೆಲಸವಿಲ್ಲದೆ ವಲಸೆ ಹೋಗುವ ಸಂಭವವಿದೆ. ಮರಳು ಸಮಸ್ಯೆ ಯನ್ನು ಸಾರ್ವಜನಿಕರ ಬೆಂಬಲ ದೊಂದಿಗೆ ಜನ ಚಳವಳಿಯಾಗಿ ಪರಿವರ್ತಿಸಿ, ಪಕ್ಷಾತೀತ ಹೋರಾಟ ಮಾಡಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.
13 ಸಂಘಟನೆಗಳ ಪ್ರಮುಖರ ನಿಯೋಗ ತತ್‌ಕ್ಷಣ ಜಿಲ್ಲಾಧಿಕಾರಿ ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಲಾಗುವುದು, ದುಂಡು ಮೇಜಿನ ಸಭೆ ನಡೆಸುವುದು, ಅನಂತರವೂ ಮರಳುಗಾರಿಕೆ ಆರಂಭವಾಗದಿದ್ದರೆ ಸಂಘಟನೆಗಳು ಜಂಟಿಯಾಗಿ ಗ್ರಾಮ ಗ್ರಾಮಗಳಲ್ಲಿ ಅನಿರ್ದಿಷ್ಟ ಹೋರಾಟ ಗಳನ್ನು ನಡೆಸಲಾಗುವುದು. ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಚಲೋ ನಡೆಸಿ ಹೋರಾಟ ಮಾಡಲಾಗುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶೇಖರ ಬಂಗೇರ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ದಯಾನಂದ ಕೋಟ್ಯಾನ್, ಮರಳಿಗಾಗಿ ಹೋರಾಟ ಸಮಿತಿಯ ಮುಖಂಡ ಸತ್ಯರಾಜ್ ಬಿರ್ತಿ, ಲಾರಿ ಮಾಲಕರ ಸಂಘದ ಜಿಲ್ಲಾ ಮುಖಂಡರಾದ ಪ್ರವೀಣ ಸುವರ್ಣ, ಕಟಪಾಡಿ ಲಾರಿ ಮಾಲಕರ ಸಂಘದ ರಾಘವೇಂದ್ರ ಶೆಟ್ಟಿ, ಕುಂದಾಪುರ ತಾ| ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬೈಂದೂರು ಕಟ್ಟಡ ಕಾರ್ಮಿಕರ ಸಂಘದ ಮುಖಂಡ ವೆಂಕಟೇಶ್ ಕೋಣಿ, ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ. ವಿಶ್ವನಾಥ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್, ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ, ಸಿಐಟಿಯು ತಾ| ಕಾರ್ಯದರ್ಶಿ ಕವಿರಾಜ್, ವಿಟuಲ ಪೂಜಾರಿ ಉಪಸ್ಥಿತರಿದ್ದರು.