Advertisement

ಕುಂದಾಣ ನಾಡ ಕಚೇರಿಗೆ ಬೇಕು ಕಾಯಕಲ್ಪ

12:58 PM Oct 07, 2021 | Team Udayavani |

ದೇವನಹಳ್ಳಿ: ತಾಲೂಕಿನ ಕುಂದಾಣ ನಾಡಕಚೇರಿ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು, ನೂತನ ಕಟ್ಟಡ ಇಲ್ಲದೆ, ಪಶುಪಾಲನಾ ಇಲಾಖೆ ಕಚೇರಿಯಲ್ಲೇ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಬೇಕಾಗಿದೆ.

Advertisement

ಇಲ್ಲಿನ ಗ್ರಾಮಠಾಣೆ ಸಂಖ್ಯೆ 278/ ಸರ್ವೆ ನಂ. 300ರಲ್ಲಿ 55×55 ಅಡಿ ಜಾಗದಲ್ಲಿ ನಾಡಕಚೇರಿಯ ಕಲ್ಲಿನ ಕಟ್ಟಡವಿದೆ. ಆದರೆ, ಈ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಯಾವುದೇ ಸಮಯದಲ್ಲಿ ಬೀಳುವಂತಹ ಸ್ಥಿತಿಯಲ್ಲಿದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ದಟ್ಟವಾಗಿ ಬೆಳೆದು ನಿಂತಿದ್ದು, ಸಂಜೆ ಆಗುತ್ತಿದ್ದಂತೆ ಮದ್ಯವಸನಿಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾಡಿಕೊಂಡಿದ್ದಾರೆ.

ಸರ್ಕಾರದ ಇ-ಆಡಳಿತ ಕಾರ್ಯಕ್ರಮದ ಪ್ರಕಾರ, ನಾಡಕಚೇರಿ ಪ್ರಾರಂಭಿಸಲಾಗಿದೆ. ಇದರಿಂದ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯಲು ಜನರಿಗೆ ಸಹಾಯ ಮಾಡುತ್ತದೆ. ಆದರೆ, ಇಲ್ಲಿ ಸ್ವಂತ ಕಟ್ಟಡವೇ ಇಲ್ಲದೆ, ಸಾಕಷ್ಟು ಸೌಲಭ್ಯಗಳನ್ನು ಪಡೆ ಯಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ;– ಮತ್ತೆ ತೆರೆದ ಶಿರಡಿ ಸಾಯಿಬಾಬಾ ದೇಗುಲ; ಪಾಸ್ ಇದ್ದವರಿಗೆ ಮಾತ್ರ ಅವಕಾಶ

ಪಶುಪಾಲನಾ ಕಚೇರಿಯಲ್ಲಿ ಕಾರ್ಯ: ಸರ್ಕಾರದ ಸೌಲಭ್ಯಗಳು ರೈತರ ಮನೆ ಬಾಗಿಲಿಗೆ ತಲುಪಬೇಕು,ಯಾವ ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲೂಕು ಕಚೇರಿಗೆ ಅಲೆದಾಡಬಾರದು. ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪ್ರತಿ ಸೌಲಭ್ಯ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಹೋಬಳಿಗೊಂದು ನಾಡಕಚೇರಿ ತೆರೆಯಲಾಗಿದೆ. ಕುಂದಾಣ ಹೋಬಳಿಯಲ್ಲಿ ನಾಡಕಚೇರಿ ಇದ್ದರೂ ಸ್ವಂತ ಕಟ್ಟಡವಿಲ್ಲದೆ ಪಶು ಇಲಾಖೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

Advertisement

ಸೌಲಭ್ಯ ಪಡೆಯಲು ಆಗುತ್ತಿಲ್ಲ: ಕುಂದಾಣ ಹೋಬಳಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ಸಂದಾಯವಾಗುತ್ತಿದೆ. ಸಾಕಷ್ಟು ಕಂಪನಿಗಳು, ಕಲ್ಲುಗಣಿಗಾರಿಕೆ ನಡೆಸುತ್ತಿರುವವರು, ಹಲವು ವಿಧಗಳಲ್ಲಿ ಸಿಎಸ್‌ಆರ್‌ ನಿಧಿಯಡಿ ಅನುದಾನ ಸಂಗ್ರಹವಾಗುತ್ತಿದ್ದರೂ ಸದ್ಬಳಕೆ ಮಾಡಿಕೊಂಡು ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಿಬ್ಬಂದಿ ಕೊರತೆ: ನಾಡಕಚೇರಿಯ ವ್ಯಾಪ್ತಿಯಲ್ಲಿ ಒಬ್ಬರು ಉಪತಹಶೀಲ್ದಾರ್‌, ಒಬ್ಬ ರಾಜಸ್ವ ನಿರೀಕ್ಷಕ, ನಾಲ್ಕು ಮಂದಿ ಗ್ರಾಮ ಲೆಕ್ಕಾಧಿಕಾರಿಗಳು, ಒಬ್ಬರು ಕಂಪ್ಯೂಟರ್‌ ಆಪರೇಟರ್‌ ಹೊರತುಪಡಿಸಿ, ಬೇರೆ ಸಿಬ್ಬಂದಿಯಿಲ್ಲ. 8 ಕಂದಾಯ ಪಂಚಾಯಿತಿಗಳು ಇವೆ. ಎರಡು ಪಂಚಾಯ್ತಿಗಳಿಗೆ ಒಬ್ಬೊಬ್ಬ ಗ್ರಾಮ ಲೆಕ್ಕಾಧಿಕಾರಿ ಇದ್ದಾರೆ. ಸರ್ಕಾರವೂ ಕೂಡಾ ಅನೇಕ ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳದೇ ಇರುವುದು ಸಿಬ್ಬಂದಿಯ ಕೊರತೆಗೆ ಕಾರಣವಾಗಿದೆ.

ಸಿಬ್ಬಂದಿಗೆ ಮೂಲ ಸೌಕರ್ಯದ ಕೊರತೆ: ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ, ಗ್ರಾಮೀಣ ಜನರು ನಾಡಕಚೇರಿಗೆ ಬರಲು ಬಸ್‌ ವ್ಯವಸ್ಥೆ ಇಲ್ಲ. ಮಧ್ಯಾಹ್ನದ ಊಟಕ್ಕೂ ಪರದಾಡುವಂತಹ ಸ್ಥಿತಿಯಿದೆ. ಸರಿಯಾದ ರಸ್ತೆಗಳ ಸಂಪರ್ಕವೂ ಇಲ್ಲದೆ ಸಿಬ್ಬಂದಿ ಪರದಾಡುವಂತಾಗಿದೆ. ಇಲ್ಲಿ ಕಾರ್ಯನಿರ್ವಹಿಸಲಿಕ್ಕೆ ಅಧಿಕಾರಿಗಳು ಹಿಂದೇಟು ಹಾಕುವಂತಾಗಿದೆ. ಈಗಲಾದರೂ ಅಧಿಕಾರಿಗಳು ಗಮನಹರಿಸಿ, ಸುಸಜ್ಜಿತ ನಾಡಕಚೇರಿ ಕಟ್ಟಡ ನಿರ್ಮಾಣ ಮಾಡಿಕೊಟ್ಟು, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

“ನಾಡಕಚೇರಿ ಶಿಥಿಲಗೊಂಡಿದೆ. ಹೊಸ ಕಟ್ಟಡ ಅಗತ್ಯವಿದೆ. ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾಡಕಚೇರಿಯ ಜಾಗ, ಕಾಮಗಾರಿ ವೆಚ್ಚವನ್ನು ಲಗತ್ತಿಸಿ, ನೂತನ ಕಟ್ಟಡಕ್ಕಾಗಿ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.”

ಚೈತ್ರಾ, ಉಪ ತಹಶೀಲ್ದಾರ್‌,

ಕುಂದಾಣ ನಾಡಕಚೇರಿ.

 “ನಾಡಕಚೇರಿಗೆ ಸುತ್ತಮುತ್ತಲಿನಗ್ರಾಮಸ್ಥರು ಬರುತ್ತಾರೆ. ನಾಡಕಚೇರಿಯು ಒಂದು ಕಡೆಯಿದ್ದು, ರಾಜಸ್ವ ನಿರೀಕ್ಷಕರ ಕಚೇರಿ ಮತ್ತೂಂದುಕಡೆಯಿದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.”

 ನಾಗರಾಜ್‌, ಕಾರ್ಯದರ್ಶಿ,

 ತಾಲೂಕು ರೈತ ಸಂಘ

“ಕುಂದಾಣ ನಾಡಕಚೇರಿ ನಿರ್ಮಾಣಕ್ಕೆ ಡೀಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರು, ವಯಸ್ಸಾದವರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕು. ಡೀಸಿ ಕಚೇರಿಯಲ್ಲಿಇತ್ತೀಚೆಗೆ ನಡೆದ ಪ್ರಾದೇಶಿಕ ಆಯುಕ್ತರ ಸಭೆಯಲ್ಲೂ ಗಮನಕ್ಕೆ ತರಲಾಗಿದೆ.”

ಅನಿಲ್‌ಕುಮಾರ್‌ ಅರೋಲಿಕರ್‌,

ತಹಶೀಲ್ದಾರ್‌, ದೇವನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next