Advertisement

ಕಟ್ಟಡ ಮಾತ್ರ ಹೊಸದು, ಸೌಲಭ್ಯಗಳು ಇಲ್ಲಿಲ್ಲ!

04:00 AM May 04, 2019 | mahesh |

ಕಡಬ: ಸಮುದಾಯ ಆಸ್ಪತ್ರೆಯಾಗಿ 10 ವರ್ಷಗಳ ಹಿಂದೆ ಮೇಲ್ದರ್ಜೆಗೇರಿದ್ದ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ ಕೊನೆಗೂ ಉದ್ಘಾಟನೆಗೊಂಡಿದೆ. ಆದರೆ ಹೆಸರಿಗೆ ಮಾತ್ರ ಸಮುದಾಯ ಆಸ್ಪತ್ರೆ ಎನ್ನುವ ಅತಂತ್ರ ಸ್ಥಿತಿ ಇಲ್ಲಿನದು. ಹೊಸ ಕಟ್ಟಡ ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಇಲ್ಲಿಲ್ಲ.

Advertisement

ತಜ್ಞ ವೈದ್ಯರೂ ಇಲ್ಲ, ಅಗತ್ಯ ಸಿಬಂದಿಯೂ ಇಲ್ಲ. ಸಣ್ಣಪುಟ್ಟ ಕಾಯಿಲೆಗಳನ್ನು ಹೊರತುಪಡಿಸಿದರೆ ಇಲ್ಲಿನ ಜನರು ಇತರ ಚಿಕಿತ್ಸೆಗಳಿಗಾಗಿ ದೂರದ ಪುತ್ತೂರು ಅಥವಾ ಮಂಗಳೂರನ್ನೇ ಅವಲಂಬಿಸಬೇಕಿದೆ.

ಆರು ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರವು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿದೆ. ಅದರಂತೆ ಕಡಬ ಆಸ್ಪತ್ರೆಗೆ ಪ್ರಸೂತಿ, ಶಿಶು, ಅರಿವಳಿಕೆ ಸಹಿತ ನಾಲ್ವರು ತಜ್ಞ ವೈದ್ಯರು, ಓರ್ವ ದಂತ ವೈದ್ಯರು ಸಹಿತ ಒಟ್ಟು 34 ಹುದ್ದೆಗಳು ಮಂಜೂರಾಗಿವೆ.

ಆದರೆ ಯಾವ ಹುದ್ದೆಯೂ ಭರ್ತಿಯಾಗಿಲ್ಲ. ತಜ್ಞ ವೈದ್ಯರ ಎಲ್ಲ ಹುದ್ದೆಗಳು ಖಾಲಿ ಇವೆ. ಶುಶ್ರೂಷಕಿಯರ 6 ಹುದ್ದೆಗಳ ಪೈಕಿ ಎರಡು ಖಾಲಿ ಇವೆ. ಫಾರ್ಮಾಸಿಸ್ಟ್‌ 2 ಹುದ್ದೆಗಳೂ ಖಾಲಿ. ಪ್ರಯೋಗಾಲಯ ತಂತ್ರಜ್ಞ, ನೇತ್ರ ಪರೀಕ್ಷಕ, ಅಧೀಕ್ಷಕ, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ

ಗುಮಾಸ್ತ, ಕ್ಲರ್ಕ್‌/ ಟೈಪಿಸ್ಟ್‌ ಹುದ್ದೆಗಳೂ ಖಾಲಿ ಉಳಿದಿವೆ. ಗ್ರೂಪ್‌ ಡಿ 12 ಹುದ್ದೆಗಳ ಪೈಕಿ 1 ಮಾತ್ರ ಭರ್ತಿಯಾಗಿದೆ. ಈ ಪೈಕಿ 6 ಹುದ್ದೆಗಳಿಗೆ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

Advertisement

ಚಾಲಕರ 2 ಹುದ್ದೆ ಹಾಗೂ ಕ್ಷ-ಕಿರಣ ತಂತ್ರಜ್ಞರ ಒಂದು ಹುದ್ದೆ ಭರ್ತಿಯಾಗಿವೆ. ಹಾಸಿಗೆ, ಮಂಚ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಗೆ ಬೇಕಾದ ಕೆಲವು ಸಲಕರಣೆಗಳು ಬಿಟ್ಟರೆ ಸಮುದಾಯ ಆಸ್ಪತ್ರೆಗೆ ಬೇರೆ ಯಾವ ಅಗತ್ಯ ಸಲಕರಣೆಗಳೂ ಬಂದಿಲ್ಲ.

8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ನೆರೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಏನೆಕಲ್, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ.
ಸಮುದಾಯ ಆಸ್ಪತ್ರೆಯಾಗಿ 10 ವರ್ಷಗಳು ಕಳೆದರೂ ಇಲ್ಲಿನ ವೈದ್ಯಕೀಯ ಸೌಲಭ್ಯಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಂತ ಮೇಲ್ದರ್ಜೆಗೇರಿಲ್ಲ.

ಸವಲತ್ತುಗಳನ್ನು ತರಿಸಿಕೊಳ್ಳುವ ಹೋರಾಟ ಮನೋಭಾವದ ಜನಪ್ರತಿನಿಧಿಗಳು ಅಥವಾ ನಾಯಕರ ಕೊರತೆ ಇಲ್ಲಿನ ಮಟ್ಟಿಗೆ ದೊಡ್ಡ ಹಿನ್ನಡೆಯಾಗಿದೆ. ರಾಜಕೀಯ ನಾಯಕರಿಗೂ ಅಧಿಕಾರಿಗಳಿಗೂ ಇಚ್ಛಾಶಕ್ತಿ ಇಲ್ಲದಿರುವುದೇ ಇಲ್ಲಿನ ಸರಕಾರಿ ಆಸ್ಪತ್ರೆಯ ದುಸ್ಥಿತಿಗೆ ಪ್ರಮುಖ ಕಾರಣ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಇದರಿಂದಾಗಿ ಬಡ ರೋಗಿಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ.

••4.85 ಕೋ.ರೂ. ವೆಚ್ಚದ ಕಟ್ಟಡ
•10 ವರ್ಷ ಕಳೆದರೂ ಸೌಲಭ್ಯವಿಲ್ಲ
•ಭರ್ತಿಯಾಗದ 34 ಹುದ್ದೆಗಳು

ಸರಕಾರಕ್ಕೆ ಬೇಡಿಕೆ ಸಲ್ಲಿಕೆ
ಸಮುದಾಯ ಆಸ್ಪತ್ರೆಗೆ ಅಗತ್ಯ ಸವಲತ್ತುಗಳನ್ನು, ಅಗತ್ಯ
ಸಿಬಂದಿ ನೇಮಕ ಹಾಗೂ ಸಲಕರಣೆಗಳನ್ನು ಒದಗಿಸುವ ಕುರಿತು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಚುನಾವಣ ನೀತಿ ಸಂಹಿತೆಯಿಂದಾಗಿ ಸ್ವಲ್ಪಮಟ್ಟಿನ ವಿಳಂಬವಾಗಿದೆ. ಹಂತ ಹಂತವಾಗಿ ಎಲ್ಲ ಅಗತ್ಯಗಳನ್ನೂ ಪೂರೈಸಲಾಗುವುದು. ಜಿಲ್ಲೆಯ ಹೊಸ ತಾಲೂಕುಗಳಾದ ಕಡಬ ಹಾಗೂ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಗಳನ್ನು 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯಾಧಿಕಾರಿ

•ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next